Read - < 1 minute
ಬೆಂಗಳೂರು ಸೆ 8: ವಿವಿಧ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತಂತೆ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಬಂದ್ ಗೆ ವಿರೋಧವಿಲ್ಲ.
ಇದನ್ನು ತಡೆಗಟ್ಟಲು ಹೋಗುತ್ತಿಲ್ಲ. ಶಾಂತಿಯುತವಾಗಿ ನಡೆಯಬೇಕೆಂಬುದು ಸಕರ್ಾರದ ಆಶಯವಾಗಿದ್ದು, ಜನರು ಸ್ವಯಂಪ್ರೇರಣೆಯಿಂದ ಬಂದ್ ಮಾಡಿದ್ದಲ್ಲಿ ಯಾವುದೇ ಅಡ್ಡಿಯಿಲ್ಲ. ಬಂದ್ ಹೆಸರಿನಲ್ಲಿ ಸಾರ್ವಜನಿಕರ, ಸರ್ಕಾರಿ, ಆಸ್ತಿಪಾಸ್ತಿ ಹಾನಿ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಹಾಗೂ ಸಾಮಾಜಘಾತುಕ ಶಕ್ತಿಗಳು ಇಂತಹ ಸಂದರ್ಭದಲ್ಲಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರದಿಂದ ಹತ್ತು ಕಂಪನಿ ಹಾಗೂ ನೆರೆ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ತಲಾ ಎರಡು ಕಂಪನಿಗಳನ್ನು ರಾಜ್ಯದ ಮೀಸಲು ಪಡೆ ಜೊತೆ ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಕಾವೇರಿ ನೀರು ತಮಿಳುನಾಡಿಗೆ ಬಿಟ್ಟಿರುವುದಕ್ಕೆ ಆ ಭಾಗದ ಜನರು ಭಾವನಾತ್ಮಕವಾಗಿ ಆಕ್ರೋಶ ವ್ಯಕ್ತವಾಗಿದೆ. ಇದು ಸಹಜವಾಗಿದ್ದರೂ, ಶಾಂತಿಯುತವಾಗಿ ಬಂದ್ಗೆ ಹೆಚ್ಚಿನ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರಾಜ್ಯದ ಜನತೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಅವರು ಯಾವುದೇ ಪ್ರಚೋದನಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯೆಸಬಾರದು ಎಂದರು. ಸಮೂಹ ಸಾರಿಗೆ ಸಂಚಾರ ಸ್ಥಗಿತಗೊಳ್ಳುವ ಹಿನ್ನೆಲೆಯಲ್ಲಿ ನಾಳೆ ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಂದ್ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ನಿನ್ನೆ ಶಿವಮೊಗ್ಗದ ತುಂಗಭದ್ರ ಜಲಾಶಯದಲ್ಲಿ ಗಣೇಶ ವಿಸರ್ಜನೆಗೆ ತೆರಳಿದ್ದ 12 ಮಂದಿ ನೀರು ಪಾಲಾಗಿರುವ ಹಿನ್ನೆಲೆಯಲ್ಲಿ ವಿಸರ್ಜನೆಗೆ ನಿಗದಿತ ಸ್ಥಳದಲ್ಲಿ ವಿಸರ್ಜನೆ ಮಾಡಬೇಕು ಎಂದು ಮನವಿ ಮಾಡಿದರು.
ಕಾವೇರಿ ಮೇಲ್ಮನವಿ ಪ್ರಾಧಿಕಾರದ ಮುಂದೆ ರಾಜ್ಯ ಸರ್ಕಾರ ತನ್ನ ಮನವಿಯನ್ನು ಸೋಮವಾರ ಸಲ್ಲಿಸಲಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Discussion about this post