ಶಿವಮೊಗ್ಗ, ಸೆ.17: ಹಾವೇರಿಯಲ್ಲಿ ಅಕ್ಟೋಬರ್ 1 ರಂದು ನಡೆಯಲಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸಮಾವೇಶದ ಸಿದ್ದತಾ ಸಭೆಯನ್ನು ಸೆ.21ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಗೊಳ್ಳಿರಾಯಣ್ಣ ಬ್ರಿಗೇಡ್‌ನ ಜಿಲ್ಲಾ ಸಂಚಾಲಕ ಆರ್. ಶ್ರೀಧರ್ ಹುಲ್ತಿಕೊಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಸಿದ್ದತಾ ಸಭೆಯನ್ನು ಸಂಗೊಳ್ಳಿರಾಯಣ್ಣ ಬ್ರಿಗೇಡ್‌ನ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಾಂಸದ ವಿರುಪಾಕ್ಷಪ್ಪ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಅಹಿಂದ ರಾಜ್ಯಾಧ್ಯಕ್ಷ ಮುಕುಡಪ್ಪ, ನಿವೃತ್ತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್, ಬೆಂಗಳೂರಿನ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ, ಹಿಂದ ಖಜಾಂಚಿ ಬೆಳಗಾವಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಿಂದ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದರು.
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಹಾಗೂ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಯನ್ನಾಗಿಸುವುದು ಸಂಗೊಳ್ಳಿರಾಯಣ್ಣ ಬ್ರಿಗೇಡ್‌ನ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಈಸೂರು ಬಸವರಾಜ್ ಮಾತನಾಡಿ, ಅಹಿಂದ ಸಮಾವೇಶಗಳನ್ನು ನಡೆಸಿ ಹಾಗೂ ಅಹಿಂದ ವರ್ಗಗಳ ಮತಗಳನ್ನು ಪಡೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಅಹಿಂದವನ್ನು ಕಡೆಗಣಿಸಿದ್ದು, ಮತ್ತೇ ಹಿಂದ ವರ್ಗಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಆರಂಭಗೊಂಡಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್‌ಗೆ ತಾವು ಬೆಂಬಲಿಸುತ್ತಿದ್ದು, ಶೀಘ್ರವೇ ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇನೆಂದು ಸ್ಪಷ್ಟಪಡಿಸಿದರು.
ಜಿಪಂ ಸದಸ್ಯ ಕೆ.ಈ. ಕಾಂತೇಶ್ ಮಾತನಾಡಿ, ಸಂಗೊಳ್ಳಿರಾಯಣ್ಣ ಬ್ರಿಗೇಡ್‌ಗೆ ಸ್ಥಾಪನೆಯಿಂದ ಹಿಂದುಳಿದವರು, ಶೋಷಿತ ವರ್ಗದ ಜನರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಬಿ.ಎಸ್.ಯಡಿಯೂರಪ್ಪನ ರಾಯಣ್ಣ ಬ್ರಿಗೇಡ್ ಸಂಬಂಧಿಸಿದಂತೆ ಮೊದಲಿದ್ದ ಬಿಗಿ ನಿಲುವನ್ನು ಸಡಿಲಿಸಿದ್ದಾರೆ. ಮೊದಲು ಇದನ್ನು ವಿರೋಧಿಸುತ್ತಿದ್ದರು. ಬಿಜೆಪಿ ಕಾರ್ಯಕರ್ತರಿಗೆ ಹೋಗಬೇಡಿ ಎನ್ನುತ್ತಿದ್ದರು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಅವರು ಈ ಬಗ್ಗೆ ಮಾತನಾಡುತ್ತಿಲ್ಲ. ಸಣ್ಣಪುಟ್ಟ ಗೊಂದಲಗಳಿವೆಯಷ್ಟೆ ಇದೇನು ದೊಡ್ಡ ಸಮಸ್ಯೆಯೇನಲ್ಲ. ರಾಯಣ್ಣ ಬ್ರಿಗೇಡ್ ಸಮಾವೇಶದ ಉದ್ಘಾಟನೆಗೆ ಅವರನ್ನೇ ಕರೆತರಲಾಗುವುದು ಎಂದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತಗಳಿಸಿ ಪ್ರತಿಪಕ್ಷಗಳ ಬೆಂಬಲವಿಲ್ಲದೆ ಸ್ವಾತಂತ್ರ್ಯವಾಗಿ ಅಧಿಕಾರಕ್ಕೇರಲು ಹಾಗೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸುವುದೇ ಬ್ರಿಗೇಡ್‌ನ ಉದ್ದೇಶ ಹೊರತು ಬೇರೆ ಉದ್ದೇಶವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಪ್ಪನಹಳ್ಳಿ ರಾಮಣ್ಣ, ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಆರ್. ಲಕ್ಷ್ಮಣ್, ವೆಂಕ್ಯಾನಾಯಕ್, ಮೋಹನ್ ರೆಡ್ಡಿ, ಡಿ. ಸೋಮಸುದರಂ, ಶಂಕರ್ (ಗನ್ನಿ) ರೇಖಾ ಇನ್ನಿತರರು ಉಪಸ್ಥಿತರಿದ್ದರು.
ಮೂರುವರೆ ವರ್ಷದಲ್ಲಿ ಹಿಂದುಳಿದ ವರ್ಗಗಳ ಕಡೆಗಣನೆಯಾಗಿದೆ. ಅವರ ಅಭಿವೃದ್ಧಿಯಾಗಬೇಕು ಮತ್ತು ಬಿಜೆಪಿಯನ್ನು ಬಲಗೊಳಿಸಬೇಕು ಹಾಗೂ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಹಲವು ಉದ್ದೇಶಗಳಿಂದ ರಾಯಣ್ಣ ಬ್ರಿಗೇಡ್ ಸ್ಥಾಪನೆಯಾಗಿದೆ. ಕೆಲವು ನಿವೃತ್ತ ಐಎಎಸ್ ಅಧಿಕಾರಿಗಳು, ಮಠಾಧೀಶರುಗಳು ಬಿಜೆಪಿ ಬ್ಯಾನರ್‌ನಡಿ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ ಆದರೆ ಬಿಜೆಪಿಗೆ ಬೆಂಬಲ ಕೊಡುತ್ತಾರೆ ಇವರನ್ನೆಲ್ಲ ಒಂದೇ ವೇದಿಕೆಗೆ ತರುವ ಮತ್ತು ಆ ಮೂಲಕ ಪಕ್ಷ ಕಟ್ಟುವ ಕೆಲಸಕ್ಕಾಗಿ ರಾಯಣ್ಣ ಬ್ರಿಗೇಡ್ ಕೆಲಸ ಮಾಡಲಿದೆ.
– ಕೆ.ಈ. ಕಾಂತೇಶ್, ಜಿಪಂ ಸದಸ್ಯ
ಬೆಳಿಗ್ಗೆ 10ಗಂಟೆಗೆ ಸರ್ಕ್ಯೂಟ್ ಹೌಸ್ ವೃತ್ತದಿಂದ ಬಸ್ ನಿಲ್ದಾಣ, ಗೋಪಿ ವೃತ್ತದಿಂದ ಕುವೆಂಪು ರಂಗಮಂದಿರ ದವೆರೆಗೆ ಬೈಕ್ ರ‌್ಯಾಲಿ ನಡೆಯಲಿದೆ.
Discussion about this post