ಪಾಟ್ನಾ, ಅ.24: ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂಗಳು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವ ಮೂಲಕ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಕರೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಹಿಂದೂಗಳು ಜನಸಂಖ್ಯೆಯನ್ನು ವೃದ್ಧಿಸಿಕೊಳ್ಳುವತ್ತ ಗಮನ ಹರಿಸಬೇಕು. ದೇಶದ ಎಂಟು ರಾಜ್ಯಗಳಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಅವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಮುಸ್ಲಿಮರ ಜನಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ಅಲ್ಪಸಂಖ್ಯಾತರು ಎಂದು ನೀಡಲಾಗಿರುವ ಸವಲತ್ತುಗಳನ್ನು ಕೂಡ ಮರುಪರಿಶೀಲಿಸಬೇಕು ಎಂದು ಕರೆ ನೀಡಿರುವ ಅವರು, ಇದೇ ವೇಳೆ ಹಿಂದೂಗಳೂ ಸಹ ಜನಸಂಖ್ಯೆಯನ್ನು ವೃದ್ಧಿಸಿಕೊಳ್ಳಬೇಕು ಎಂದಿದ್ದಾರೆ.
ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಶೇ.10 ಇದ್ದ ಮುಸ್ಲಿಂ ಜನಸಂಖ್ಯೆ ಈಗ ಶೇ.24 ಗೆ ಏರಿದೆ. ಆದರೆ ಹಿಂದೂಗಳ ಜನಸಂಖ್ಯೆ 1947 ರಲ್ಲಿ ಶೇ. 90 ಇದ್ದು ಈಗ ಶೇ.76 ಗೆ ಇಳಿದಿದೆ ಎಂದವರು ಹೇಳಿದ್ದಾರೆ.
Discussion about this post