Read - 3 minutes
ಅಶೋಕ್ ಪೈ ಪ್ರಖ್ಯಾತ ಮನೋವೈದ್ಯ, ಸಿನಿಮಾ ನಿರ್ಮಾಪಕ, ಬರಹಗಾರ ಮತ್ತು ಚಿಂತಕರಾಗಿ ತಮ್ಮನ್ನು ಗುರುತಿಸಿಕೊಂಡವರು. ಮಾನಸಿಕ ರೋಗಿಗಳ ಚಿಕಿತ್ಸೆಗಾಗಿ ಎರಡು ದಶಕಗಳ ಹಿಂದೆ ಶಿವಮೊಗ್ಗದಂತಹ ಅತ್ಯಂತ ಚಿಕ್ಕ ಹಾಗೂ ಯಾವುದೇ ಸೌಲಭ್ಯ ಇಲ್ಲದ ಜಿಲ್ಲೆಯಲ್ಲಿ ಅತ್ಯಾಧುನಿಕ ಮಾನಸಾ ನರ್ಸಿಂಗ್ ಹೋಮ್‌ನ್ನು ಸ್ಥಾಪಿಸಿ, ದೇಶದ ಉದ್ದಗಲಕ್ಕೂ ಇದರ ಹೆಸರು ಪಸರಿಸುವಂತೆ ಮಾಡಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಜನರು ಚಿಕಿತ್ಸೆಗೆ ಬರುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಮಾನಸಾ ಆಸ್ಪತ್ರೆ ಮನೆಮಾತಾಗಿದೆ. ಬೆಂಗಳೂರಿನಲ್ಲಿ ನಿಮ್ಹಾನ್ಸ್‌ನ್ನು ಬಿಟ್ಟರೆ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆಯನ್ನು ನೀಡುವಂತಹ ಏಕೈಕ ಆಸ್ಪತ್ರೆ ಇದು. ಇಲ್ಲಿ ಚಿಕಿತ್ಸೆ ಜೊತೆಗೆ ಸಲಹಾ ಕೇಂದ್ರವಿದೆ. ಪುನರ್ವಸತಿ ಇದೆ, ಸಂಶೋಧನಾ ಕೇಂದ್ರವಿದೆ.
ಡಾ. ಅಶೋಕ್ ಪೈ ಸತತ ಅಧ್ಯಯನಶೀಲರು. ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲವರು. ಸಮಾಜದಲ್ಲಿ ಹೆಚ್ಚುತ್ತಿರುವ ಮಾನಸಿಕ ರೋಗಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದವರು. ಈ ಸಂಬಂಧ ಹಲವಾರು ಪುಸ್ತಕಗಳನ್ನೂ ಅವರು ಬರೆದಿದ್ದಾರೆ. ಮಾನಸಿಕ ಆರೋಗ್ಯದ ಬಗ್ಗೆ ಇರುವ ಮೂಢನಂಬಿಕೆ ಮತ್ತು ಮಿಥ್ಯೆಗಳನ್ನು ಸುಳ್ಳು ಎಂದು ಪ್ರತಿಪಾದಿಸುತ್ತ, ಈ ಬಗ್ಗೆ ರೋಗಿಗಳಿಗೆ ಮತ್ತು ಅವರ ಬಂಧುಗಳಿಗೆ ಸತತ ಮಾರ್ಗದರ್ಶನ ಮಾಡುತ್ತಲೇ ಬಂದವರು. ದೇಶದ ಹಲವು ಪತ್ರಿಕೆಗಳಲ್ಲಿ, ಮ್ಯಾಗಜಿನ್‌ಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಇವರು ಬರೆದ ಅಂಕಣ ಇಂದಿಗೂ ಜನಪ್ರಿಯ. ಈ ಮೂಲಕ ಸಾರ್ವಜನಿಕ ಜಾಗೃತಿಯನ್ನು ಅವರು ಮಾಡಿದ್ದಾರೆ. ಆಕಾಶವಾಣಿ, ಟಿವಿ ಚಾನೆಲ್ ಅಷ್ಟೇ ಏಕೆ, ಸಿನಿಮಾ ನಿರ್ಮಿಸುವ ಮೂಲಕ ಅದರಲ್ಲೂ ಮಾನಸಿಕ ಆರೋಗ್ಯವನ್ನೇ ಕೇಂದ್ರವಾಗಿಟ್ಟುಕೊಂಡು ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡಿದ್ದಾರೆ.
ಈ ಮೂಲಕ ದೇಶದಲ್ಲಿ ಮತ್ತು ಅಂತರ‌್ರಾಷ್ಟ್ರೀಯ ಮಟ್ಟದಲ್ಲಿ ಡಾ. ಪೈ ಅವರಿಗೆ ವಿಶೇಷ ಹೆಸರು ಗಳಿಸಿದ್ದಾರೆ. ಇವರ ಕೃತಿಗಳು ಮತ್ತು ಸಿನಿಮಾಗಳು ಈ ಕಾರಣದಿಂದಲೇ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿವೆ. ಅಂತರ‌್ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾಗಳು ಪ್ರದರ್ಶಿತವಾಗಿವೆ. ಮಾನಸಿಕ ಆರೋಗ್ಯದ ಬಗ್ಗೆ ಸತತ ಅಧ್ಯಯನ ಮತ್ತು ಇದರ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅವರು ಪಟ್ಟ ಪರಿಶ್ರಮ ನಿಜಕ್ಕೂ ಪ್ರಶಂಸಾರ್ಹವಾದುದು. ಸಾವಿನ ಮುನ್ನಾದಿನದವರೆಗೂ ಈ ಬಗ್ಗೆ ಹೋರಾಟ ಮುಂದುವರೆದೇ ಇತ್ತು.
ಅವರ ಇನ್ನೊಂದು ಮಹತ್ವದ ಸಾಧನೆ ಎಂದರೆ ಆಶಾಕಿರಣ ಸ್ಥಾಪನೆ. ಆಶಾಕಿರಣ ಮಾನಸಿಕ ರೋಗಿಗಳ (ವಿದಾರ್ಥಿಗಳ) ಪುನರ್ವಸತಿ ಶಾಲೆ. ಇದರಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲರಲ್ಲದವರ ಮಕ್ಕಳಿಗೆ ಮಾತ್ರ ಪ್ರವೇಶ. ಇದು ರೋಟರಿ ಅಂತರ‌್ರಾಷ್ಟ್ರೀಯ ಸಂಸ್ಥೆ ಸಹಕಾರದಿಂದ ಸ್ಥಾಪಿತವಾದ್ದು. ಈ ಸಾಮುದಾಯಿಕ ಮಾನಸಿಕ ಕೆಲಸಕ್ಕಾಗಿ ಡಾ. ಪೈ ಅವರಿಗೆ ಅಂತರ‌್ರಾಷ್ಟ್ರೀಯ ಪ್ರಶಸ್ತಿ ಸಹ ಲಭಿಸಿದೆ.
ಡಾ. ಪೈ ಈವರೆಗೆ ಮೂರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವುಗಳೆಂದರೆ ಪ್ರಥಮ ಉಷಾಕಿರಣ, ಆಘಾತ ಮತ್ತು ಕಾಡಿನ ಬೆಂಕಿ. ಇದರೊಟ್ಟಿಗೆ ಹಿಂದಿಯಲ್ಲಿ ಒಂದು ಟೆಲಿಸೀರಿಯಲ್‌ಗಳನ್ನು ನಿರ್ಮಿಸಿದ್ದಾರೆ. ಇವೆಲ್ಲವೂ ಮಾನಸಿಕ ಆರೋಗ್ಯದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮತ್ತು ಮೂಢನಂಬಿಕೆಯನ್ನು ಹಿಮ್ಮೆಟ್ಟಿಸುವ ಕುರಿತಾದದ್ದು. ಈ ಮೂರೂ ಸಿನಿಮಾಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ. ಇವರ ಇನ್ನೊಂದು ಪ್ರಮುಖ ಹವ್ಯಾಸವೆಂದರೆ ಅಧ್ಯಯನ ಪ್ರವಾಸ, ಸಂಶೋಧನೆ, ಮೋಜಿಗಾಗಿ ಎಂದೂ ವಿದೇಶ ಯಾತ್ರೆಯನ್ನು ಇವರು ಮಾಡಿಲ್ಲ. ಬದಲಿಗೆ, ಅಧ್ಯಯನ, ಸಮಾವೇಶ, ಉಪನ್ಯಾಸ, ಸಂಶೋಧನೆಗೆ ತೆರಳುತ್ತಿದ್ದರು.
ಸಂವಾದ, ವೈದ್ಯರ ಮತ್ತು ಇತರ ಉನ್ನತ ಅಧಿಕಾರಿಗಳ, ಸಂಸ್ಥೆಗಳ ಸದಸ್ಯರೊಂದಿಗೆ, ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ಇವರ ಅತಿ ಮೆಚ್ಚಿನ ಹವ್ಯಾಸವಾಗಿತ್ತು. ಇತ್ತೀಚೆಗೆ ತಮ್ಮ ಹೊಸ ಯೋಜನೆ ಧರ್ಮ ಮತ್ತು ಮಾನಸಿಕ ಆರೋಗ್ಯ ಎನ್ನುವುದನ್ನು ಆರಂಭಿಸಿದ್ದರು. ತಮ್ಮ ತಂದೆ ದಿವಂಗತ ಕಟೀಲು ಅಪ್ಪುರಾವ್ ಪೈ ಹೆಸರಿನಲ್ಲಿ ಪ್ರತಿವರ್ಷ ದತ್ತಿ ಭಾಷಣವನ್ನು ದೇಶದ ವಿದ್ವಾಂಸರು, ತಜ್ಞರಿಂದ ಮಾಡಿಸುತ್ತಿದ್ದರು. ಇವರನ್ನು ಶಿವಮೊಗ್ಗಕ್ಕೆ ಕರೆತಂದು ಜನತೆಗೆ ಅವರ ಜ್ಞಾನವನ್ನು ಉಣಬಡಿಸುತ್ತಿದ್ದರು.
ಶಿವಮೊಗ್ಗಕ್ಕೆ ಸಂಬಂಧಿಸಿ ಡಾ. ಪೈ ಅವರನ್ನು ಗಮನಿಸುವುದಾರೆ, ನಗರದ ಯಾವುದೇ ಚಟುವಟಿಕೆಯಲ್ಲಿ ಇವರು ಇಲ್ಲ ಎನ್ನುವುದಿಲ್ಲ. ಬೆಳ್ಳಿಮಂಡಲದಲ್ಲಿ ಗೌರವಾಧ್ಯಕ್ಷರಾಗಿದ್ದಾರೆ. ಈ ಮೂಲಕ ನಗರದಲ್ಲಿ ಚಲನಚಿತ್ರೋತ್ಸವ ನಡೆಯುವಂತೆ ಮಾಡಿದ್ದಾರೆ. ಸಾಮಾಜಿಕ ಕೆಲಸಗಳಲ್ಲೂ ಇವರು ಮುಂದು. ತಮ್ಮ ಮಾನಸಾ ಆಸ್ಪತ್ರೆಯಲ್ಲಿ ವಿವಿಧ ತಜ್ಞರಿಂದ ಉಪನ್ಯಾಸ, ವಿಶೇಷ ಸಂವಾದಗಳನ್ನು ನಡೆಸುವ ಮೂಲಕ ಜನರಲ್ಲಿ ವಿಶೇಷ ಅರಿವು ಮೂಡಿಸುತ್ತಿದ್ದರು. ಸಾಹಿತ್ಯಿಕ ಚಟುವಟಿಕೆಗಳಲ್ಲೂ ಎತ್ತಿದ ಕೈ. ಸ್ವತಃ ವೈದ್ಯ ಸಾಹಿತಿಯೂ ಆಗಿದ್ದುದು ಇದಕ್ಕೆ ಕಾರಣ. ನಗರದಲ್ಲಿ ಹಲವಾರು ರಾಷ್ಟ್ರೀಯ ಮಟ್ಟದ ವೈದ್ಯಕೀಯ ಸಮಾವೇಶಕ್ಕೆ ಇವರು ಕಾರಣಕರ್ತರಾಗಿದ್ದರು.
ನಗರದ ಎಲ್ಲಾ ಜನರನ್ನೂ ಒಂದೇ ರೀತಿಯಲ್ಲಿ ಕಾಣುವುದು ಇವರ ವಿಶೇಷ ಗುಣ ಎನ್ನಲೇಬೇಕು. ಯಾರೇ ಎದುರಾದರೂ ಕೈಕುಲುಕಿ ಮಾತನಾಡಿಯೇ ಮುಂದೆ ಸಾಗುತ್ತಿದ್ದರು. ಬೆಳ್ಳಿಯಿಂದ ಮಾಡಿದ್ದೆನ್ನುವಂತಹ ಉದ್ದನೆಯ ಹಿಂಬಾಚಿದ ಬಿಳಿ ಕೂದಲು, ಎತ್ತರದ ವ್ಯಕ್ತಿತ್ವ, ಅಷ್ಟೇ ಕಟ್ಟುಮಸ್ತಾದ ದೇಹ, ಹಾಸ್ಯದ ಮಾತು, ಎಲ್ಲರೊಡನೆ ಉತ್ತಮ ಗೆಳೆತನ ಅವರದಾಗಿತ್ತು, ಇಂತಹ ವ್ಯಕ್ತಿ ಇಂದು ಮುಂಜಾನೆ ಮರಳಿಬಾರದ ಲೋಕಕ್ಕೆ ಪಯಣಿಸಿದ್ದಾರೆ ಎಂದರೆ ನಂಬಲಾಗುತ್ತಿಲ್ಲ.
ಪೈಗೆ ಸಂದ ಪ್ರಶಸ್ತಿಗಳು
ಡಾ. ಬಿ.ಸಿ. ರಾಯ್ ನ್ಯಾಶನಲ್ ಅವಾರ್ಡ್ ಫಂಡ್ ಸಂಸ್ಥೆಯ ಸೋಶಿಯೋ ಮೆಡಿಕಲ್ ರಿಲೀಫ್ ವಿಭಾಗದ ಪ್ರಶಸ್ತಿ-೧೯೯೯, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-೧೯೯೧, ಅತಿವಿಶಿಷ್ಟ ಚಿಕಿತ್ಸಾ ವಿಧಾನ ರಾಷ್ಟ್ರೀಯ ಪ್ರಶಸ್ತಿ (ನವದೆಹಲಿ)-೧೯೯೫, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಸಂದೇಶ ಮಾಧ್ಯಮ ಅವಾರ್ಡ್-೧೯೯೪, ಆರ್ಯಭಟ ಪ್ರಶಸ್ತಿ- ಮನೋಲೋಕ ಕೃತಿಗಾಗಿ-೧೯೯೫, ಡಾ. ಎಸ್. ಜಯರಾಮ್ ಪ್ರಶಸ್ತಿ- ಪರೀಕ್ಷಾ ಫೋಬಿಯಾ ಲೇಖನಕ್ಕಾಗಿ-೧೯೯೦, ಬೀಚಿ ಪ್ರಶಸ್ತಿ- ಮನಶಸ್ತ್ರದಲ್ಲಿ ತಮಾಷೆಗಳು ಎಂಬ ಲೇಖನಕ್ಕಾಗಿ ಡಾ, ನರಸಿಂಹಯ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ- ಚಿತ್ತ ಚೇತನ ಕೃತಿಗಾಗಿ ಹೊರನಾಡು ಕನ್ನಡಿಗೆ ಪ್ರಶಸ್ತಿ- ದುಬೈ ಕನ್ನಡ ಸಂಘದಿಂದ ವಿದ್ಯಾರತ್ನ ಪ್ರಶಸ್ತಿ, ಭಾರತ್ ಗೌರವ್ ಸನ್ಮಾನ್, ಪ್ರಕೃತಿ ಪ್ರಶಸ್ತಿ, ಇಂಟರ್‌ನ್ಯಾಶನಲ್ ಗೋಲ್ಡ್ ಸ್ಟಾರ್ ಪ್ರಶಸ್ತಿ,ಅಮೃತ್ ಮಹೋತ್ಸವ ಪ್ರಶಸ್ತಿ ಸೇರಿದಂತೆ ಹಲವರು ಪ್ರಶಸ್ತಿಗಳು ಇವರ ಮುಡಿಗೇರಿವೆ.
ಸಿನಿಮಾಗಳು:
ಕಾಡಿನಬೆಂಕಿ-ಮಾನಸಿಕ ಮತ್ತು ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದ್ದಾಗಿದ್ದು ೧೯೮೮-೮೯ರ ಸಾಲಿನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದೆ.
ಆಘಾತ- ಮನಶಾಸ್ತ್ರದ ಕುರಿತಾದ ಅತ್ಯುತ್ತಮ ಚಿತ್ರವೆಂದು ಖ್ಯಾತಿ ಪಡೆದು ವಿಶೇಷ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ.
ಉಷಾ ಕಿರಣ- ಮಗುವಿನ ಮಾನಸಿಕ ಸಮಸ್ಯೆ ಕುರಿತಾದದ್ದು. ಇದಕ್ಕೆ ೧೯೯೦ರ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿದೆ. ೧೯೯೫ರ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಅಂತರಾಳ- ಇದು ಹಿಂದಿ ಟೆಲಿಸೀರಿಯಲ್ ಆಗಿದ್ದು, ಮನೋಚಿಕಿತ್ಸೆಗೆ ಸಂಬಂಬಧಿಸಿದ್ದಾಗಿದೆ. ಇವರ ಸಹ ನಿರ್ದೇಶನದಲ್ಲಿ ಮುಚ್ಚಿದ ಬಾಗಿಲು ಸಿನಿಮಾವು ತೆರೆ ಕಡಮಿದೆ.
ಪೈ ಬರೆದ ಕೃತಿಗಳು:
ಮಾನಸಾ (ಮನಶಾಸ್ತ್ರ ಕುರಿತ ಮೊದಲ ಕೃತಿ), ನಿಮ್ಮದು ಸಮಸ್ಯೆಯ ಮಗುವೇ, ಉಷಾ ಕಿರಣ, ಹಾಸ್ಯ ರಶ್ಮಿ, ಚಿತ್ರ ವಿಚಿತ್ರ, ಮನೋವೈಜ್ಞಾನಿಕ ಸತ್ಯ ಕಥೆಗಳು, ಆಶಾಕಿರಣ, ಮನೋಲೋಕ, ಮಕ್ಕಳ ಮನಸ್ಸು, ಆಘಾತ, ಚಿತ್ತ ಚೇತನ, ಮುಚ್ಚಿದ ಬಾಗಿಲು.
ಅಲಂಕರಿಸಿದ ಹುದ್ದೆಗಳು:
ಭಾರತೀಯ ಮನೋವೈದ್ಯರ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ
ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಶೈಕ್ಷಣಿಕ ಸಮಿತಿಯ ಸದಸ್ಯ
ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ
ಕರ್ನಾಟಕ ರಾಜ್ಯ ಕೇಂದ್ರ ವಾಚನಾಲಯ ಮಂಡಳಿಯ ಸದಸ್ಯ
ರಾಜ್ಯ ಪರಿಸರ ಸಲಹಾ ಮಂಡಳಿಯ ಸದಸ್ಯ
ಭಾರತೀಯ ಮನಃಶಾಸ್ತ್ರಜ್ಞರ ಸೊಸೈಟಿಯ ಅಧ್ಯಕ್ಷ ಸ್ಥಾನ
ಭಾರತೀಯ ವೈದ್ಯಕೀಯ ಸಂಘದ ಅಜೀವ ಸಸದ್ಯತ್ವ
ಭಾರತೀಯ ಮನೋವೈದ್ಯರ ಸಂಘದ ಅಜೀವ ಸದಸ್ಯತ್ವ
ಜಿಲ್ಲಾ ಅಂಧರ ಸೊಸೈಟಿಯ ಅಧ್ಯಕ್ಷ
ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷ
ಶಿವಮೊಗ್ಗದ ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ,
ಜಿಲ್ಲಾ ಕುಟುಂಬ ಯೋಜನಾ ಸಂಘದ ಅಧ್ಯಕ್ಷ
Discussion about this post