ಬೆಂಗಳೂರು, ಅ.3: ಅಧಿವೇಶನದ ಸಂದರ್ಭದಲ್ಲಿ ಸೇರಿದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕಳೆದ ಸೆಪ್ಟೆಂಬರ್ 23ರಂದು ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಕೈಗೊಂಡ ನಿರ್ಣಯವನ್ನು ಮಾರ್ಪಾಡು ಮಾಡಿ ನೀರು ಹರಿಸುವ ನಿರ್ಣಯ ಕೈಗೊಳ್ಳುವ ತೀರ್ಮಾನವನ್ನು ಕೈಗೊಳ್ಳಲಾಯಿತು.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಿರುವುದರಿಂದ ಸದ್ಯಕ್ಕೆ ಈ ಆತಂಕದಿಂದ ದೂರವಾಗಿರುವ ರಾಜ್ಯಸರ್ಕಾರ, ನ್ಯಾಯಾಂಗದ ಆದೇಶವನ್ನು ಪಾಲನೆ ಮಾಡಲು ಮುಂದಾಗಿದ್ದು, ಸೆ.23ರಂದು ಕಾವೇರಿ ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಲು ಮಾತ್ರ ಎಂಬ ನಿರ್ಣಯ ಬದಲಿಸಿ ನೀರು ಬಿಡುಗಡೆ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.
ಇಂದು ವಿಧಾನಸಭೆ ಅಧಿವೇಶನ ಕಲಾಪ ಮುಂದೂಡಿದಾಗ ಸ್ಪೀಕರ್ ಕಚೇರಿಯಲ್ಲಿ ಈ ಬಗ್ಗೆ ಚರ್ಚಿಸಿದಾಗ ಬಿಜೆಪಿಯವರು ಈ ಹಿಂದೆ ಕೈಗೊಂಡ ನಿರ್ಣಯಕ್ಕೆ ಬದ್ಧರಿರಬೇಕೆಂದು ಹೇಳಿದ್ದರು. ಜೆಡಿಎಸ್ ನಾಯಕರು ಯಾವುದೇ ನಿರ್ಣಯ ಕೈಗೊಂಡರೂ ಒಮ್ಮತದ ನಿರ್ಣಯ ಇರಬೇಕು ಎಂಬ ನಿಲುವು ವ್ಯಕ್ತಪಡಿಸಿದರು.
ಕಾನೂನು ತಂಡದ ವೈಫಲ್ಯಗಳು ಇಂದಿನ ಅಧಿವೇಶನದ ಪ್ರಮುಖಾಂಶಗಳು:
ನ್ಯಾಯಾಲಯದ ಆದೇಶ, ನೀರಿನ ಕೊರತೆ ಮತ್ತು ಕಾನೂನು ತಂಡದ ವೈಫಲ್ಯಗಳು ಇಂದಿನ ವಿಶೇಷ ಅಧಿವೇಶನದ ಪ್ರಮುಖ ಅಂಶಗಳಾಗಿದ್ದವು.
ಪ್ರತಿಪಕ್ಷಗಳು ಉಭಯ ಸದನಗಳಲ್ಲೂ ನೀರು ಬಿಡಬಾರದೆಂಬ ತೀರ್ಮಾನಕ್ಕೆ ಬದ್ಧವಾಗಬೇಕು ಮತ್ತು ಕಾನೂನು ತಜ್ಞರ ವೈಫಲ್ಯವನ್ನು ಪರಿಗಣಿಸಿ ಬದಲಾಯಿಸಬೇಕು ಎಂದು ಪದೇ ಪದೇ ಒತ್ತಾಯಿಸಿದ್ದರು. ಪರಿಷತ್ ನಲ್ಲಿ ಈಶ್ವರಪ್ಪ ನಾರಿಮನ್ ವೈಫಲ್ಯ ಎಂದು ಪದೇ ಪದೇ ಟೀಕಿಸಿ ಬದಲಾಯಿಸುವಂತೆ ಒತ್ತಾಯಿಸಿದರು. ಸಚಿವ ಜಯಚಂದ್ರ ನಿರ್ಣಯ ಮಂಡನೆ ನಂತರ ಬೆಳಗ್ಗೆಯಿಂದಲೂಪ್ರತಿಪಕ್ಷ ನಾಯಕರು ಕಾವೇರಿ ಬಿಕ್ಕಟ್ಟಿನ ಮತ್ತು ನೀರಿನ ಇಕ್ಕಟ್ಟಿನ ಪರಿಸ್ಥಿತಿಯನ್ನು ತಮ್ಮ ತಮ್ಮ ಅನುಭವಕ್ಕನುಸಾರವಾಗಿ ವಿಶ್ಲೇಷಿಸಿದರು .ಜೊತೆಗೆ ಈ ಸಂಕಟವನ್ನು ಹಂಚಿಕೊಂಡರು.
ಸರ್ಕಾರದ ಬೆಂಬಲಕ್ಕೆ ನಿಲ್ಲುವುದಾಗಿ ಬಿಜೆಪಿ ನಾಯಕರು ಹೇಳಿದರೆ, ಮಾಜಿ ಪ್ರಧಾನಿ ದೇವೇಗೌಡರ ಪ್ರಯತ್ನಗಳನ್ನು ಕುಮಾರಸ್ವಾಮಿ ಬಿಡಿಸಿಟ್ಟರು. ಮನೆಯಲ್ಲಿಯೂ ಹಬ್ಬದ ಸಂದರ್ಭದಲ್ಲಿಯೂ ದೇವೇಗೌಡರು ತಮ್ಮೊಂದಿಗೆ ತೋಡಿಕೊಂಟ ಸಂಕಟವನ್ನು ವಿವರಿಸಿದರು.
ಪ್ರಮುಖ ಪ್ರತಿಪಕ್ಷಗಳ ನಾಯಕರಾಗಿರುವ ಜಗದೀಶ್ ಶೆಟ್ಟರ್ ಹಾಗೂ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯೂ ಆಗಿರುವುದರಿಂದ ಕಾವೇರಿ ಸಂಕಷ್ಟಕ್ಕೆ ತಮ್ಮ ನೋವು ತೋಡಿಕೊಂಡರಾದರೂ ನಿರ್ಧಿಷ್ಟ ಪರಿಹಾರ ಸೂಚಿಸಲಿಲ್ಲ. ಒಟ್ಟಾರೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗದಂತೆ ಮತ್ತು ರಾಜ್ಯದ ಹಿತರಕ್ಷಣೆಯಾಗುವಂತೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಒಂದು ಹಂತದಲ್ಲಿ ಸರ್ಕಾರಕ್ಕೆ ನೀಡಿದಂತಾಗಿತ್ತು. ಪರಿಣಾಮವಾಗಿ ಪ್ರಸ್ತುತ ಜಲಾಶಯಗಳಲ್ಲಿನ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಂಡು ಮತ್ತು ರೈತರ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ನೀರು ಬಳಕೆ ಮಾಡುವ ಒಂದು ಸಾಲಿನ ನಿರ್ಣಯವನ್ನು ಈ ವಿಶೇಷ ಅಧಿವೇಶನ ಅಂಗೀಕರಿಸಿತು.
ಸಿಎಂ ಉತ್ತರ:
ಪ್ರತಿಪಕ್ಷಗಳ ನೀರು ಬಿಡದ ಪಟ್ಟಿಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯ ಅಪಾಯ ಮತ್ತು ನೀರಿ ಲಭ್ಯತೆ ಬಗ್ಗೆ ವಿವರಿಸಿದರು. ಅಲ್ಲದೇ ತ್ರಿಸದಸ್ಯ ಪೀಠದ ಮುಂದೆ ಇದೇ 18 ರಂದು ಕಾವೇರಿ ನಿರ್ವಹಣಾ ಮಂಡಳಿ ಕುರಿತ ವಿಚಾರಣೆ ಬರಲಿದೆ. ಆಗ ನಾರಿಮನ್ ಅವರ ಅವಶ್ಯಕತೆ ಹೆಚ್ಚಾಗಿರುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಇದರೊಂದಿಗೆ ಹಿಂದೆ ಕೈಗೊಂಡ ನಿರ್ಣಯವನ್ನು ವಿವರಿಸಿ ಕುಡಿಯುವ ನೀರು ಅವಶ್ಯಕತೆಗಿಂತ ಹೆಚ್ಚಾಗಿರುವ ನೀರನ್ನು ಲಭ್ಯತೆಯ ಅನುಗುಣವಾಗಿ ರೈತ ಹಿತ ರಕ್ಷಣಕ್ಕೆ ಬಿಡಬೇಕಾಗುತ್ತದೆ ಎಂಬ ಹೇಳಿಕೆ ಮೂಲಕ ಆದೇಶದ ಉಲ್ಲಂಘನೆಯಿಂದ ಪಾರಾಗಿ ರೈತರ ಹಿತವನ್ನೂ ಕಾಯುವ ಸಾಧ್ಯತೆಯನ್ನು ತಿಳಿಸಿದರು.
ನಾಲ್ಕೂ ಜಲಾಶಯದಿಂದ ಒಟ್ಟು ನೀರಿನ ಸಂಗ್ರಹ 27.6 ಟಿಎಂಸಿ ಮಾತ್ರ ಇದೆ.ಈ ಬಗ್ಗೆ ಈಗಾಗಲೇ ಸದನದಲ್ಲಿ ಚರ್ಚೆ ಮಾಡಿದ್ದೇವೆ. ಜೂನ್ ವರೆಗೆ ಕುಡಿಯುವ ನೀರಿಗೆ ಮಾತ್ರ ಆಗಲಿದೆ. ನೀರಾವರಿಗೂ ನೀರು ಬಿಡಲು ಆಗುವುದಿಲ್ಲ, ತಮಿಳುನಾಡಿಗೂ ಬಿಡಲು ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಈ ಹಿಂದಿನ ಅಧಿವೇಶನದಲ್ಲಿ ವ್ಯಕ್ತಪಡಿಸಿದ್ದೆವು.
ಸುಪ್ರೀಂಕೋರ್ಟ್ ಸೆ.20 ರ ಆದೇಶದಲ್ಲಿ ಪ್ರತಿದಿನ ಸೆ.27 ರವರೆಗೆ 6 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶಿಸಿತು. ಅದರ ಜೊತೆಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೂ ಆದೇಶಿಸಿತ್ತು.ಕೂಡಲೇ ಸೆ.21 ರಂದೇ ಸರ್ವಪಕ್ಷಗಳ ಸಭೆ ನಡೆಸಿದೆವು. ಸಭೆಯಲ್ಲಿ ನೀರು ಬಿಡಲು ಸಾಧ್ಯವಿಲ್ಲವೆಂಬ ಸರ್ವಸಮ್ಮತ ಸಲಹೆ ನೀಡಲಾಯಿತು.ಸೆ.23 ರಂದು ಕುಡಿಯಲು 24.11 ಟಿಎಂಸಿ ನೀರು ಬೇಕಾಗಿತ್ತು, ಇದನ್ನು ಲೆಕ್ಕ ಹಾಕಿದ್ದೆವು.ಇದೆಲ್ಲವೂ ಲೆಕ್ಕ ಹಿಡಿದರೆ ಇರುವ 27 ಟಿಎಂಸಿ ನೀರೂ ಸಾಕಾಗುವುದಿಲ್ಲ. ಅದಕ್ಕಾಗಿ ಸೆ.23 ರಂದು ಕುಡಿಯಲು ಮಾತ್ರವೆಂಬ ನಿರ್ಣಯ ಮಾಡಿದ್ದೆವು.
ಕಾವೇರಿ ಕೊಳ್ಳದ 600 ಹಳ್ಳಿಗಳು ಸೇರಿ ಬೆಂಗಳೂರಿಗೂ ಕುಡಿಯುವ ನೀರು ನೀಡುವ ಉದ್ದೇಶ ನಮಗಾಗಿತ್ತು.ಕೋರ್ಟ್ ಜೊತೆ ಸಂಘರ್ಷ ಮಾಡುವ ಉದ್ದೇಶ ನಮಗಿಲ್ಲ, ಯಾವತ್ತೂ ಮಾಡಿಲ್ಲ, ನೀರನ್ನೂ ನಾವು ಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
ನಾವು ಎಂದಿಗೂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಎಂದಿಗೂ ಹೇಳಿಲ್ಲ, 2006-07 ರಲ್ಲಿ353 ಟಿಎಂಸಿ ನೀರು ಕೊಟ್ಟಿದ್ದೇವೆ. 2008-09 ರಲ್ಲಿ 210 ಟಿಎಂಸಿ, 2010-11 ರಲ್ಲಿ 211 ಟಿಎಂಸಿ ,2011-12 ರಲ್ಲಿ 211 ಟಿಎಂಟಿ, 2012-13 ರಲ್ಲಿ 100 ಟಿಎಂಸಿ ನೀರು ಬಿಟ್ಟಿದ್ದೇವೆ. ಮತ್ತೆ 2013-14 ರಲ್ಲಿ 259 ಟಿಎಂಸಿ, 2014-15 ರಲ್ಲಿ 229 ಟಿಎಂಸಿ, ಕಳೆದ ವರ್ಷ ಅಂದರೆ 2015-16 ರಲ್ಲಿ 250 ಟಿಎಂಸಿ ನೀರು ಬಿಟ್ಟಿದ್ದೇವೆ ಹಾಗೂ ಪ್ರಸ್ತುತ ವರ್ಷದಲ್ಲಿ 53.2 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿಗಳು ಅಂಕಿ-ಅಂಶದೊಂದಿಗೆ ವಿವರಿಸಿದರು.
1 ಲಕ್ಷ 70 ಸಾವಿರ ಕ್ಯೂಸೆಕ್ ನೀರನ್ನು ಈವರೆಗೆ ತಮಿಳುನಾಡಿಗೆ ಬಿಟ್ಟಿದ್ದೇವೆ, ನಮಗೆ ಕುಡಿಯಲು ನೀರಿದ್ದಾಗ ಮಾತ್ರ ಅಸಹಾಯಕತೆಯಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗಲಿಲ್ಲ, ಕೋರ್ಟ್ ಆದೇಶ ವಿರುದ್ಧ ನಾವೇನು ಮಾಡಿದ್ದೇವೆ ಎಂದು ಪ್ರಶ್ನಿಸಿದರು. ಎಲ್ಲಾ ವರ್ಷಗಳಲ್ಲೂ ಕೂಡ 192 ಟಿಎಂಸಿ ಗಿಂತ ಹೆಚ್ಚು ನೀರು ಹೋಗಿದೆ. ಒಟ್ಟಾರೆ ನಾವು ಬಿಡಬೇಕಿದ್ದ ನೀರಿಗಿಂತ 1400 ಟಿಎಂಸಿ ನೀರು ಹೆಚ್ಚು ಹೋಗಿದೆ. ಕರ್ನಾಟಕ ಒಕ್ಕೂಟದ ವ್ಯವಸ್ಥೆಯಲ್ಲಿದೆ.ನಮಗೆ ಅನ್ಯಾಯವಾಗಿದ್ದರೂ ನೀರು ಬಿಟ್ಟಿದ್ದೇವೆ.
ಕುಡಿಯುವ ನೀರು ಸಂವಿಧಾನದ ಹಕ್ಕು, ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಲಾಗಿದೆ.ಮೊದಲು ಕುಡಿಯಲು, ನಂತರ ಬೆಳೆ, ನಂತರ ವಿದ್ಯುತ್ ಗೆ ಆದ್ಯತೆ ನೀಡಲಾಗಿದೆ. ನಾವು ಅದನ್ನೇ ಪಾಲಿಸಿದ್ದೇವೆ ಎಂದು ಹೇಳಿದರು. ಸುಪ್ರೀಂನಿಂದ ಈವರೆಗ 6 ಆದೇಶಗಳು ಬಂದಿವೆ. ನೀರು ನೀಡು ಬಿಡಿ ಎಂದೇ ಹೇಳಲಾಗಿದೆ. 18 ಲಕ್ಷದ 85 ಸಾವಿರ ಎಕರೆಗೆ ಬೆಳೆ ಬೆಳೆಯಲು ಟ್ರಿಬ್ಯುನಲ್ ಅವಕಾಶ ಮಾಡಿಕೊಟ್ಟಿದೆ. ಆದರೆ ಮಳೆ ಕೊರತೆಯಿಂದ ಈ ಬಾರಿ ಕೇವಲ 6 ಲಕ್ಷ 15 ಸಾವಿರ ಮಾತ್ರ ಬಿತ್ತನೆ ಮಾಡಲಾಗಿದೆ. ಮಳೆ ಕೊರತೆಯಿಂದ ರೈತರಿಗೆ ಬೆಳೆ ಬೆಳೆಯದಂತೆ ಮನವಿ ಮಾಡಿದ್ದೆವು. 1 ಲಕ್ಷದ 88 ಸಾವಿರ ಎಕರೆಗೆ ಹೇಮಾವತಿ ನಾಲೆ ಪ್ರದೇಶದಲ್ಲಿ ನೀರು ಕೊಡಲಾಗಲಿಲ್ಲ. ಬೆಳೆ ಒಣಗಿಹೋಯಿತು, ರೈತರು ತುಂಬಾ ಸಂಕಷ್ಟ ಪರಿಸ್ಥಿತಿ ಎದುರಿಸಿದರು. ಈಗ 4 ಲಕ್ಷದ 26 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆ ಬೆಳೆಯಲಾಗಿದೆ. ಇದಕ್ಕೂ ಸೆ.17 ಕ್ಕೆ ಮಾತ್ರ ನೀರು ಹರಿಸಲಾಗಿದೆ ಎಂದು ಸವಿವರವಾಗಿ ಹೇಳಿ, ಚಕಿತಗೊಳಿಸಿದರು.
ಈಗ ಬದಲಾದ ಪರಿಸ್ಥಿತಿ ಇದೆ- ಸಿಎಂ
ಅಲ್ಪಸ್ವಲ್ಪ ಮಳೆಯಿಂದಾಗಿ ಸೆ.23 ಕ್ಕೆ ಹೋಲಿಸಿದರೆ ಇಂದಿನ ಜಲಾಶಯದ ನೀರಿನ ಮಟ್ಟ 34.13 ಟಿಎಂಸಿ ಇದೆ.ಒಟ್ಟು ಆರೂವರೆ ಟಿಎಂಸಿ ಹೆಚ್ಚಾಗಿದೆ. ನಮ್ಮಲ್ಲಿ ನೀರಿರುವ ಬಗ್ಗೆ ಸುಪ್ರೀಂಕೋರ್ಟ್ ತಿಳಿದಿದೆ.ತಮಿಳುನಾಡಿಗೂ ಗೊತ್ತಿದೆ ಎಂದು ನೇರ ಮಾತಕತೆಯ ತಮ್ಮ ಶೈಲಿಯಲ್ಲಿ ನುಡಿದ ಸಿಎಂ ಸಿದ್ದರಾಮಯ್ಯ ನಾರಿಮನ್ ಸಲಹೆ ನೀಡಿದರೂ ನಿರ್ಣಯ ಕೈಗೊಂಡಿದ್ದರಿಂದ ನೀರು ಬಿಡಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದೆವು. ನೀರು ಬಿಡಲಾರದ ಸ್ಥಿತಿ ನಿರ್ಮಾಣವಾಗಿರುವುದರಿಂದ ನೀರು ಬಿಡಲಾಗಿಲ್ಲ, ಇದೀಗ ರೈತರ ಬೆಳೆ ಒಣಗುತ್ತಿರುವುದರಿಂದ ಬೆಳೆಗಳಿಗೆ ನೀರು ಬಿಡಲಾಗುವುದು ಎಂದು ಹೇಳಿದರು.
ಸೆ.29 ರಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರು ಉಭಯ ರಾಜ್ಯಗಳ ಸಭೆ ನಡೆಸಿದರು.ಸಭೆಯಲ್ಲಿ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಭಾಗವಹಿಸಿದ್ದರು.ನಮ್ಮ ಬಳಿ ನೀರಿಲ್ಲ, ನಾವು ಸದನದಲ್ಲಿ ನಿರ್ಣಯ ಕೈಗೊಂಡಿದ್ದೇವೆ ಎಂಬ ಬಗ್ಗೆ ಸಭೆಯ ಮುಂದಿಡಲಾಯಿತು. ಆದರೆ ತಾವು ನಿರ್ಧಾರ ಕೈಗೊಳ್ಳಲು ಬರುವುದಿಲ್ಲ, ನ್ಯಾಯಾಲಯಕ್ಕೆ ವರದಿ ಮಂಡಿಸುತ್ತೇವೆ ಎಂದು ಹೇಳಿದರು. ಅಂತೆಯೇ ವರದಿ ನೀಡಿದರು. ಆದರೆ ಸುಪ್ರೀಂಕೋರ್ಟ್ ಸೆ.30 ರಂದು ನಾಲ್ಕು ದಿನದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಲು ಆದೇಶಿಸಿತು. ಇನ್ನು ಈ ಮಂಡಳಿಗೆ ತಮ್ಮ ಪ್ರತಿನಿಧಿಗಳು ಕಳುಹಿಸಲು ಹೇಳಿತು. ಆದರೆ ಸರ್ವಪಕ್ಷ ಸಭೆಯ ಸಲಹೆಯಂತೆ ನಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡಲಾಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.
ಸೆ.30 ರಂದು ಸುಪ್ರೀಂಕೋರ್ಟ್ ತೀರ್ಪು ತುಂಬಾ ಖಾರವಾಗಿತ್ತು ಎಂದರು.
ಹೀಗಾಗಿ ಅಂದು ನೀರು ಬಿಡಲಾಗಲಿಲ್ಲ. ಇಂದು ಬದಲಾದ ಸನ್ನಿವೇಶದಲ್ಲಿ ಅಲ್ಪಸ್ವಲ್ಪ ಮಳೆಯಿಂದಾಗಿ ಆರೂವರೆ ಟಿಎಂಸಿ ನೀರಿನ ಸಂಗ್ರಹವನ್ನು ಇತರೆ ಕಾರ್ಯಗಳಿಗೆ ಬಳಸಬಹುದಾಗಿದೆ ಹೀಗಾಗಿ ಕೃಷಿಗಾಗಿ ನೀರು ನೀಡಬೇಕಾದ ಅಗತ್ಯವಿದೆ ಎಂದು ಹೇಳಿ, ನಿರ್ಣಯವನ್ನು ಸಮ್ಮತಿಸಿದರು.
ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ನಿರ್ಣಯವನ್ನು ಮತಕ್ಕೆ ಹಾಕಿದಾಗ ವಿಧಾನಸಭೆಯಲ್ಲಿ ಅವಿರೋಧವಾಗಿ ಸದಸ್ಯರು ಅಂಗೀಕರಿಸಿದರು. ಇತ್ತ ವಿಧಾನಪರಿಷತ್ ನಲ್ಲಿ ವಿರೋಧದ ಹೊರತಾಗಿಯೂ ನಿರ್ಣಯ ಅಂಗೀಕಾರವಾಯಿತು.ನಿರ್ಣಯದ ಕೊನೇ ಸಾಲಿನಲ್ಲಿ ರಾಜ್ಯದ ಹಿತದೃಷ್ಟಿಯೆಂದು ಸೇರಿಸಬೇಕೆಂದು ಪ್ರತಿಪಕ್ಷ ನಾಯಕರಾದ ಕೆ.ಎಸ್. ಈಶ್ವರಪ್ಪ, ಪುಟ್ಟಣ್ಣಯ್ಯ ಒತ್ತಾಯಿಸಿದರು. ನಿರ್ಣಯ ಅಂಗೀಕಾರದ ನಂತರ ನಂತರ ಉಭಯ ಸದನಗಳನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.
ನಾರಿಮನ್ ಸಮರ್ಥನೆ:
ನನ್ನ ಪತ್ರವನ್ನು ನ್ಯಾಯಾಲಯದ ಮುಂದೆ ಓದಿದ್ದಾರೆ.ಅದನ್ನು ಓದಲು ನಾವೇ ಹೇಳಿದ್ದೆವು. ತಮ್ಮ ಕರ್ತವ್ಯ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ನಾರಿಮನ್ ಅವರು ಕಳೆದ 37 ವರ್ಷಗಳಿಂದ ಕರ್ನಾಟಕದ ಪರ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ತಮ್ಮದೇ ಗೌರವ ಸಂಪಾದಿಸಿದ್ದಾರೆ. ನಾರಿಮನ್ ನಮ್ಮ ಕಾಲದ ವಕೀಲರಲ್ಲ ದೇವೇಗೌಡರಿಂದ ಹಿಡಿದು ಎಲ್ಲಾ ಅವಧಿಗಳಲ್ಲೂ ಅವರೇ ಸಿಎಂ ಆಗಿದ್ದವರು ಎಂದು ಹೇಳಿದರು. ನೀರು ಬಿಡಲಾಗಿಲ್ಲ ಎಂಬ ಕಾರಣಕ್ಕಾಗಿ ಅವರು ವಾದ ಮಂಡಿಸಲು ಕಷ್ಟಸಾಧ್ಯ ಎಂದು ಹೇಳಿದ್ದರು. ಇದಕ್ಕಾಗಿ ವಾದ ಮಾಡಿಲ್ಲ ಎಂದು ಸಿಎಂ ತಿಳಿಸಿದರು.
ಅಲ್ಲದೇ ಕಾವೇರಿ ವಿವಾದದಲ್ಲಿ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಧನ್ಯವಾದ ಅರ್ಪಿಸಿದರು.
Discussion about this post