Read - < 1 minute
ಕಾಬೂಲ್, ಅ.12: ಆಪ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಮಸೀದಿಯೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದು, 36 ಮಂದಿ ಗಾಯಗೊಂಡಿದ್ದಾರೆ.
ದಕ್ಷಿಣ ಕಾಬೂಲ್ ನ ವಿಶ್ವವಿದ್ಯಾಲಯದ ಸಮೀಪದಲ್ಲೇ ಇರುವ ಮಸೀದಿಯಲ್ಲಿ ಈ ಘಟನೆ ಸಂಭವಿಸಿದೆ. ಶಿಯಾ ಮುಸ್ಲಿಮರು ಪವಿತ್ರ ಅಶುರಾ ಆಚರಣೆಗಾಗಿ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಆಗಮಿಸಿದ್ದ ವೇಳೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 13 ಶಿಯಾ ಯಾತ್ರಿಗಳು ಸಾವಿಗೀಡಾಗಿದ್ದಾರೆ. 36ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮಸಿದಿಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ಸಂದರ್ಭದಲ್ಲೇ ಉಗ್ರರು ಗುಂಡು ಹಾರಿಸಲು ಆರಂಭಿಸಿದ್ದಾರೆ. ಎಲ್ಲರೂ ಪ್ರಾರ್ಥನೆಯಲ್ಲಿ ಮಗ್ನರಾಗಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಆಫ್ಘಾನಿಸ್ತಾನ ಆಂತರಿಕ ಸಚಿವ ಸೆದಿಕ್ ಸೆದ್ದಿಕಿ ಹೇಳಿದ್ದಾರೆ.
ಪ್ರಸ್ತುತ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಭದ್ರತಾ ಪಡೆಗಳು ಆಗಮಿಸಿದ್ದು, ದಾಳಿಕೋರರಿಗಾಗಿ ಶೋಧ ನಡೆಸುತ್ತಿದ್ದಾರೆ. ದಾಳಿ ವೇಳೆ ಮಸೀದಿಯೊಳಗೆ ಗ್ರೆನೇಡ್ ಹಾಗೂ ಬಾಂಬ್ ಸ್ಫೋಟ ಕೂಡ ಸಂಭವಿಸಿದೆ. ಉಗ್ರರು ತಪ್ಪಿಸಿಕೊಳ್ಳದಂತೆ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಕಾರ್ಯಾಚರಣೆಯಲ್ಲಿ 2 ಜೀವಂತ ಗ್ರೆನೇಡ್ ಗಳು ದೊರೆತಿದ್ದು, ಪ್ರಸ್ತುತ ಅವುಗಳನ್ನು ಭದ್ರತಾಪಡೆಗಳು ನಿಷ್ಕ್ರಿಯಗೊಳಿಸಿವೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, ಇದು ಪ್ರಜಾಪ್ರಭುತ್ವದ ಮೇಲಿನ ಹಾಗೂ ಮಾನವೀಯತೆಯ ಮೇಲಿನ ದಾಳಿ ಎಂದು ಖಂಡಿಸಿದ್ದಾರೆ. ಅಂತೆಯೇ ಅಶುರಾ ಆಚರಣೆಯಲ್ಲಿರುವ ಶಿಯಾ ಮುಸ್ಲಿಮರಿಗೆ ತಮ್ಮ ಸರ್ಕಾರ ಸಂಪೂರ್ಣ ಭದ್ರತೆ ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ.
Discussion about this post