ಉಡುಪಿ,ಸೆ.24- ನಗರದ ಕೆ.ಎಂ.ಮಾರ್ಗದ ಡಯಾನ ವೃತ್ತದಲ್ಲಿ ಶನಿವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಖಾಸಗಿ ಬ್ಯಾಂಕಿಯ ಉದ್ಯೋಗಿಯೊಬ್ಬರು ಧಾರುಣವಾಗಿ ಮೃತಪಟ್ಟಿದ್ದಾರೆ.
ಮೃತರು ಮಂಗಳ ರಾವ್ (26), ನಗರದ ಎಚ್.ಡಿ.ಎಫ್.ಸಿ. ಬ್ಯಾಂಕಿನ ಫೈನಾನ್ಸ್ ವಿಭಾಗದ ಉದ್ಯೋಗಿ, ಕಟಪಾಡಿಯ ದುರ್ಗಾನಗರದ ಪ್ರಭಾಕರ ರಾವ್ – ಲಕ್ಷ್ಮೀ ದಂಪತಿಯ ಮಗಳು.
ಅಕೆ ತನ್ನ ಸ್ಕೂಟಿಯಲ್ಲಿ ಕೆಲವೇ ಹೆಜ್ಜೆ ದೂರದಲ್ಲಿರುವ ಬ್ಯಾಂಕಿನ ಕಡೆಗೆ ಹೋಗುತ್ತಿದ್ದಾಗ ಪಕ್ಕದ ರಸ್ತೆಯಿಂದ ಈಚೆ ಬಂದ ನಗರಸಭೆ ಟ್ರಾಕ್ಟರ್ ಡಿಕ್ಕಿ ಹೊಡೆಯಿತು. ಪರಿಣಾಮ ಕೆಳಕ್ಕೆ ಬಿದ್ದ ಮಂಗಳ ಅವರ ತಲೆ ಮೇಲೆ ಟ್ರಾಕ್ಟರಿನ ಹಿಂಬದಿಯ ಚಕ್ರ ಹರಿಯಿತು. ಈ ಸಂದರ್ಭದಲ್ಲಿ ಮಂಗಳ ಅವರು ಹೆಲ್ಮೆಟ್ ಧರಿಸಿದ್ದರೂ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ತಲೆಯಿಂದ ರಕ್ತಸ್ರಾವವಾಗಿ ಅವರು ಕೊನೆಯುಸಿರೆಳೆದಿದ್ದಾರೆ.
ನಗರದ ಕಸವನ್ನು ತುಂಬಿಸಿ ಹೋಗುತ್ತಿದ್ದ ಟ್ರಾಕ್ಟರ್ ನಡೆಸುತ್ತಿದ್ದ ಚಾಲಕ ಮದ್ಯಪಾನ ಮಾಡಿದ್ದು, ಯದ್ವಾತದ್ವಾ ಟ್ರಾಕ್ಟರ್ ಓಡಿಸುತ್ತಿದ್ದ ಎಂದು ಸಾರ್ವಜನಿಕರು ಹೇಳಿದ್ದಾರೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟಪಾಡಿಯ ದುರ್ಗಾನಗರದ ನಿವಾಸಿ ಪ್ರಭಾಕರ ರಾವ್ ವೃತ್ತಿಯಲ್ಲಿ ಟೈಲರ್, ಅವರಿಗೆ ಇಬ್ಬರು ಮಕ್ಕಳು, ದೊಡ್ಡವ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಸಾಕಷ್ಟು ಬಡತನದಲ್ಲಿಯೇ ಮಕ್ಕಳನ್ನು ಸಾಕಿ ಓದಿಸಿದ್ದರು. ಮಗಳು ಓದಿ ಬ್ಯಾಂಕಲ್ಲಿ ಉದ್ಯೋಗಿಯಾಗಿ, ಮಕ್ಕಳಿಬ್ಬರು ಮನೆಗೆ ಆಧಾರವಾಗಿದ್ದರು. ಬೆಳೆದು ಮದುವೆಯ ವಯಸ್ಸಿಗೆ ಬಂದಿದ್ದ ಮಗಳನ್ನು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಸಂಜೆ ಮಗ ಬಂದ ನಂತರ ಕೋಟೆ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.
Discussion about this post