ಮಡಿಕೇರಿ ಅ.24 : ಜಯಂತಿಗಳ ಆಚರಣೆಯಿಂದ ದೇಶದಲ್ಲಿ ಆದರ್ಶ ಮತ್ತು ಸಾಮರಸ್ಯಕ್ಕೆ ಬದಲಾಗಿ ಶಾಂತಿ ಭಂಗವಾಗುತ್ತಿರುವುದರಿಂದ ಜಯಂತಿ ಆಚರಣೆಗಳನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್ನ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಜಾತಿ, ಮತ, ಧರ್ಮ, ಪಂಗಡದ ಹೆಸರಿನಲ್ಲಿ ಸಾಲು ಸಾಲು ಜಯಂತಿಗಳನ್ನು ಘೋಷಿಸುತ್ತಿರುವುದಲ್ಲದೆ ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗುತ್ತಿದೆ. ರಜೆ, ಮೆರವಣಿಗೆ, ಸಭೆ, ಕಾರ್ಯಕ್ರಮಗಳು ಇತ್ಯಾದಿ ಪ್ರಕ್ರಿಯೆಗಳ ಮೂಲಕ ಅಧಿಕಾರಿಗಳ ಸಮಯ ವ್ಯರ್ಥವಾಗುತ್ತಿರುವುದಲ್ಲದೆ ಸಾರ್ವಜನಿಕರಿಗೂ ಅಡಚಣೆಗಳು ಎದುರಾಗುತ್ತಿದೆ.
ಸಾಲು ಸಾಲು ರಜೆಗಳ ಕಾರಣ ಆಥರ್ಿಕವಾಗಿ ದೇಶ ಹಿನ್ನಡೆಯನ್ನು ಅನುಭವಿಸುವುದಲ್ಲದೆ ಸರಕಾರಿ ನೌಕರರಿಗೆ ಕೆಲಸವಿಲ್ಲದೆ ವೇತನ ಪಾವತಿಸುವ ಪ್ರಮೇಯ ಎದುರಾಗುತ್ತಿದ್ದು, ಇದು ದೇಶದ ಆಥರ್ಿಕ ಕ್ಷೇತ್ರಕ್ಕೆ ಹೊರೆಯಾಗಿ ಪರಿಣಮಿಸಿದೆ. ಮತ ಓಲೈಕೆಯ ರಾಜಕಾರಣದಿಂದ ಘೋಷಣೆಯಾಗುತ್ತಿರುವ ಜಯಂತಿಗಳ ಮೂಲ ಉದ್ದೇಶ ಈಡೇರುತ್ತಿಲ್ಲ. ಅಲ್ಲದೆ ಜಯಂತಿಗೆ ಸಂಬಂಧಿಸಿದ ವರ್ಗದ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕೂಡ ವಿರಳವಾಗಿದೆ. ಕೆಲವು ಜಯಂತಿಗಳು ಸಮಾಜದಲ್ಲಿ ಸಂಘರ್ಷವನ್ನು ಹುಟ್ಟು ಹಾಕುತ್ತಿದ್ದು, ಸಮಾಜ ಘಾತುಕ ಶಕ್ತಿಗಳು ಇದರ ಲಾಭ ಪಡೆಯುತ್ತಿವೆ. ಇದರಿಂದ ಅಮಾಯಕರು ಸಂಕಷ್ಟವನ್ನು ಎದುರಿಸುವುದಲ್ಲದೆ ಸಿಬ್ಬಂದಿಗಳ ಕೊರತೆಯ ನಡುವೆ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತಿದೆ. ಜಯಂತಿಗಳು ಸಮಾಜದ ಸಾಮರಸ್ಯಕ್ಕೆ ಮತ್ತು ಆದರ್ಶ ವ್ಯಕ್ತಿಗಳು ಪ್ರೇರಣೆಯಾಗುವುದಕ್ಕೆ ಸಹಕಾರಿಯಾಗಬೇಕಾಗಿತ್ತು. ಆದರೆ ಇಂದು ಮನಸ್ಸು ಮನಸ್ಸುಗಳನ್ನು ವಿಭಜಿಸುವ ಕಾರ್ಯ ಜಯಂತಿಗಳಿಂದಾಗುತ್ತಿದೆ ಎಂದು ಹರೀಶ್ ಜಿ.ಆಚಾರ್ಯ ಆರೋಪಿಸಿದ್ದಾರೆ. ಸಂಘರ್ಷಮಯ ವಾತಾವರಣ ಸೃಷ್ಟಿಯಾದಾಗ ಪೊಲೀಸರಿಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಸಾಧ್ಯವಾಗುತ್ತಿದೆ. ಪೊಲೀಸರನ್ನು ಕೂಡ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುವ ಹುನ್ನಾರ ನಡೆಯುತ್ತಿರುವುದರಿಂದ ಪೊಲೀಸ್ ವ್ಯವಸ್ಥೆ ಹದಗೆಡುತ್ತಿದೆ. ಅಲ್ಲದೆ ಪ್ರತಿಯೊಬ್ಬರೂ ಪೊಲೀಸರನ್ನೇ ಶಪಿಸುವ ಆತಂಕಕಾರಿ ಬೆಳವಣಿಗೆ ಕಂಡು ಬಂದಿದೆ. ಇದೇ ಕಾರಣಕ್ಕೆ ಪೊಲೀಸ್ ಸಿಬ್ಬಂದಿಗಳು ಸ್ವಯಂ ಘೋಷಿತ ನಿವೃತ್ತಿ ಹೊಂದುತ್ತಿರುವ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಒಟ್ಟಿನಲ್ಲಿ ಜಯಂತಿಗಳ ಆಚರಣೆಯ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಭಾರತದಲ್ಲಿ ಇಂದು ಆಚರಣೆಗಳೇ ಆತಂಕವನ್ನು ಸೃಷ್ಟಿಸುತ್ತಿರುವುದು ದುರಂತವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಮಾಜವನ್ನು ಒಗ್ಗೂಡಿಸುವಲ್ಲಿ ವಿಫಲವಾಗಿರುವ ಎಲ್ಲಾ ಜಯಂತಿಗಳನ್ನು ರದ್ದುಗೊಳಿಸಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಆಯಾ ರಾಜ್ಯಗಳ ರಾಜ್ಯೋತ್ಸವ, ಗಾಂಧಿ ಜಯಂತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಗಳನ್ನಷ್ಟೇ ಆಚರಿಸಲು ಕೇಂದ್ರ ಸರಕಾರ ಸೂಕ್ತ ಕಾನೂನು ತಿದ್ದುಪಡಿ ತರಬೇಕೆಂದು ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ.
News: Indresh
Discussion about this post