ಆಧ್ಯಾತ್ಮಿಕ ಚಿಂತಕರಿವರು, ಮಹಾಆಧ್ಯಾತ್ಮಿಕ ಲೋಕ ಇವರೊಳಗಿದೆ, ಆಧ್ಯಾತ್ಮಿಕ ಶಕ್ತಿ ಸಂಪನ್ನರು ಎಂದೆಲ್ಲಾ ಕೆಲವರ ಗುಣವಿಶೇಷಗಳನ್ನು ಹೆಸರಿನೊಂದಿಗೆ ಹಾಕಿಕೊಳ್ಳುವುದುಂಟು ಅಲ್ಲದೆ ನಾವೂ ನೋಡುತ್ತೇವೆ.
ಏನಿದು ಆಧ್ಯಾತ್ಮ? ನೀವೇ ಅವರನ್ನು ಕೇಳಿನೋಡಿ.ಆಗ ಗೊತ್ತಾಗುತ್ತದೆ. ಪಾರಮಾರ್ಥಿಕ ಚಿಂತನೆ ಮಾಡುವುದೇ ಆಧ್ಯಾತ್ಮಿಕ, ದೇವರ ಚಿಂತನೆಯಲ್ಲಿರುವುದೇ ಆಧ್ಯಾತ್ಮಿಕ ಎನ್ನಬಹುದು.ಅಥವಾ ಸರಿಯಾದ ಅರ್ಥವನ್ನು ಹೇಳಬಹುದು.ಆದರೆ ಹೆಚ್ಚಿನವರು ಆಧ್ಯಾತ್ಮಿಕವನ್ನು ತಿಳಿದುಕೊಂಡ ರೀತಿಯೇ ಬೇರೆ ಅಥವಾ ವಿವರಣೆ ನೀಡುವ ಪರಿಯೇ ಬೇರೆ.ಅದೇನೇ ಇರಲಿ, ನಾವು ಆಧ್ಯಾತ್ಮಿಕದ ಮೂಲ ವಿಚಾರಕ್ಕೆ ಬರೋಣ.
ಆಧ್ಯಾತ್ಮಿಕ,ಆಧಿದೈವಿಕ,ಆಧಿಭೌತಿಕಗಳ ಸಮಷ್ಟಿ
‘ಆಧ್ಯಾತ್ಮಿಕ’ ಎಂಬ ಒಂದೇ ಪದದಲ್ಲಿ ಕರೆಯುವುದು ವಾಡಿಕೆ.
ಆಧ್ಯಾತ್ಮಿಕವನ್ನು ಇನ್ನಷ್ಟು ಒಳಹೊಕ್ಕಿ ನೋಡಿದರೆ ಅಲ್ಲಿ-
ಆದಿಬಲವೃತ್ತ, ಜನ್ಮ ಬಲವೃತ್ತ, ದೋಷ ಬಲ ವೃತ್ತಗಳೆಂಬ ಮೂರು ರೂಪಗಳಿವೆ.
ಆದಿ ಬಲ ವೃತ್ತವು ಶುಕ್ರ ಶೋಣಿತಗಳಿಂದುಂಟಾದ ದೋಷ . ಇದರ ಫಲದಲ್ಲಿ ಕುಷ್ಟಾದಿ ವ್ಯಾಧಿಗಳು.
ಜನ್ಮ ಬಲ ವೃತ್ತದಲ್ಲಿ ಮಾತೃ ಸಂಬಂಧಿತ ದೋಷಗಳು.ವ್ಯಕ್ತಿಯು ಗರ್ಭಾವಸ್ಥೆಯಲ್ಲಿರುವಾಗ ತಾಯಿಯ ಅಪಥ್ಯಾದಿಗಳು, ದುಃಖ ದುಮ್ಮಾನಾದಿಗಳು, ನಡತೆಯಲ್ಲಿನ ಕ್ರೌರ್ಯಾದಿಗಳ ದೋಷ ಫಲವು ಮಗುವಿನ ಮೇಲೆ ದುಷ್ಪರಿಣಾಮ ಬೀರಿ ಉಂಟಾಗುವ ದೋಷಗಳು.
ದೋಷಬಲವೃತ್ತ : ಇದು ವ್ಯಕ್ತಿ ಸ್ವಭಾವಗಳಾದ ಭಯ, ಅಸಹನೆ, ನಿಂದನೆ ಹಾಗೂ ದುರಾಚಾರಗಳ ಫಲ ಸ್ವರೂಪಗಳು.
ಆದಿದೈವಿಕ:
ಇದರಲ್ಲಿ ಕಾಲ ಬಲ, ದೈವಬಲ, ಸ್ವಭಾವ ಬಲಗಳೆಂಬ ಮೂರುವಿಧಗಳು.
ಕಾಲಬಲವು ಋತುಧರ್ಮ,ಹವಾಮಾನ ವೈಪರೀತ್ಯ ಗಳಿಂದ ಉಂಟಾಗುವ ರೋಗಗಳು.
ದೈವಬಲವು ದೇಶದ್ರೋಹ, ದೇವನಿಂದನೆ, ಪರನಿಂದನೆ, ಅವಮಾನಿಸುವಿಕೆಗಳಿಂದುಂಟಾಗುವ ದೋಷಗಳು.
ಸ್ವಭಾವ ಬಲವು ಹಸಿವು,ನೀರಡಿಕೆ,ಮುಪ್ಪು ಇತ್ಯಾದಿಗಳಿಂದ ಉಂಟಾಗುವ ದೋಷಗಳು.
ಆದಿಭೌತಿಕ:
ಇದು ರೋಷ, ಹೊಡೆದಾಟ, ಪ್ರಾಣಿಗಳ ಧಾಳಿ ಇತ್ಯಾದಿಗಳಿಂದ ಉಂಟಾಗುವ ಅವಘಡ ಅಪಘಾತ ದೋಷಗಳು.
ಇವೆಲ್ಲವೂ ಮನುಷ್ಯನೊಳಗೇ ಇರುವಂತಹ ದೋಷಗಳು.ಈ ಎಲ್ಲಾ ಚಿಂತನೆಯನ್ನೇ ಆಧ್ಯಾತ್ಮ ಚಿಂತನೆ ಎಂದರು. ಈ ದೂಷಗಳು ಯಾವ ರೀತಿಯಾಗಿ ಕೆಲಸಮಾಡುತ್ತವೆ ಎಂದರೆ, ಮನುಷ್ಯನನ್ನು ಮಾನಸಿಕ ಅಸಮತೋಲನಕ್ಕೆ ಒಳಪಡಿಸಿ ಬುದ್ಧಿಯನ್ನು ವಿಕೃತಗೊಳಿಸುತ್ತವೆ. ಬುದ್ಧಿ ವಿಕಲ್ಪಕ್ಕೆ ಹೋದಾಗ ನಿಯಂತ್ರಣ ತಪ್ಪಿದ ವಾಹನದಂತಾಗುತ್ತದೆ.ಏನು ಬೇಕಾದರೂ ಆಗಬಹುದು.
ಇದಕ್ಕಾಗಿ ನಮ್ಮ ಹಿರಿಯರು ಪಾರಮಾರ್ಥಿಕ ( ಕಾಯ ರಹಿತ ಶಕ್ತಿಗಳು – ದೇವತೆಗಳು) ಚಿಂತನೆಗೆ ಹೋದರು.ಅದನ್ನೇ ದೇವತೆಗಳೆಂದರು.ಇದಕ್ಕಾಗಿ ದೇವತಾ ಪೂಜೆ,ಯಾಗ ಯಜ್ಞಾದಿಗಳು, ತಪೋ ಸಿದ್ಧಿಗಳು, ಧ್ಯಾನ ತಲ್ಲೀನತೆಗಳು, ಭಾಗವತಾದಿ ಹಿಂದೆ ನಡೆದ ಪುರಾಣ ಕಥಾ ಶ್ರವಣದ ಮೂಲಕ ಬುದ್ಧಿಯನ್ನು ಹತೋಟಿಗೆ ತರುವ ಮಾರ್ಗವನ್ನು ತೋರಿಸಿದರು.ವಿದ್ಯಾಹೀನರಿಗೆ ದೇವರು,ದೈವಗಳ ಭಯವನ್ನು ಹುಟ್ಟಿಸಿದರು.ಕಣ್ಣು ಹೋದೀತು, ಕಾಲು ಹೋದೀತು ಎಂಬ ಭಯ ಹುಟ್ಟಿಸಿದರು. ನಿಜವಾಗಿಯೂ ಮಾಡಬಾರದನ್ನು ಮಾಡಿದರೆ ಅಪಾಯಗಳೇ ಜಾಸ್ತಿ.
ಒಟ್ಟಿನಲ್ಲಿ ಒಂದು ಮನೋನಿಯಂತ್ರಣಕ್ಕಾಗಿ ಮೊದಲು ಮನಸ್ಸು ಶುದ್ಧಿಯಾಗಬೇಕು.ಆಗಲೇ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದು. ಅಂತಹ ಒಂದು ಅತ್ಯಂತ ಉತ್ತಮ ಸ್ಥಿತಿಗಾಗಿಯೇ ಇಂತಹ ವೃತ ನಿಯಮಗಳು ಇರುವುದು. ಜ್ಞಾನಿಗೆ ಇವು ಯಾವುದೂ ಅಗತ್ಯವಿಲ್ಲ.ಆಸೆ ಆಕಾಂಶೆಗಳಿರುವ ಅಜ್ಞಾನಿ ಮಾನವನಿಗೆ ಇದು ಬಹಳ ಅಗತ್ಯ. ವೈದಕವಾದ ಸಕಲ ಕ್ರಿಯೆಗಳೂ ಮನೋ ನಿಯಂತ್ರಣಕ್ಕಾಗಿ ಇರುವ Therapy. ಇದರ ನಿಯಂತ್ರಣ ಯಾರಿಗಿದೆಯೋ ಅವರಿಗೆ ಇದು ಬೇಕೆಂದೇನಿಲ್ಲ.ಅಂತಹ ಮನೋನಿಯಂತ್ರಣ ಇರುವವರೇ ಇಷ್ಟೆಲ್ಲಾ ಆಳವಾದ ಸಂಶೋಧನೆಗಳನ್ನು ಮಾಡಿರುವುದು. ವೇದಗಳು ಕೇವಲ ಪ್ರಕೃತಿಯನ್ನಷ್ಟೇ ಹೇಳಿದೆ.ಆ ಪ್ರಕೃತಿಯನ್ನು ಉಳಿಸಿಕೊಳ್ಳುವ ಮಾರ್ಗವನ್ನು ಧರ್ಮಗ್ರಂಥಗಳು ತಿಳಿಸಿವೆ.ಆ ಪ್ರಕಾರ ನಡೆದುಕೊಂಡರೆ ಕ್ಷೇಮವೂ ಆಗುತ್ತದೆ.
Discussion about this post