Read - < 1 minute
ಶ್ರೀಹರಿಕೋಟಾ, ಸೆ.7: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3 ಡಿಆರ್ ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ.
ಈ ಅತ್ಯಾಧುನಿಕ ಉಪಗ್ರಹವು ಇನ್ಸಾಟ್ ಸರಣಿ ಉಪಗ್ರಹಗಳಲ್ಲಿ ಒಂದಾಗಿದ್ದು, ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರಾನ್ಸ್ ನ ಗಯಾನದಿಂದ ಉಡಾವಣೆ ಮಾಡಲಾಗಿತ್ತು. ಇದಾದ ಬಳಿಕ 2015ರ ಆಗಸ್ಟ್ ನಲ್ಲಿ ಜಿಸ್ಯಾಟ್-6 ಉಪಗ್ರಹವನ್ನು ಜಿಎಸ್ ಎಲ್ ವಿ-ಡಿ6 ಉಡಾವಣಾ ವಾಹಕದ ಮೂಲಕ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ ಇಸ್ರೋ ಯಶಸ್ಸು ಸಾಧಿಸಿತ್ತು.
ಇದರ ಮುಂದುವರೆದ ಭಾಗವಾಗಿ ನಾಳೆ ಸಂಜೆ ಇನ್ಸಾಟ್-3ಡಿಆರ್ ಉಪಗ್ರಹವನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲು ಇಸ್ರೋ ಸಕಲ ಸಿದ್ಧತೆ ನಡೆಸಿದೆ.
ದೇಶೀಯವಾಗಿ ಅಭಿವೃದ್ಧಿಪಡಿಸಿದ ಹವಾಮಾನ ಮುನ್ಸೂಚನೆ ನೀಡುವ ಉಪಗ್ರಹ ಇದಾಗಿದೆ. ಸಾಗರದ ಮೇಲ್ಭಾಗದಲ್ಲಿ ಬೀಸುವ ಮಾರುತಗಳನ್ನು ವೀಕ್ಷಿಸುವ ಮೂಲಕ ಚಂಡಮಾರುತವನ್ನು ಮೊದಲೇ ಗ್ರಹಿಸಿ ಎಚ್ಚರಿಕೆ ನೀಡುತ್ತದೆ.
ಹವಾಮಾನ ಉದ್ದೇಶದ್ದಲ್ಲದೆ, ಕೋಸ್ಟ್ ಗಾರ್ಡ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಹಡಗುಗಳು ಮತ್ತು ರಕ್ಷಣ ಉದ್ದೇಶಕ್ಕೆ ಇದರ ಸೇವೆ ಪಡೆದುಕೊಳ್ಳಬಹುದಾಗಿದೆ. ಇನ್ಸಾಟ್-3 ಡಿಆರ್ 10 ವರ್ಷಗಳವರೆಗೆ ಕಾರ್ಯ ನಿರ್ವಹಿಸುತ್ತದೆ ಎಂದು ಇಸ್ರೊ ವಿಜ್ನಾನಿಗಳು ತಿಳಿಸಿದ್ದಾರೆ.ಸ್ಕಾಟ್ಸ್ಯಾಟ್ ಉಪಗ್ರಹವನ್ನು ಅಲ್ಜೇರಿಯಾದ ಉಪಗ್ರಹದ ಜತೆ ಉಡಾವಣೆ ಮಾಡಲು ಉದ್ದೇಶಿಸಲಾಗಿದ್ದು, ಭೂಸ್ಥಾಯಿ ಉಪಗ್ರಹ ಉಡ್ಡಯನ ವಾಹನವು (ಜಿಎಸ್ಎಲ್ವಿ ಎಫ್ಒ?5) 2,211 ಕೆ.ಜಿ ತೂಕದ ಉಪಗ್ರಹವನ್ನು ಒಯ್ದು ಭೂಸ್ಥಾಯಿ ಕಕ್ಷೆಗೆ ವರ್ಗಾಯಿಸಲಿದೆ.
Discussion about this post