Read - 2 minutes
ಬೆಂಗಳೂರು, ಸೆ.24-ಕಾವೇರಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ಬಳಕೆ ಮಾಡಿಕೊಳ್ಳಲಾಗುವುದೆಂಬ ಶುಕ್ರವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಕೈಗೊಂಡಿದ್ದ ನಿರ್ಣಯದ ವಿರುದ್ದ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತಮಿಳುನಾಡು ಮುಂದಾಗಿದೆ.
ಈ ಮೂಲಕ ಮತ್ತೆ ತಮಿಳುನಾಡು ಕರ್ನಾಟಕದ ವಿರುದ್ದ ಕಾನೂನು ಸಮರ ಸಾರಲು ಸಿದ್ಧತೆ ನಡೆಸಿದೆ.
ಮಂಗಳವಾರ ಸುಪ್ರೀಂಕೋರ್ಟ್ ದ್ವಿಸದಸ್ ಯ ಪೀಠದಲ್ಲಿ ಮುಂದುವರೆದ ಅರ್ಜಿ ವಿಚಾರಣೆ ನಡೆಯಲಿದೆ. ಈಗಾಗಲೇ ಮೇಲುಸ್ತುವಾರಿ ಸಮಿತಿ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಆದೇಶದ ವಿರುದ್ದ ಶುಕ್ರವಾರ ತಮಿಳು ಆಕ್ಷೇಪಣೆ ಅರ್ಜಿ ಸಲ್ಲಿಸಿತ್ತು.
ಮಂಗಳವಾರ ಅರ್ಜಿ ವಿಚಾರನೆ ನಡೆಯುವ ಸಾಧ್ಯತೆಯಿದ್ದು , ಅಂದೇ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ವಕೀಲರು ಕಾರ್ಯೋನ್ಮುಖರಾಗಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಶೇಖರ್ ನಪಾಡೆ ಅವರು ಮತ್ತೋರ್ವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಜೊತೆ ಮಾತುಕತೆ ನಡೆಸಿದ್ದಾರೆ.
ಶುಕ್ರವಾರ ಕರ್ನಾಟಕದ ವಿಧಾನ ಮಂಡಲದಲ್ಲಿ ತಮಿಳುನಾಡಿಗೆ ನೀರು ಹರಿಸದೆ ಸದ್ಯಕ್ಕೆ ಸಂಗ್ರಹಣವಾಗಿರುವ ನೀರನ್ನು ಕುಡಿಯುವುದಕ್ಕಾಗಿ ಬಳಕೆ ಮಾಡಿಕೊಳ್ಳಲು ವಿಧಾನಪರಿಷತ್ ಮತ್ತು ವಿಧಾನಸಭೆಯಲ್ಲಿ ಒಂದು ಸಾಲಿನ ನಿರ್ಣಯ ಕೈಗೊಂಡಿತ್ತು.
ಇದು ಸ್ಪಷ್ಟ ನ್ಯಾಯಾಂಗ ನಿಂದನೆಯಾಗಿದ್ದು , ಕರ್ನಾಟಕದ ಮೇಲೆ ಕಾನೂನು ಕ್ರಮ ಜರುಗಿಸುವ ಬಗ್ಗೆಯೂ ಪ್ರಶಾಂತ್ ಭೂಷಣ್ ಜೊತೆ ಈಗಾಗಲೇ ಶೇಖರ್ ನಪಾಡೆ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಈ ಹಿಂದೆ ಪಂಜಾಬ್ ಮತ್ತು ಹರ್ಯಾಣ ನಡುವೆ ಅಂತರಾಜ್ಯ ನದಿ ನೀರು ಹಂಚಿಕೆ ವಿವಾದ ಉಂಟಾದಾಗ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲಂಘಿಸಿ ಪಂಜಾಬ್ ವಿಧಾನಸಭೆಯಲ್ಲಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿತ್ತು.
ಆಗ ಸುಪ್ರೀಂಕೋರ್ಟ್ ಪಂಜಾಬ್ ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ನಿರ್ಣಯವನ್ನು ಅನೂರ್ಜಿತ ಎಂದು ಹೇಳಿ ನಿಮ್ಮ ಸರ್ಕಾರವನ್ನು ಏಕೆ ಕಿತ್ತು ಹಾಕಬಾರದು ಎಂದು ಪ್ರಶ್ನೆ ಮಾಡಿತು. ಬಳಿಕ ಅಲ್ಲಿನ ಸರ್ಕಾರ ನ್ಯಾಯಾಲಯದ ಕ್ಷಮಾಪಣೆ ಕೇಳಿತ್ತು.
ಸಟ್ಲೇಜ್ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಲಯ ನೀಡಿರುವ ಆದೇಶವನ್ನು ಸ್ಪಷ್ಟವಾಗಿ ಪಾಲಿಸಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಶುಕ್ರವಾರ ವಿಧಾನಮಂಡಲದಲ್ಲಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವುದಿಲ್ಲ ಬಗ್ಗೆ ಎಲ್ಲಿಯೂ ರಾಜ್ಯ ಸರ್ಕಾರ ಉಲ್ಲೇಖ ಮಾಡಿಲ್ಲ.
ನಮ್ಮಲ್ಲಿರುವ ನೀರನ್ನು ಕುಡಿಯುವುದಕ್ಕಾಗಿ ಬಳಕೆ ಮಾಡಿಕೊಳ್ಳುತ್ತೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುತ್ತೇವೆ. ಆದರೆ ಜಲಾಶಯಗಳಲ್ಲಿ ನೀರೆ ಇಲ್ಲದಿರುವಾಗ ನೀರು ಹರಿಸಿರುವುದು ಸಾಧ್ಯವಿಲ್ಲ ಎಂಬ ನಿರ್ಣಯ ಕೈಗೊಂಡಿದೆ.
ನ್ಯಾಯಾಲಯದ ಆದೇಶದ ವಿರುದ್ಧ ಉಭಯ ಸದನಗಳಲ್ಲಿ ಟೀಕೆ ಮಾಡಿದಿದ್ದರೂ ಆದೇಶವನ್ನು ಪಾಲನೆ ಮಾಡದಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಕೆ.ಗಂಗೂಲಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುವುದು ಚುನಾಯಿತ ಸರ್ಕಾರದ ಆದ್ಯ ಕರ್ತವ್ಯ. ಈ ರೀತಿ ಸಬೂಬು ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ವಿಧಾನಮಂಡಲದಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಒಪ್ಪಲು ಸಾಧ್ಯವೇ ಇಲ್ಲ. ಹೀಗೆ ಪ್ರತಿಯೊಂದು ರಾಜ್ಯಗಳು ಸದನದ ಹಕ್ಕುಚ್ಯುತಿಯಾಗುತ್ತದೆ ಎಂದು ನಿರ್ಣಯ ಕೈಗೊಂಡರೆ ನ್ಯಾಯಲಯದ ಆದೇಶವನ್ನು ಪಾಲನೆ ಮಾಡುವುದು ಯಾರು ಎಂದು ಅನೇಕ ನ್ಯಾಯವಾದಿಗಳು ಪ್ರಶ್ನಿಸಿದ್ದಾರೆ.
ಅರ್ಜಿ ಸಲ್ಲಿಕೆ: ಕರ್ನಾಟಕ ಸರ್ಕಾರದ ವಿರುದ್ದ ತಮಿಳುನಾಡು ಮಂಗಳವಾರದ ನಂತರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಹಾಗೊಂದು ವೇಳೆ ಸುಪ್ರೀಂಕೋರ್ಟ್ ಇದನ್ನು ಗಂಭೀರವಾಗಿ ಪರಿಗಣಿಸಿದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತವೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಇಲ್ಲವೆ ಮುಖ್ಯಮಂತ್ರಿ ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
Discussion about this post