Read - < 1 minute
ಉಡುಪಿ: ಪಾಕಿಸ್ತಾನದ ಉಗ್ರರನ್ನು ಕೊಂದ ನಿಜವಾದ ಶ್ರೇಯಸ್ಸು ಸಲ್ಲಬೇಕಾಗಿರುವುದು ನಮ್ಮ ಸೈನಿಕರಿಗೆ, ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಇದನ್ನೇ ಹೇಳಿದ್ದಾರೆ ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಹೇಳಿದರು.
ಅವರು ಉದ್ಯಾವರ ೫ ಸ್ಟಾರ್ ಫ್ರೆಂಡ್ಸ್ ಮತ್ತು ಎಸ್.ಎಫ್.ಎಕ್ಸ್. ಕ್ರಿಕೆಟರ್ಸ್ ವತಿಯಿಂದ ಉದ್ಯಾವರ ಪಂಚಾಯತ್ ಮೈದಾನದಲ್ಲಿ ಕಾಶ್ಮೀರದ ಉರಿ ಎಂಬಲ್ಲಿ ನಡೆದ ಉಗ್ರರರ ದಾಳಿಗೆ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಿಜವಾದ ದೇಶ ಪ್ರೇಮವಿರುವುದು ತನ್ನ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಿದ ಧೀರ ಹೆತ್ತವರಲ್ಲಿ ಎಂದ ಅವರು, ಭಾರತ ಮತ್ತು ಪಾಕಿಸ್ತಾನದಲ್ಲಿ ಒಳ್ಳೆಯ ಜನರಿದ್ದಾರೆ. ಈ ಜನರು ಶಾಂತಿ ಬಯಸುತ್ತಿದ್ದಾರೆ. ರಾಜತಾಂತ್ರಿಕ ನೆಲೆಯಲ್ಲಿ ದೇಶ ಪ್ರೇಮವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದರು.
ಗಡಿ ಭಾಗದಲ್ಲಿ ಈ ಭಾಗದಲ್ಲಿ ಉಗ್ರರಿಂದ ಹಿಂಸೆ ಹೆಚ್ಚಾಗುತ್ತಿದೆ, ಇದು ದೇಶದ ರಕ್ಷಣೆಯ ದೃಷ್ಟಿಯಿಂದ ಅಪಾಯಕಾರಿಯಾದುದು, ಆದ್ದರಿಂದ ಉಗ್ರರಿಗೆ ತಕ್ಕ ಪಾಠ ಕಲಿಸಬೇಕಾಗಿರುವುದು ಅನಿವಾರ್ಯ ಎಂದವರು ನುಡಿದರು.
ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸರ್ ಅಹ್ಮದ್, ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣಾ, ಗ್ರಾ.ಪಂ. ಉಪಾಧ್ಯಕ್ಷ ರಿಯಾಜ್ ಪಳ್ಳಿ, ಸೌಹಾರ್ದ ಸಮಿತಿ ಅಧ್ಯಕ್ಷ ರಫಾಯಲ್ ಮೋನಿಸ್, ಉದ್ಯಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಂದ್ರ ಶರ್ಮ ಮತ್ತು ಸಮಾಜ ಸೇವಕ ಪ್ರತಾಪ್ ಕುಮಾರ್ ಉಪಸ್ಥಿತರಿದ್ದರು.
ನಿವೃತ್ತ ಯೋಧ ಶೈಲೇಶ್ ಪಿತ್ರೋಡಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದ ಸಂಘಟಕ ಸ್ಟೀವನ್ ಕುಲಾಸೊ ಉದ್ಯಾವರ ಸ್ವಾಗತಿಸಿ, ಉಪನ್ಯಾಸಕ ನಾಗರಾಜ್ ನಿರೂಪಿಸಿ, ನೈಝೀಲ್ ಲೂವಿಸ್ ವಂದಿಸಿದರು.
Discussion about this post