Read - < 1 minute
ನ್ಯಾಯಾಲಯದಲ್ಲಿ ಹೋರಾಟ ಮಾಡಿ ಜಯ ಸಾಧಿಸಿ ಪಡೆದಿರುವ ಆದೇಶವೇ ಹೊರತು ಬೆಲೆ ಕೊಟ್ಟು ಕೊಂಡದ್ದಲ್ಲ.
ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ನಿರ್ದೋಷಿಯೆಂದು ಘೋಷಿಸಲ್ಪಟ್ಟು ಬಿಡುಗಡೆ ಹೊಂದುವ ಆರೋಪಿಯನ್ನು ದ್ವೇಷಿಸುವುದು ಎಷ್ಟು ಸೂಕ್ತ? ಕಾವೇರಿ ವಿಚಾರದಲ್ಲಿ ಆಗಿರುವುದೂ ಇಷ್ಟೇ. ಲಭ್ಯವಿರುವ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಲು ಸರ್ಕಾರ ವಿಫಲವಾಗಿರುವುದು, ನ್ಯಾಯಾಲಯದಲ್ಲಿ ಸಮರ್ಥ ವಾದವನ್ನು ಮಂಡಿಸುವ ಚಾಣಾಕ್ಷ್ಯತನ ತೋರದಿರುವುದು, ವಾದಿಸುವ ಸಾಮರ್ಥ್ಯ ಹೊಂದಿದ್ದರೂ ಸ್ವಾರ್ಥ ರಾಜಕೀಯಕ್ಕಾಗಿ ರಾಜ್ಯದ ಜನರ ಹಿತವನ್ನು ಬಲಿ ಕೊಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದೇಶ ಪಾಲನೆಯ ನಾಟಕ ಮಾಡುತ್ತ ಮೊಸಳೆ ಕಣ್ಣೀರು ಸುರಿಸುತ್ತಿರುವ ಭ್ರಷ್ಟ ರಾಜಕಾರಣಿಗಳ ಆಗರವಾಗಿರುವ ರಾಜ್ಯ ಸರ್ಕಾರವೇ ಇಲ್ಲಿ ನಿಜವಾದ ಆರೋಪಿ. ಯಾವುದೇ ಸರ್ಕಾರವಾಗಲಿ ತನ್ನ ರಾಜ್ಯದ ಹಿತ ಕಾಪಾಡುವ ಕಳಕಳಿ ಹೊಂದಿರಬೇಕು. ಜಾಣ ಕುರುಡುತನ ತೋರಬಾರದು. ತನ್ನ ತಪ್ಪನ್ನು ಮರೆಮಾಚಲು ತಾನು ಪ್ರಾಮಾಣಿಕನೆಂದು ಡಂಗುರ ಸಾರುತ್ತ ಜನರನ್ನು ತಪ್ಪು ದಾರಿಗೆಳೆಯುವತ್ತ ರಾಜ್ಯ ಸರ್ಕಾರ ಚಿತ್ತ ಎಂಬಂತಾಗಿದೆ. ನಮ್ಮ ಹೋರಾಟವೇನಿದ್ದರೂ ಹೊಣೆಗೇಡಿತನ ಪ್ರದರ್ಶಿಸಿದ ನಮ್ಮ ಸರ್ಕಾರದ ವಿರುದ್ಧವಿರಬೇಕೇ ಹೊರತು ಕಾನೂನಾತ್ಮಕ ಹೋರಾಟದಲ್ಲಿ ಜಯ ಸಾಧಿಸಿದ ಜಯಲಲಿತಾ ವಿರುದ್ದವಲ್ಲ. ಮನೆಯ ಯಜಮಾನ ಸರಿಯಿದ್ದರೆ ಎಲ್ಲವೂ ಸರಿಯಿರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ತಮಿಳುನಾಡನ್ನು ಉದಾಹರಣೆಯಾಗಿ ನೋಡಬಹುದು.
ಮುಂದಿನ ಜೀವನೋಪಾಯಕ್ಕಾಗಿ ಎಲ್ಲಿ ಪರದಾಡಬೇಕೆಂಬ ಆತಂಕದಲ್ಲಿ ಕ್ಷಣಗಣನೆ ಮಾಡುತ್ತ ತಾಳ್ಮೆ ಕಳೆದುಕೊಂಡು ಬೀದಿಗಿಳಿದು ಹೋರಾಟ ಮಾಡುತ್ತಿರುವ ಕಂಗೆಟ್ಟ ರೈತರನ್ನು ಮಾನವೀಯ ನೆಲೆಯಿಂದ ನೋಡುವ ಇರಾದೆಯೇನಾದರೂ ನಮ್ಮನ್ನಾಳುತ್ತಿರುವ ಭ್ರಷ್ಟ ಸರ್ಕಾರಕ್ಕಿದ್ದಿದ್ದರೆ ಅಲ್ಲಿ ಅಮ್ಮನನ್ನು ಪೂಜಿಸುವಂತೆ ಇಲ್ಲಿ ಬಹುಷಃ ಅಪ್ಪನೆಂದು ಪೂಜಿಸಿಕೊಳ್ಳುತ್ತಿದ್ದರು ನಮ್ಮ ಮುಖ್ಯಮಂತ್ರಿಗಳು.
ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟವುಂಟಾಗುವಂತೆ ರೈತರನ್ನು ಪರೋಕ್ಷವಾಗಿ ಹುರಿದುಂಬಿಸಿ ಜನರ ಯೋಚನೆಯ ದಿಕ್ಕನ್ನು ಬದಲಿಸುವಲ್ಲಿ ಯಶಸ್ವಿಯಾಗಿದ್ದೇನೆಂದು ತಿಳಿದಂತಿದೆ ಸರ್ಕಾರ. ಮಹದಾಯಿ, ಕೃಷ್ಣೆ, ಕಾವೇರಿಗಳ ಹಂಚಿಕೆ ವಿವಾದ ಇಂದು ನಿನ್ನೆಯದಲ್ಲ. ಹಾಗಂತ ಪರಿಹಾರವಿಲ್ಲವೆಂದೂ ಅಲ್ಲ. ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಮನಸ್ಸಿದ್ದರೆ ಸಾಕು ಪರಿಹಾರ ದೊರಕಿದಂತೆಯೇ. ಆದರೆ ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಸಿ ಎಲ್ಲದರಲ್ಲೂ ತನ್ನ ಬೇಳೇ ಕಾಳು ಬೇಯಿಸಿಕೊಳ್ಳುವ ದುರಾಲೋಚನೆಯಿಂದ ಮಾತ್ರ ತನ್ನ ಅಸ್ತಿತ್ವಕ್ಕೆ ಧಕ್ಕೆಬಾರದು ಎಂದು ಯೋಚಿಸುವ ಸರ್ಕಾರ ಇದ್ದರೆ ಈ ಜನುಮದಲ್ಲೂ ಪರಿಹಾರ ಕಾಣೆವು.
ನೆನಪಿರಲಿ ಪರಿಹಾರ ಕೊಡುವ ಸರ್ಕಾರವನ್ನು ಆಯ್ಕೆ ಮಾಡುವಲ್ಲಿ ನಮ್ಮ ದೂರಾಲೋಚನೆಯಿದ್ದರೆ ಪರಿಹಾರ ನಮ್ಮಿಂದಲೇ ಸಾಧ್ಯ. ಸಮಸ್ಯೆ ಬಂದಾಗ ನೋಡೋಣವೆನ್ನದೇ ನಾಳಿನ ದಿನಗಳಿಗೆ ಇಂದೇ ಬುನಾದಿ ಹಾಕುವತ್ತ ಸಾಗಲಿ ನಮ್ಮ ಚಿತ್ತ. ರಾಜಕೀಯ ಪಕ್ಷಗಳು ಎರಡು ವರ್ಷಗಳ ಮೊದಲೇ ಚುನಾವಣಾ ತಯಾರಿ ನಡೆಸುವುದಾದರೆ, ನಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬಲ್ಲ ಪಕ್ಷಗಳಿಗೆ ನಮ್ಮ ಆದ್ಯತೆಯ ಜೊತೆಗೆ ಅವರ ಪ್ರಣಾಳಿಕೆಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರದ ಸ್ಪಷ್ಟ ಯೋಜನೆಗಳಿಗೆ ಆಗ್ರಹಿಸುವ ಮೂಲಕ ನಮ್ಮ ಜವಾಬ್ದಾರಿ ಮೆರೆಯಲು ಈ ಸಮಯ ಸನ್ನಿಹಿತ.
ಯೋಚಿಸಿ ಸುಮ್ಮನಾಗದಿರಿ.
ಲೇಖಕರು: ನಾಗರಾಜ ಶೆಟ್ಟರ್, ಶಿವಮೊಗ್ಗ
Discussion about this post