ಬೆಂಗಳೂರು, ಸೆ.16: ಪ್ರತಾಪ್ ಸಿಂಹ, ಪ್ರಮೋದ್ ಮುತಾಲಿಕ್, ವಿಶ್ವೇಶ್ವರ ಭಟ್ ಸೇರಿದಂತೆ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ದೋಷಿಗಳಿಗೆ ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಕುರಿತಂತೆ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿರುವ ಬೆಂಗಳೂರಿನ 50ನೆಯ ಸೆಶನ್ಸ್ ನ್ಯಾಯಾಲಯ, ದೋಷಿಗಳು ಎಂದು ನಿನ್ನೆ ಘೋಷಿಸಲಾಗಿದ್ದ ಅಪರಾಧಿಗಳಿಗೆ ಐದು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ತಲಾ ಏಳು ಸಾವಿರ ರೂ. ದಂಡ ವಿಧಿಸಿದೆ.
ಆರೋಪಿಗಳು ಅಪ್ರೂವರ್ ಆಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ ಅಪರಾಧಿಗಳು ಈಗಾಗಲೇ ಜೈಲಿನಲ್ಲಿ ಕಳೆದಿರುವ ಅವಧಿಯನ್ನು ಕಳೆದು ಉಳಿದ ಅವಧಿಗೆ ಜೈಲು ವಾಸ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಅಂದಿನ ಪತ್ರಕರ್ತ ಹಾಗೂ ಹಾಲಿ ಸಾಂಸದ ಪ್ರತಾಪ್ ಸಿಂಹ, ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಹಿಂದೂ ಮುಖಂಡರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ 13 ಮಂದಿ ಆರೋಪಿಗಳನ್ನು ದೋಷಿಗಳು ಎಂದು ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು.
ಈ ಪ್ರಕರಣವನ್ನು ಗಮನಿಸುವುದಾದರೆ, 14 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಝಾಕಿರ್ ಎಂಬಾತ ತನಿಖಾಧಿಕಾರಿಗಳ ಕೈಗೆ ಸಿಗದ ಕಾರಣ, 13 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.
ಶೋಯೆಬ್ ಅಹ್ಮದ್ ಮಿರ್ಜಾ, ಅಬ್ದುಲ್ ಹಕೀಮ್ ಜಮಾದಾರ್, ರಿಯಾಜ್ ಅಹ್ಮದ್ ಬ್ಯಾಹಟ್ಟಿ, ಮೊಹಮದ್ ಅಕ್ರಮ್, ಉಬೇದುಲ್ಲಾ ಬಹದ್ದೂರ್, ವಾಹಿದ್ ಹುಸೇನ್, ಜರ್ ಇಕ್ಬಾಲ್ ಶೋಲಾಪುರ್, ಮೊಹಮದ್ ಸಾಧಿಕ್, ಮೆಹಬೂಬ್ ಬಾಗುಲ್ ಕೋಟ, ಒಬೈದ್ ಉರ್ ರೆಹಮಾನ್, ನಯೀಮ್ ಸಿದ್ಧಿಕಿ, ಇಮ್ರಾನ್ ಅಹ್ಮದ್ ಹಾಗೂ ಸಯ್ಯದ್ ತಾಂಜಿಮ್ ಅಹ್ಮದ್ ಈ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ.
Discussion about this post