ಶಾಹ್ದೋಲ್: ಸೆ:11: ಪಾಟ್ನಾದ ಘಟನೆ ಮರೆಯುವ ಮುನ್ನವೇ, ದೇಶದ ಜನರ ಮನ ಕಲುಕುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶಲ್ಲಿ ಆ್ಯಂಬುಲೆನ್ಸ್ ಸಿಗದ ಕಾರಣ ವ್ಯಕ್ತಿಯೊಬ್ಬ ತನ್ನ ಅತ್ತೆ ಶವವನ್ನು 20 ಕಿ.ಮೀ. ದೂರ ಸೈಕಲ್ನಲ್ಲಿ ಸಾಗಿಸಿದ ಘಟನೆ ನಡೆದಿದೆ.
ಶವ ಸಾಗಿಸಲು ಹಣವಿಲ್ಲದೆ ಪತ್ನಿಯ ಮೃತದೇಹವನ್ನು ಹೊತ್ತು 10 ಕಿಲೋಮೀಟರ್ ನಡೆದ ಪತಿ, ಆ್ಯಂಬುಲೆನ್ಸ್ ಚಾಲಕನೊಬ್ಬ ನಡುರಸ್ತೆಯಲ್ಲೇ ಕೈಬಿಟ್ಟ ಕಾರಣ ಮಗಳ ಶವವನ್ನು 5 ಕಿ.ಮೀ.ವರೆಗೂ ಹೊತ್ತು ಸಾಗಿದ ತಂದೆ, ತಾಯಿಯ ಅಂತ್ಯಕ್ರಿಯೆ ನೆರವೇರಿಸಲು ಭಿಕ್ಷೆ ಬೇಡಿದ ಮಗಳು, ಆ್ಯಂಬುಲೆನ್ಸ್ಗೆ ನೀಡಲು ಹಣವಿಲ್ಲದೇ ಆಸ್ಪತ್ರೆಯಲ್ಲಿ ರಾತ್ರಿಯೆಲ್ಲಾ ಮಗಳ ಮೃತದೇಹ ಕಾದ ತಾಯಿ, ಈ ಹೃದಯ ವಿದ್ರಾವಕ ಘಟನೆಗಳು ಕಣ್ಮುಂದೆ ಇರುವಾಗಲೇ ಇಂತಹ ಮತ್ತೊಂದು ಘಟನೆ ನಡೆದಿದ್ದು, ಜನರಿಗಿರುವ ಮಾನವೀಯ ಮೌಲ್ಯಗಳನ್ನು ಪ್ರಶ್ನೆ ಮಾಡುವಂತೆ ಮಾಡಿದೆ.
ಹೌದು, ಮಧ್ಯಪ್ರದೇಶದ ಶಾಹ್ದೋಲ್ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ರಾಮ್ ಭಾಯಿ (70) ಎಂಬುವರು ಜಿಲ್ಲೆಯ ಕಥಾರಿ ಗ್ರಾಮದಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದರು. ಈ ವೇಳೆ ಅನಾರೋಗ್ಯದಿಂದ ಮಗಳ ಮನೆಯಲ್ಲಿ ರಾಮ್ ಭಾಯಿ ಸಾವನ್ನಪ್ಪಿದ್ದಾಳೆ.
ನಂತರ ಅಳಿಯ ಗೋರೆ ಸಿಂಗ್ ಅತ್ತೆಯ ಮೃತದೇಹವನ್ನು ಪಕ್ಕದ ಅಮಿಲಿಹಾ ಗ್ರಾಮ (ರಾಮ್ ಭಾಯಿಯ ಸ್ವಂತ ಗ್ರಾಮ) ಕ್ಕೆ ಸಾಗಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಆ್ಯಂಬುಲೆನ್ಸ್ ಹಾಗೂ ಬೇರೆ ವಾಹನಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ, ಯಾವುದೇ ವಾಹನಗಳು ಗ್ರಾಮಕ್ಕೆ ಬಂದಿಲ್ಲ. ಇದರಿಂದಾಗಿ ಕೊನೆಗೆ ಗೋರೆ ಸಿಂಗ್ ಅತ್ತೆ ರಾಮ್ ಭಾಯಿ ಶವವನ್ನು ಸೈಕಲ್ನಲ್ಲೇ ಅಮಿಲಿಹಾ ಗ್ರಾಮಕ್ಕೆ ಸಾಗಿಸಿದ್ದಾರೆ. ಈ ವೇಳೆ ಗೋರೆ ಸಿಂಗ್ ಪತ್ನಿ, ರಾಮ್ ಭಾಯಿ ಮಗಳು ಸಹ ಜೊತೆಗಿದ್ದು, ಕಣ್ಣೀರು ಹಾಕುತ್ತಾ ತಾಯಿ ಶವವನ್ನು ಗ್ರಾಮಕ್ಕೆ ಕೊಂಡೊಯ್ದಿದ್ದಾರೆ.
ಇನ್ನು, ಈ ಘಟನೆ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎ.ಪಿ. ದ್ವಿವೇದಿ ಹೇಳಿದ್ದಾರೆ.
ಆದ್ರೆ, ಘಟನೆ ನಡೆದ ದಿನವೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಶಾಹ್ದೋಲ್ ಜಿಲ್ಲೆಗೆ ಭೇಟಿ ನೀಡಿದ್ದರು. ಬುಡಕಟ್ಟು ಜನರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಘೋಷಣೆ ಮಾಡಿದ್ದರು.
Discussion about this post