ರೂಪ – ಸ್ವರೂಪಗಳ ಪರಿಪೂರ್ಣತೆಯಿಂದ ನಳನಳಿಸುವ ನಾಟ್ಯ ವೇದದ ಸಾಕ್ಷಾತ್ಕರಣವನ್ನು ಅನುಭವಿಸಬೇಕೆಂದಿರುವ ರಸಿಕರಿಗೆ ಇರುವ ರಾಜಪಥವೆಂದರೆ, ಅದು ಪದ್ಮಭೂಷಣ, ಭರತರಕ್ಷಾಮಣಿ, ಡಾ. ಪದ್ಮಾಸುಬ್ರಹ್ಮಣ್ಯಂ ಅವರ ನೃತ್ಯದ ದರ್ಶನ. ಅವರ ನಾಟ್ಯ ವೇದದಲ್ಲಿ ತತ್ವ – ಪ್ರಯೋಗಗಳೆರಡೂ ಪರಸ್ಪರ ಸ್ಪರ್ಧಿಸುತ್ತಾವೆ. ಏಕಕಾಲಕ್ಕೆ ಪಂಡಿತಪಾಮರರಿಬ್ಬರಿಗೂ ನಾಟ್ಯಸಮಾರಾಧನವನ್ನು ಉಣಬಡಿಸಬಲ್ಲ ಸವ್ಯಸಾಚಿ. ನಾಟ್ಯಶಾಸ್ತ್ರವು ಎಲ್ಲರಿಗೂ ಸಲ್ಲುವಂತಹದು ಎಂಬ ಸತ್ಯವನ್ನು ಮನಗಾಣಿಸಬಲ್ಲ ಕಲಾಋಷಿಕೆ, ಡಾ. ಪದ್ಮಾ ಅವರು ಸುಮಾರು ೩೦ ವರ್ಷಗಳ ಕಾಲ ದುಡಿದು ಶಾಸ್ತ್ರ-ಶಿಲ್ಪ-ಯುಕ್ತಿ-ಪ್ರಯೋಗ-ಅನುಭವ ಹಾಗೂ ಪ್ರತಿಭಾಸ್ಫುರಣಗಳ ಫಲವಾಗಿ, ನಾಟ್ಯಶಾಸ್ತ್ರೀಯವಾದ ಆಂಗಕದ ವೈಭವ- ವಿವರಗಳನ್ನು ಪುನಾರಚಿಸಿದ್ದಾರೆ.
ನಾಟ್ಯದಲ್ಲಿ ಸಾತ್ವಿಕದ ಸೂಕ್ಷ್ಮತೆ-ಸ್ಫುಟತೆ-ಸ್ಪಷ್ಟತೆಯ ಮೂಲಕ ಕಲೆಯನ್ನು ರಸಾರ್ದ್ರವಾಗಿಸುವ ಸಿದ್ಧಿಯು ಡಾ. ಪದ್ಮಾಸುಬ್ರಹ್ಮಣ್ಯಂ ಅವರ ತಪೋಭೂಮಿಕೆಯ ಸತ್ಫಲ, ಸ್ವತಃ ಅತ್ಯುನ್ನತಶ್ರೇಣಿಯ ಸಂಗೀತ ಕಲಾವಿದರೂ ಆದ ಡಾ. ಪದ್ಮಾ, ಸಂಗೀತ ಹಾಗೂ ನಾಟ್ಯದ ಅವಿನಾಭಾವವಾದ ಅಂತಃಸಂಬಂಧವನ್ನು ಸಹೃದಯರ ಅನುಭವಕ್ಕೆ ನೇರವಾಗಿ ತಂದುಕೊಡಬಲ್ಲ ಕುಶಲಕಲಾವಿದೆ. ವಿಶ್ವನಾಟ್ಯದ ಇತಿಹಾಸದಲ್ಲಿ ಭರತನೃತ್ಯದ ಹೊಸ ಶಕೆಯನ್ನು ಪ್ರವರ್ತಿಸಿದವರು. ನಾಟ್ಯಪ್ರಪಂಚದ ಮೂಲಮಾತೃಕೆಯಾದ ಭರತಮುನಿಯ ನಾಟ್ಯಶಾಸ್ತ್ರದ ನರ್ತನಾಧ್ಯಾಯಗಳನ್ನು ಪುನರ್ವ್ಯಾಖ್ಯಾನಿಸಿ ಅನುಷ್ಠಿಸಿದವರು. ಮಹಾಮುನಿ ಭರತನಿಗಾಗಿಯೇ ಭಾರತದಲ್ಲಿ ಮೊತ್ತಮೊದಲ ಭರತದೇವಾಲಯವನ್ನು ನಿರ್ಮಿಸುತ್ತಿರುವ ಕಲೋಪಾಸಕರು.
ಶ್ರೀರಾಮಚಂದ್ರಾಪುರಮಠದೊಂದಿಗಿನ ಡಾ. ಪದ್ಮಾಸುಬ್ರಹ್ಮಣ್ಯಂ ಅವರ ಕಲಾಯೋಗ ಇಂದು ನಿನ್ನೆಯದಲ್ಲ. ಶ್ರೀಮಠದ ಭಾರತೀಗುರುಕುಲದ ನಾಟ್ಯ ವಿಭಾಗವನ್ನು ಸ್ವತಃ ತಾವೇ ಗೆಜ್ಜೆಕಟ್ಟಿ ನರ್ತಿಸಿ ಉದ್ಘಾಟಿಸಿದವರು ಡಾ. ಪದ್ಮಾ. ೨೦೦೬ರ ಚಾತುರ್ಮಾಸ್ಯ, ವಿಶ್ವಗೋಸಮ್ಮೇಳನ, ಅಂಬಾಗಿರಿಯ ಕಾರ್ಯಕ್ರಮ, ಹೀಗೆ ಏಳೆಂಟು ಸಲ ಶ್ರೀಮಠದಲ್ಲಿ ನಾಟ್ಯ ಸೇವೆ ಸಲ್ಲಿಸಿದ ಪ್ರಪನ್ನರು. ಮಠದೊಂದಿಗಿನ ಅವರ ಆತ್ಮೀಯತೆಗೆ ಸಾಕ್ಷಿ ಶ್ರೀಮಠದ ಭಾರತೀಪ್ರಕಾಶನದಿಂದ ಪ್ರಕಟವಾದ ಪುಸ್ತಕ ‘ನಾಟ್ಯಾಮೃತವರ್ಷ’. ಡಾ. ಪದ್ಮಾ ಅವರ ರಂಗನಾಟ್ಯಾಯಮಾನತೆಯನ್ನು ಅಕ್ಷರೀಕರಿಸಿದ, ಸಾಹಿತ್ಯ ಲೋಕದ ವಿಶಿಷ್ಟ ಪ್ರಥಮ ಕೃತಿ. ಈ ಬಾರಿಯ ಚಾತುರ್ಮಾಸ್ಯದಲ್ಲಿ ಕನ್ನಡ – ಆಂಗ್ಲ ಆವೃತ್ತಿಯಲ್ಲಿ ಈ ಕೃತಿಯು ಲೋಕಾರ್ಪಣವಾಗಿದೆ.
ಇದೀಗ ಈ ಬಾರಿಯ ಶ್ರೀಮಠದ ಗೋಚಾತುರ್ಮಾಸ್ಯದಲ್ಲಿ ಡಾ. ಪದ್ಮಾಸುಬ್ರಹ್ಮಣ್ಯಂ ಅವರ ನಾಟ್ಯವೈಭವ ಕಾರ್ಯಕ್ರಮ ದಿನಾಂಕ 15.09.2016 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಡಾ. ಪದ್ಮಾ ಅವರ ಭರತನೃತ್ಯದ ಸ್ಮರಣೀಯ ಪ್ರದರ್ಶನದ ನಿರೂಪಣವನ್ನು ಶತಾವಧಾನಿ ಡಾ. ಆರ್. ಗಣೇಶರು ನಡೆಸಿಕೊಡಲಿದ್ದಾರೆ. ಗಿರಿನಗರದ ರಾಮಾಶ್ರಮದ ಸಭಾಂಗಣದಲ್ಲಿ ಜರುಗಲಿರುವ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ.
Discussion about this post