ಕನ್ನಡ ಚಿತ್ರರಂಗದ ಪಾಲಿಗಿದು ಮಲ್ಟಿ ಸ್ಟಾರ್ ಸಿನಿಮಾಗಳ ಜಮಾನ. ಎಂ.ಎನ್.ಕೆ. ಮೂವೀಸ್ ಲಾಂಛನದಲ್ಲಿ, ಶ್ರೀಮತಿ ಭಾರತಿ ದೇವಿ ಅರ್ಪಿಸಿರುವ, ಉಪೇಂದ್ರ ಹಾಗೂ ಸುದೀಪ್ ಒಟ್ಟಾಗಿ ನಟಿಸಿರುವ ಚಿತ್ರ `ಮುಕುಂದ ಮುರಾರಿ’. ಕಳೆದ ಆರೇಳು ತಿಂಗಳಿನಿಂದ ಸದ್ದು ಗದ್ದಲವಿಲ್ಲದೆ ಚಿತ್ರೀಕರಣ ಪೂರೈಸಿದ್ದ ಈ ಚಿತ್ರ ಈಗ ಬಿಡುಗಡೆಗೆ ತಯಾರಾಗಿದೆ. ಇದೇ ತಿಂಗಳ 28ರಂದು `ಮುಕುಂದ ಮುರಾರಿ’ ಜೋಡಿ ಥಿಯೇಟರಿನಲ್ಲಿ ರಾರಾಜಿಸಲಿದೆ.
ಈ ಚಿತ್ರದಲ್ಲಿ ಉಪೇಂದ್ರ ಮತ್ತು ಸುದೀಪ್ ಅವರ ಅವರ ಅಪರೂಪದ ಕಾಂಬಿನೇಷನ್ ಇರುವುದರಿಂದ ಪ್ರೇಕ್ಷಕ ವಲಯದಲ್ಲೂ ಸಾಕಷ್ಟು ಕುತೂಹಲ ಮೂಡಿತ್ತು. ಇನ್ನೊಂದು ವಾರದಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆಯಾಗಲಿದ್ದು, ಕುತೂಹಲ ಮತ್ತಷ್ಟು ಹೆಚ್ಚಾಗಲಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕನ್ನಡದ ಮತ್ತೊಬ್ಬ ಸಂಗೀತ ನಿರ್ದೇಶಕ ಹರಿಕೃಷ್ಣ ತಮ್ಮ ಡಿ ಬೀಟ್ಸ್ ಆಡಿಯೋ ಸಂಸ್ಥೆಯ ಮೂಲಕ `ಮುಕುಂದ ಮುರಾರಿ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಒಬ್ಬ ಸಂಗೀತ ನಿರ್ದೇಶಕನ ಚಿತ್ರದ ಹಾಡುಗಳನ್ನು ಮತ್ತೊಬ್ಬರು ಖರೀದಿಸಿರುವುದು ಚಿತ್ರರಂಗದ ಪಾಲಿಗೆ ಉತ್ತಮ ಬೆಳವಣಿಗೆಯೂ ಹೌದು ಜೊತೆಗೆ ಇದರಿಂದ ಆ ಹಾಡುಗಳ ಗುಣಮಟ್ಟದ ಬಗ್ಗೆ ಕೂಡಾ ಗೊತ್ತಾಗುತ್ತದೆ.
ಹಿಂದಿಯ ಓ ಮೈ ಗಾಡ್ ಚಿತ್ರದ ಕನ್ನಡ ಅವತರಣಿಕೆ ಇದಾಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿ ಎಲ್ಲರಿಗೂ ಇಷ್ಟವಾಗುವಂತೆ `ಮುಕುಂದ ಮುರಾರಿ’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಂದ ಕಿಶೋರ್. ವಿಕ್ಟರಿ, ಅಧ್ಯಕ್ಷದಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಂದ ಕಿಶೋರ್ `ಮುಕುಂದ ಮುರಾರಿ’ ಕೂಡಾ ಅದೇ ರೀತಿಯ ಗೆಲುವನ್ನು ತಂದುಕೊಡಲಿದೆ ಎಂಬ ನಂಬಿಕೆಯಲ್ಲಿದ್ದಾರೆ.
ಎಂ.ಎನ್. ಕುಮಾರ್ ನಿರ್ಮಾಣದ `ಮುಕುಂದ ಮುರಾರಿ’ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದಾರೆ. ಉಪೇಂದ್ರ ಮತ್ತು ಸುದೀಪ್ ಅವರೊಂದಿಗೆ ನಿಖಿತಾ, ಭಾವನಾ, ರಚಿತಾರಾಮ್, ಅವಿನಾಶ್, ದೇವರಾಜ್, ರವಿಶಂಕರ್, ಪ್ರಕಾಶ್ ಬೆಳವಾಡಿ, ತಬಲಾ ನಾಣಿ, ಇಶಿತಾ ವ್ಯಾಸ್, ಶಿವರಾಮ್, ಮೋಹನ್ ಜುನೇಜ, ಡಿಂಗ್ರಿ ನಾಗರಾಜ್, ಕುರಿ ಪ್ರತಾಪ್ ಮುಂತಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ.
ಸುಧಾಕರ್ ಎಸ್. ರಾಜ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಯೋಗಾನಂದ ಮುದ್ದಾನ್ ಸಂಭಾಷಣೆ, ಡಾ. ಕೆ. ರವಿವರ್ಮ ಸಾಹಸ, ಮುರಳಿ, ಎ. ಹರ್ಷ ನೃತ್ಯ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಅರುಣ್ ಕುಮಾರ್ ಸಹ ನಿರ್ದೇಶನ, ನರಸಿಂಹ ಜಾಲಹಳ್ಳಿ ನಿರ್ಮಾಣ ಮೇಲ್ವಿಚಾರಣೆ `ಮುಕುಂದ ಮುರಾರಿ’ ಚಿತ್ರಕ್ಕಿದೆ.
Discussion about this post