Read - 3 minutes
ಕೊಲಂಬಸ್: ಅಮೆರಿಕಾದ ಕೊಲಂಬಸ್ ನಗರದ ಭಾರತೀಯ ಹಿಂದೂ ದೇವಾಲಯದಲ್ಲಿ ನಾಲ್ಕು ದಿನಗಳ ಕಾಲ ಕಳೆದ ವಾರ ನಡೆದ ಶ್ರೀರಾಧಾ ಕೃಷ್ಣ ವಾಸುದೇವ ಮಹಾಯಜ್ಞ ಆಯೋಜನೆ ಮಾಡಲಾಗಿತ್ತು.
ವರದಿ: ಶಂಕರ್ ಅಜ್ಜಂಪುರ, ಒಮಾಹಾ, ಅಮೆರಿಕಾ
ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸದವಕಾಶ ನನ್ನದಾಗಿತ್ತು. ಇದು ಸುದರ್ಶನ ಹೋಮದ ಕ್ರಮವನ್ನೇ ಆಧರಿಸಿದ ಕಲಾಪವಾಗಿದ್ದರೂ ಇದನ್ನು ಆಯೋಜಿಸಿದ ಭಕ್ತಾದಿಗಳಲ್ಲಿ ಹೆಚ್ಚಿನವರು ಗುಜರಾತಿನವರಾದ್ದರಿಂದ ಮೇಲ್ಕಂಡಂತೆ ಹೆಸರಿಸಲಾಗಿತು.್ತ
ದೇವನೊಬ್ಬ ನಾಮ ಹಲವು ಎಂಬ ಪ್ರಚಲಿತ ನುಡಿಗಟ್ಟಿನ ಮುಂದುವರೆದ ಭಾಗವಾಗಿ ಕಾಣುವ ದಕ್ಷಿಣೋತ್ತರ ರಾಜ್ಯಗಳ, ಪೂರ್ವ ಪಶ್ಚಿಮ ರಾಜ್ಯಗಳ ಪೂಜಾವಿಧಿಗಳಲ್ಲೂ ವೈವಿಧ್ಯತೆ ಕಾಣಬರುತ್ತದೆ. ಭಾರತದಲ್ಲಿರುವಾಗ ಇಂಥ ಅವಕಾಶ ಕಾಣಸಿಕ್ಕದು ಮತ್ತು ಅದು ಅವಶ್ಯವೂ ಅಲ್ಲ.
ಭಾರತದ ಪ್ರತಿ ರಾಜ್ಯದಲ್ಲಿ ಇರುವ ಪೂಜಾ ಪರಂಪರೆಗಳು ಆಯಾ ರಾಜ್ಯದ ವಿಶೇಷದ ಭಾಗವಾಗಿ ಮಾತ್ರ ಪರಿಗಣಿತವಾಗುತ್ತದೆಯೇ ವಿನಾ, ಅದನ್ನೊಂದು ಸಂಕಲಿತ ರೂಪದಲ್ಲಿ ನೋಡಲು ದೊರೆಯುವುದು ಅಪರೂಪ. ಈ ಕಾರಣಗಳಿಂದಾಗಿ ಇಲ್ಲಿ ನಡೆದ ಕಾರ್ಯಕ್ರಮವು ಹಿಂದೂಸ್ತಾನಿ, ಕರ್ನಾಟಕ ಸಂಗೀತಗಳ ಜುಗಲ್ ಬಂದಿ ಕಾರ್ಯಕ್ರಮದಂತೆ ಇತ್ತು. ಏಕೆಂದರೆ ಭಾರತದ ಎಲ್ಲ ರಾಜ್ಯಗಳ ನಿವಾಸಿಗಳು ನೆಲೆಯಾಗಿರುವ ಇಂಥ ಎಡೆಗಳಲ್ಲಿ, ಆಯಾ ರಾಜ್ಯಗಳಲ್ಲಿ ಪ್ರಚಲಿತವಿರುವ ಆಚರಣೆಯ ವಿಧಾನಗಳನ್ನು ಅನುಸರಿಸಬೇಕಾದುದು ಅನಿವಾರ್ಯವಾಗುತ್ತದೆ. ಅಂತೆಯೇ ದೈವಸನ್ನಿಧಿಗಳು, ಪೂಜಾ ವ್ಯವಸ್ಥೆ ಕೂಡ. ಕೊಲಂಬಸ್‌ನ ಭಾರತೀಯ ಹಿಂದೂ ದೇವಾಲಯದಲ್ಲಿ ಗಣಪತಿ, ಶಿವ, ಅಯ್ಯಪ್ಪ, ವೆಂಕಟೇಶ್ವರ, ವೈಷ್ಣೋದೇವೀ, ಸುಭದ್ರಾ, ಬಲಭಧ್ರ ಮತ್ತು ಜಗನ್ನಾಥ, ಶ್ರೀರಾಮ ಮುಂತಾಗಿ ಪ್ರತ್ಯೇಕ ಕೋಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದೆ.
ಪ್ರತಿ ವಾರವೂ ಆಯಾ ದೇವತೆಗಳನ್ನು ಉದ್ದೇಶಿಸಿ, ಒಂದೊಂದು ದಿನ ವಿಶೇಷ ಪೂಜೆಗಳು ಜರುಗುತ್ತವೆ. ಪ್ರತಿ ವರ್ಷವೂ ನಾಲ್ಕಾರು ಉತ್ಸವ, ಯಜ್ಞಗಳನ್ನು ಆಚರಿಸುವ ಪದ್ಧತಿಯಂತೆ ನಡೆದ ಈ ಹವನದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಪುರೋಹಿತರು, ಋತ್ವಿಜರು ಪಾಲ್ಗೊಂಡಿದ್ದರು. ಉತ್ತರ ಭಾರತದಲ್ಲಿ ಮಂತ್ರಗಳನ್ನು ಪಠಿಸುವ ಪದ್ಧತಿಯು ದಕ್ಷಿಣಕ್ಕಿಂತ ಭಿನ್ನವಾಗಿರುತ್ತದೆ. ಆದರೆ ಮಂತ್ರಗಳು ಮಾತ್ರ ಒಂದೇ. ನಾಲ್ಕು ವೇದಗಳಲ್ಲಿನ ಪೂಜಾರಾಧನೆಯ ಮಂತ್ರಗಳನ್ನು ಆರಿಸಿಕೊಂಡು, ಅವುಗಳನ್ನು ಸೂಕ್ತವಾಗಿ ಸಂಯೋಜಿಸಿ, ನಡೆಸಿದ ಪೂಜಾ ಕ್ರಮವನ್ನು, ಪೌರೋಹಿತ್ಯದ ಪರಿಚಯವುಳ್ಳವರು ಮಾತ್ರವೇ ಆಸ್ವಾದಿಸುವಂಥ ವಾತಾವರಣ ಎಲ್ಲೆಡೆಯಲ್ಲೂ ಇರುವುದು ಸಾಮಾನ್ಯ.
ವಿದೇಶದಲ್ಲಿ ನೆಲೆಸಿರುವ ಕಾರಣಕ್ಕೆ, ಭಾರತೀಯ ಸಂಸ್ಕೃತಿಯ ಬೇರುಗಳು ಕಡಿತವಾಗಬಾರದೆಂಬ ಭಾವ, ಭಾರತಕ್ಕಿಂತ ವಿದೇಶೀ ನೆಲದಲ್ಲಿ ಬಾಧಿಸುವುದು ಸ್ವಾಭಾವಿಕವೇ ಸರಿ. ಅದೇ ರೀತಿ, ಇದನ್ನು ಸರಿತೂಗಿಸುವಂತೆ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಉತ್ತಮ ಬೆಳವಣಿಗೆಯೆಂದರೆ, ತಾವು ಮಾಡುತ್ತಿರುವ ಕಲಾಪದ ವಿವರಗಳನ್ನು ಕಾರ್ಯಕ್ರಮದ ನಡುವೆಯೇ ನೀಡುವಂಥ ವ್ಯವಸ್ಥೆ ಇಲ್ಲಿತ್ತು. ಎಂಟು ಹವನ ಕುಂಡಗಳು ಹಾಗೂ ಒಂದು ಪ್ರಧಾನ ಕುಂಡಗಳಲ್ಲಿ ನಡೆಸಲಾದ ಈ ಕಾರ್ಯಕ್ರಮದ ಆಚಾರ್ಯತ್ವವನ್ನು ವಹಿಸಿದ್ದ ಶ್ರೀಪ್ರಕಾಶ ಚತುರ್ವೇದಿಯವರು ಏಕಕಾಲದಲ್ಲಿ ಎಲ್ಲ ಉಪಕುಂಡಗಳ ಆಚಾರ್ಯರಿಗೆ ಮಾರ್ಗದರ್ಶನ ಮಾಡಿದರು.
ಹೆಸರಿಗೆ ಮಾತ್ರವೇ ಚತುರ್ವೇದಿಯಾಗಿರದ ಅವರು ಸಂಸ್ಕೃತ, ಹಿಂದಿ ಮತ್ತು ಇಂಗ್ಲೀಷಿನಲ್ಲಿ ನೀಡುತ್ತಿದ ಸರಳ ವಿವರಣೆಗಳು ಜನಸಾಮಾನ್ಯರಿಗೂ ತಲುಪುವಂತಿತ್ತು. ಭಾರತದ ವಿವಿಧ ನಗರಗಳಿಂದ ಬಂದಿದ್ದ, ಇಲ್ಲಿನ ನಿವಾಸಿಗಳ ತಂದೆ-ತಾಯಿಯರು, ಬಂಧುಗಳಿಗೆ ಇದೊಂದು ಅಪೂರ್ವ ಅವಕಾಶ ಎನ್ನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಪೂಜಾ ಕಾರ್ಯಕ್ರಮವನ್ನು ರಂಜನೀಯವಾಗಿಸಲು, ಹೋಮಾದಿಗಳ ನಡುವಣ ಅಂತರದಲ್ಲಿ ಉದ್ದಿಷ್ಟ ದೇವತೆಗಳ ಬಗ್ಗೆ ಲಘು ಉಪನ್ಯಾಸ, ಡೋಲಕ್ ಸಹಿತ ಭಜನೆಗಳನ್ನು ಸೇರಿಸಲಾಗಿತ್ತು.
ಪ್ರತಿದಿನದ ಪ್ರಸಾದಕ್ಕೆಂದು ಸೇವಾವ್ರತಿಗಳು ತಾವಾಗಿಯೇ ತಮ್ಮಿಂದಾಗುವಷ್ಟು ಕೆಲಸಗಳನ್ನು ನಿರ್ವಹಿಸುತ್ತಿದ್ದರು. ತರಕಾರಿ ಹೆಚ್ಚುವುದು, ಬಡಿಸುವುದು, ಆಹಾರ ತಯಾರಿಸುವುದು ಮುಂತಾದ ಚಟುವಟಿಕೆಗಳಲ್ಲಿ ಮಡಿ, ಮೈಲಿಗೆಯ ಉಸಾಬರಿಯಿಲ್ಲದೇ, ಜಾತಿ ಭೇದಗಳ ವ್ಯತ್ಯಾಸವಿಲ್ಲದೇ, ಸಾಧ್ಯವಿದ್ದಷ್ಟೂ ಭಾರತೀಯ ಉಡುಗೆ ತೊಡುಗೆಗಳನ್ನೇ ಧರಿಸಿದ ಜನರಿಗೆ ಭಕ್ತಿಯೇ ಪ್ರಧಾನವೆಂಬ ಭಾವನೆಯನ್ನು ಮೂಡಿಸಿರುವ ದೇವಾಲಯವು ತನ್ನ ನೈಜ ಅರ್ಥದಲ್ಲಿ ಕೆಲಸಮಾಡುತ್ತಿದೆ. ಪೂಜಾ ಪರಿಕರಗಳು, ಹೋಮ ದ್ರವ್ಯಗಳು, ಹವನ ಸಾಮಗ್ರಿಗಳು ಮುಂತಾಗಿ ಯಾವುದಕ್ಕೂ ಕೊರತೆಯಿಲ್ಲದಂತೆ, ಸುಂದರ ಪರಿಸರದಲ್ಲಿ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಉತ್ತರ, ದಕ್ಷಿಣ ಭಾರತೀಯರು ತಮ್ಮ ಸಂಸ್ಕೃತಿಗಳನ್ನು ಮುಖಾಮುಖಿಯಾಗಿಸಿಕೊಂಡು, ಅವುಗಳ ಸ್ವಾರಸ್ಯವನ್ನು ಅರ್ಥಮಾಡಿಕೊಳ್ಳುವಂತೆ ಆಯೋಜಿಸಿದ್ದ ಪರಿ ಮೆಚ್ಚುವಂತಿತ್ತು.
ದೇವಾಲಯವನ್ನು ಹೊರಗಿನಿಂದ ನೋಡುವಾಗ, ನಮ್ಮ ಸಾಂಪ್ರದಾಯಿಕ ಮಂದಿರಗಳನ್ನು ನೋಡಿದಂತಾಗುವುದಿಲ್ಲ. ಏಕೆಂದರೆ ಇಟ್ಟಿಗೆಯ ಕೋಟೆಯಂತೆ ಕಾಣುವ ಈ ಕಟ್ಟಡಕ್ಕೆ ದೇವಾಲಯ ಗೋಪುರ, ವಿವಿಧ ಮೂರ್ತಿಗಳ ಅಲಂಕಾರಗಳಾವುವೂ ಇಲ್ಲ. ೨೨ ಎಕರೆ ವಿಸ್ತಾರದಲ್ಲಿ ಹರಡಿರುವ ಈ ಮಂದಿರವನ್ನು ಬರುವ ವರ್ಷಗಳಲ್ಲಿ ಪ್ರಮುಖ ಆಕರ್ಷಣೆಯಾಗುವಂತೆ ಮಾಡುವ ಯೋಜನೆಯಿದೆ ಎಂದು ದೇವಾಲಯ ಸಂಚಾಲಕ, ವೃತ್ತಿಯಿಂದ ಹೃದಯರೋಗ ತಜ್ಞರಾಗಿರುವ ಪಾಂಡೆ ತಿಳಿಸಿದರು. ಭಾರತೀಯರ, ಅದರಲ್ಲೂ ಹಿಂದೂ ಜನರ ಸಂಖ್ಯೆ ಪ್ರತಿವರ್ಷ ಅಮೆರಿಕಾದ ಎಲ್ಲ ರಾಜ್ಯಗಳಲ್ಲೂ ವೃದ್ಧಿಯಾಗುತ್ತಿರುವುದರಿಂದ, ಭಾರತೀಯ ಸಂಸ್ಕೃತಿಯ ಪ್ರಚಾರ-ಪ್ರಸಾರಗಳಿಗೆ ಒತ್ತು ನೀಡಿ, ಸಂಘಟಿತವಾಗಿ ಕೆಲಸಮಾಡುವ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಹಿಂದೂ ದೇಗುಲಗಳಿಗೆ ಇದೆ ಮತ್ತು ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದಾಗಿ ಪಾಂಡೆ ತಿಳಿಸಿದರು.
Discussion about this post