Read - < 1 minute
ನವದೆಹಲಿ: ಹಿಂದೆ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಹತ್ಯೆಗೆ ಸಂಚು ಹೂಡಿ ಲಷ್ಕರ್ ತೊಯ್ಬಾ ಭಯೋತ್ಪಾದಕರಿಂದ ಪ್ರಾಯೋಜಿತಳಾಗಿದ್ದ ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣದ ಕಡತ ನಾಪತ್ತೆ ಕುರಿತಂತೆ ದಿಲ್ಲಿ ಪೊಲೀಸರು ಎಫ್ಐಆರ್ ಒಂದನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಈ ಕಡತಗಳು ನಿಗೂಢವಾಗಿ ನಾಪತ್ತೆಯಾಗಿದ್ದವು. ಇದರ ಬೆನ್ನಿಗೇ ಅಂದಿನ ಗೃಹಸಚಿವರಾಗಿದ್ದ ಪಿ.ಚಿದಂಬರಂ ಅವರು ಇಶ್ರತ್ ತಂಡದ ಕುರಿತಂತೆ ಗೊಂದಲ ಪೂರ್ಣ ಹೇಳಿಕೆ ನೀಡಿದ್ದರು. ಭಯೋತ್ಪಾದನೆಯಂತಹ ಗಂಭೀರ ವಿಚಾರವನ್ನು ಕೂಡಾ ಮೋದಿಯವರನ್ನು ಹಣಿಯುವ ರಾಜಕೀಯ ಅಸ್ತ್ರವನ್ನಾಗಿಸಲು ಕಾಂಗ್ರೆಸ್ ಯತ್ನಿಸಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸಿತ್ತು.
ಗೃಹಸಚಿವಾಲಯದ ನಾರ್ತ್ ಬ್ಲಾಕ್ ಕಚೇರಿಯಿಂದ ಈ ಕುರಿತ ಕಡತಗಳು ನಾಪತ್ತೆಯಾಗಿದ್ದು, ಇದರ ಹಿಂದೆ ಕಾಣದ ಕೈಗಳಿರುವ ಕುರಿತಂತೆ ತನಿಖೆ ನಡೆಸುವ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿದೆ. ಭಾರತದ ಸರಕಾರದ ಅಧೀನ ಕಾರ್ಯದರ್ಶಿ ವಿ.ಕೆ.ಉಪಾಧ್ಯಾಯ ಅವರು ಸಂಸದ್ ಮಾರ್ಗ್ ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದರು.
ಈಗಾಗಲೇ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಬಿ.ಕೆ.ಪ್ರಸಾದ್ ಅವರ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಸಮಿತಿಯೊಂದನ್ನು ರಚಿಸಲಾಗಿತ್ತು. ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ದಾಖಲೆಗಳು ಚಿದಂಬರಂ ಅವಧಿಯಲ್ಲಿ ಸಚಿವಾಲಯದಿಂದ ಕಾಣೆಯಾಗಿವೆ ಎಂದು ಕಳೆದ ಮಾ.10ರಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೇಳಿದ್ದರು. ಅಂದಿನ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೆ ಅವರು 2009ರಲ್ಲಿ ಅಟಾರ್ನರ್ ಜನರಲ್ ಜಿ.ಇ.ವಹ್ನಾವತಿ ಅವರಿಗೆ ಬರೆದ ಎರಡು ಪತ್ರಗಳು ಕಾಣೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಅಟಾರ್ನರ್ ಜನರಲ್ ಎರಡು ಅಫಿದವಿಟ್ಗಳನ್ನು ನಮೂದಿಸಿದ್ದಾರೆ. ಅವುಗಳು ಲಭ್ಯವಿಲ್ಲ ಎಂದು ಸಿಂಗ್ ತಿಳಿಸಿದ್ದರು.
Discussion about this post