Read - 4 minutes
ನವದೆಹಲಿ/ಬೆಂಗಳೂರು, ಸೆ.30: ಕೇಂದ್ರದ ಮಧ್ಯಸ್ಥಿಕೆ, ನೀರಿನ ಕೊರತೆ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ಶೇಖರಣೆಯಾಗಿರುವ ನೀರು ಮುಂತಾದ ಅಂಶಗಳು ಸುಪ್ರೀಂಕೋರ್ಟ್ ಗೆ ವಾಸ್ತವದ ಚಿತ್ರಣ ಮನವರಿಕೆಯಾಗಬಹುದೆಂಬ ರಾಜ್ಯದ ನಿರೀಕ್ಷೆ ಸಂಪೂರ್ಣ ಹುಸಿಯಾಯಿತು. ಇದ್ಯಾವುದನ್ನೂ ಪರಿಗಣಿಸದ ಸುಪ್ರೀಂಕೋರ್ಟ್ ಪೀಠ ನೀವು ನೀರು ಬಿಟ್ಟಿಲ್ಲ, ನೀರು ಬಿಡಿ, ಎಂಬ ಒಂದೇ ಒಂದಂಶಕ್ಕೆ ಅಂಟಿಕೊಂಡು ತೀರ್ಪು ನೀಡಿತು. ನಿನ್ನೆಯಷ್ಟೇ ನಡೆದ ಕೇಂದ್ರದ ಮಧ್ಯಸ್ಥಿಕೆ ಸಭೆಯಲ್ಲಿ ಅಧ್ಯಯನ ತಂಡ ಕಳುಹಿಸುವ ಬಗ್ಗೆ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ ತಮಿಳುನಾಡು ವಿರೋಧವ್ಯಕ್ತಪಡಿಸಿತ್ತು.
ಇಂದೂ ಕೂಡ ನ್ಯಾಯಾಲಯದಲ್ಲಿ ವಾಸ್ತವ ಅಧ್ಯಯನ ನಡೆಸಬೇಕೆಂಬುದೇ ರಾಜ್ಯದ ಆಶಯವಾಗಿತ್ತು. ಆದರೆ ಹಳೆಯ ಆದೇಶದ ಪ್ರಯೋಗ ಮಾಡಿದ ಸುಪ್ರೀಂ ಪೀಠ ಗಡಿಬಿಡಿಯಲ್ಲಿ ನೀರು ಬಿಡಬೇಕಾದ ತೀರ್ಪು ನೀಡಿದ್ದು, ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ.
ಅಕ್ಟೋಬರ್ 1 ರಿಂದ ಅ.6 ರವರೆಗೆ ಪ್ರತಿನಿತ್ಯ 6ಸಾವಿರ ಕ್ಯೂಸೆಕ್ ನೀರು ಬಿಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 6 ರಂದು ಮುಂದೂಡಲಾಗಿದೆ.
ನ್ಯಾ.ದೀಪಕ್ ಮಿಶ್ರಾ ಹಾಗೂ ನ್ಯಾ.ಉದಯ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿ, ನ್ಯಾಯಾಲಯದ ಆದೇಶ ಪಾಲಿಸದಿರುವುದಕ್ಕೆ ಕರ್ನಾಟಕದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದರಿಂದ ನ್ಯಾಯಾಲಯದ ಘನತೆಗೆ ಧಕ್ಕೆಯಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
ಅ.1 ರಿಂದ ಅ.6 ರವರೆಗೆ ಆರು ದಿನಗಳ ಕಾಲ ಪ್ರತಿನಿತ್ಯ 6 ಸಾವಿರ ಕ್ಯೂಸೆಕ್ ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶಿಸಿದೆ.
ಇನ್ನು ಮೂರು ದಿನಗಳೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ನಾಳೆ ಸಂಜೆ 4ಗಂಟೆಯೊಳಗೆ ಮಂಡಳಿಯ ಪ್ರತಿನಿಧಿಗಳ ಮಾಹಿತಿ ನಮಗೆ ಕೊಡಿ ಎಂದು ಕೋರ್ಟ್ ಸೂಚಿಸಿದೆ.
ಕೇಂದ್ರ ಸರ್ಕಾರ ಕೂಡ ಮಂಡಳಿ ರಚನೆಗೆ ಸಮ್ಮತಿಸಿದೆ.
ಸುಪ್ರೀಂಕೋರ್ಟ್ನಲ್ಲಿ ಇಂದು ಯಾವುದೇ ವಾದ ಮಾಡುವುದಿಲ್ಲ ಎಂದು ಕರ್ನಾಟಕ ಪರ ವಕೀಲ ಪಾಲಿ ನಾರಿಮನ್ ಕೂಡ ಸುಮ್ಮನಾಗಿದ್ದರು.
ನೀರು ಬಿಡಿ:
ಅ.1 ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಉದಯಲಲಿತ್ ಅವರ ವಿಭಾಗೀಯ ಪೀಠ ಆದೇಶ ನೀಡಿದೆ.
ಈ ಮೊದಲು ಸೆ.20 ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂಕೋರ್ಟ್ ನಾಲ್ಕು ವಾರಗಳೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿತ್ತು. ಆ ಸಂದರ್ಭದಲ್ಲಿ ಸೆ.21ರಿಂದ 27 ರವರೆಗೂ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ಆದೇಶಿಸಲಾಗಿತ್ತು. ಆದರೆ ಈ ಆದೇಶ ಜಾರಿ ಮಾಡಲಾಗದೆ ರಾಜ್ಯ ಸರ್ಕಾರ ವಿಧಾನಮಂಡಳದಲ್ಲಿ ಕಾವೇರಿ ಕೊಳ್ಳದ ಜಲಾಶಯಗಳ ನೀರು ಕುಡಿಯುವ ನೀರಿಗೆ ಮಾತ್ರ ಬಳಸುವಂತೆ ಸರ್ವಾನುಮತದ ನಿರ್ಣಯ ತೆಗೆದುಕೊಂಡಿತ್ತು. ಸೆ.27ರಂದು ಮತ್ತೆ ಎರಡನೆ ಬಾರಿ ಆದೇಶ ನೀಡಿದ ಸುಪ್ರೀಂಕೋರ್ಟ್ ಸೆ.30ರವರೆಗೆ 3 ದಿಗಳ ಕಾಲ ಆರು ಸಾವಿರ ಕ್ಯೂಸೆಕ್ನಂತೆ 18 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಎರಡು ಬಾರಿ ಆದೇಶ ನೀಡಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ನಿರ್ಣಯವನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತಾದರೂ, ಅದನ್ನು ನ್ಯಾಯಾಲಯ ಪರಿಗಣಿಸಿರಲಿಲ್ಲ. ವಿಧಾನಮಂಡಲದ ಆದೇಶಕ್ಕೂ ನಮಗೂ ಸಂಬಂಧ ಇಲ್ಲ. ಮೊದಲು ನೀರು ಬಿಡಿ ಎಂದಿತ್ತು. ಜೊತೆಗೆ ಎರಡು ರಾಜ್ಯಗಳ ನಡುವೆ ಸಂಧಾನ ನಡೆಸುವಂತೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಅವರಿಗೆ ಸೂಚನೆ ನೀಡಿತ್ತು. ನಿನ್ನೆ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರು ನಡೆಸಿದ ಸಂಧಾನವೂ ವಿಫಲವಾಗಿತ್ತು.
ಹೊಸ ಅಸ್ತ್ರ:
ವಿಧಾನಮಂಡಲದಲ್ಲಿ ಜಾಣ ನಿರ್ಣಯ ತೆಗೆದುಕೊಂಡ ಸಕರ್ಾರದ ನಡವಳಿಕೆ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಸುಪ್ರೀಂಕೋರ್ಟ್ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಶೀಘ್ರವೇ ರಚಿಸಲು ಸಾಧ್ಯವೇ ಎಂದು ಇಂದಿನ ವಿಚಾರಣೆ ವೇಳೆ ನ್ಯಾಯಾಧೀಶರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಸೆ.20ರ ಆದೇಶದ ಅನುಸಾರ ನಾಲ್ಕು ವಾರಗಳ ಕಾಲಾವಕಾಶ ಇರುವುದಾಗಿ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ನೆನಪಿಸಿದರಾದರೂ, ಅಲ್ಲಿಯವರೆಗೂ ಕಾಯದೆ ಮೂರು ದಿನಗಳೊಳಗಾಗಿ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನ್ಯಾಯಾಲಯದ ಆದೇಶದಂತೆ ಅಕ್ಟೋಬರ್ 4 ರೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾಗಬೇಕು. ನಾಳೆಯೊಳಗಾಗಿ ಕಾವೇರಿ ಕೊಳ್ಳದ ನಾಲ್ಕೂ ರಾಜ್ಯಗಳು ನಿರ್ವಹಣಾ ಮಂಡಳಿಯನ್ನು ಪ್ರತಿನಿಧಿಸುವ ತಮ್ಮ ಪ್ರತಿನಿಧಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು.
ಅ.5ರೊಳಗಾಗಿ ಕಾವೇರಿ ಕೊಳ್ಳದ ಜಲಾನಯನ ವ್ಯಾಪ್ತಿಯಲ್ಲಿನ ವಸ್ತುಸ್ಥಿತಿ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕು ಎಂದು ಸೂಚಿಸಿ ಮುಂದಿನ ವಿಚಾರಣೆಯನ್ನು ಅ.6ಕ್ಕೆ ಮುಂದೂಡಿದೆ.
ಕೈಕೊಟ್ಟ ನಾರಿಮನ್:
ಇಂದಿನ ವಿಚಾರಣೆ ವೇಳೆ ಕರ್ನಾಟಕ ಪರ ವಕೀಲ ನಾರಿಮನ್ ಅವರು ನಾನು ನ್ಯಾಯಾಂಗದ ಅಧಿಕಾರಿಯಾಗಿದ್ದೇನೆ. ಇವತ್ತು ನಾನು ವಾದ ಮಾಡುವುದಿಲ್ಲ ಮುಖ್ಯಮಂತ್ರಿಯವರು ಒಂದು ಟಿಪ್ಪಣಿ ನೀಡಿದ್ದಾರೆ, ಅದನ್ನು ನ್ಯಾಯಾಲಯಕ್ಕೆ ಮಂಡಿಸುತ್ತಿದ್ದೇನೆ. ಇನ್ಯಾವ ವಾದವನ್ನು ಮಾಡುವುದಿಲ್ಲ ಎಂದು ಹೇಳಿದರು. ತಮಿಳುನಾಡಿನ ವಕೀಲ ಶೇಖರ್ ನಾಫೇಡ್ ಕೂಡ ನಾರಿಮನ್ ರಂತೆ ತಾವು ವಾದ ಮಾಡುವುದಿಲ್ಲ ಎಂದು ಮೌನಕ್ಕೆ ಶರಣಾದರು.
ವಾದ ಮಾಡಲು ಹಿಂಜರಿದ ನಾರಿಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟಿಪ್ಪಣಿ ಮತ್ತು ತಾವು ವಾದ ಮಾಡುವುದಿಲ್ಲ ಎಂಬ ಪತ್ರ ಸೇರಿ ಎರಡು ಲಿಖಿತ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ನಾರಿಮನ್ ನಿಲುವಿಗೆ ಸುಪ್ರೀಂಕೋರ್ಟ್ ಮೆಚ್ಚುಗೆ ವ್ಯಕ್ತ ಪಡಿಸಿತ್ತು.
ನ್ಯಾಯಾಲಯ ಘನತೆಗೆ ಧಕ್ಕೆ:
ಈ ನಡುವೆ ನ್ಯಾಯಾಧೀಶರು ನೀರು ನಿರ್ವಹಣಾ ಮಂಡಳಿಯನ್ನು ಶೀಘ್ರ ರಚಿಸುವಂತೆ ಆದೇಶಿಸಿದರು. ಮೂರು ದಿನಗಳ ಒಳಗೆ ನೀರು ನಿರ್ವಹಣಾ ಮಂಡಳಿಯನ್ನು ರಚನೆ ಮಾಡಿ ಬೇಕಿದ್ದರೆ ಅಲ್ಲಿವರೆಗೂ ವಿಚಾರಣೆಯನ್ನು ಮುಂದೂಡುತ್ತೇವೆ ಎಂದು ನ್ಯಾಯಾಧೀಶರು ಹೇಳಿದರು. ಜೊತೆಗೆ ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ನ ತೀರ್ಪನ್ನು ಪಾಲಿಸದೆ ನ್ಯಾಯಾಲಯದ ಘನತೆಗೆ ಧಕ್ಕೆ ತಂದಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದೆ. ಕರ್ನಾಟಕ ಭಾರತದ ಒಕ್ಕೂಟ ವ್ಯವಸ್ಥೆಯಲ್ಲೇ ಇರುವ ರಾಜ್ಯಗಳಲ್ಲಿ ಒಂದು. ದೇಶದ ಎಲ್ಲಾ ರಾಜ್ಯಗಳು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲೇಬೇಕು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಅ.6ರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಬರಸಿಡಿಲಿನ ಆದೇಶ:
ನ್ಯಾಯಾಲಯದ ಈ ತೀರ್ಪು ರಾಜ್ಯಕ್ಕೆ ಮಹಾಲಯ ಅಮಾವಾಸ್ಯೆಯಂದು ಬರಸಿಡಿಲಿನಂತೆ ಬಂದೆರಗಿದೆ. ತನ್ನ ಆದೇಶ ಪಾಲಿಸಿಲ್ಲ ಎಂಬ ಸಿಟ್ಟಿಗೆ ಪೂರ್ವಾಗ್ರಹ ಪೀಡಿತವಾಗಿ ಪರಿಷ್ಕೃತ ಆದೇಶ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಇದೇ ನ್ಯಾಯಪೀಠ ನೀಡಿದ್ದ ನಾಲ್ಕು ವಾರದ ಕಾಲಾವಕಾಶವನ್ನು ಬದಿಗಿಟ್ಟು, ಮೂರು ದಿನಗಳೊಳಗಾಗಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿರುವುದು ಕರ್ನಾಟಕದ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ ಎಂದು ಆರೋಪಗಳು ಕೇಳಿ ಬಂದಿದೆ.
ನ್ಯಾಯಾಧೀಶರು ಪ್ರತಿಷ್ಠೆಗೆ ಬಿದ್ದವರಂತೆ ಕರ್ನಾಟಕದ ಜೊತೆ ಸಂಘರ್ಷಕ್ಕಿಳಿದಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನ್ಯಾಯಾಂಗ ತನ್ನ ಮಿತಿಯಲ್ಲೇ ಕೆಲಸ ಮಾಡಬೇಕು. ಶಾಸಕಾಂಗ ಕೂಡ ತನ್ನದೇ ಪರಿಧಿಯಲ್ಲಿರಬೇಕು. ಆದರೆ ಸುಪ್ರೀಂಕೋರ್ಟ್ ನ ಈ ತೀರ್ಪು ಹಳಿ ತಪ್ಪಿದಂತಿದೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ.
ನಾಳೆ ಸರ್ವ ಪಕ್ಷ ಸಭೆ
ಸುಪ್ರೀಂಕೋರ್ಟ್ ತೀಪಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ಕರೆದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಸಭೆ ನಡೆಯಲಿದೆ. ಇನ್ನೂ ಈ ಸಭೆಯಲ್ಲಿ ಎಲ್ಲಾ ಪಕ್ಷದ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪಿನ ಆದೇಶದ ಪ್ರತಿ ಇನ್ನೂ ನಮ್ಮ ಕೈಗೆ ಸೇರಿಲ್ಲ. ಪ್ರತಿ ಸಿಕ್ಕ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.
ನಾಳೆ ಸರ್ವ ಪಕ್ಷ ಸಭೆಯಲ್ಲಿ ಮತ್ತೊಮ್ಮೆ ಚರ್ಚೆ ನಡೆಸಿದ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಇದು ಅನ್ಯಾಯದ ತೀರ್ಪು: ಹಿರಿಯ ವಕೀಲ ಬಿವಿ ಆಚಾರ್ಯ ಅಸಮಾಧಾನ
ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅನ್ಯಾಯದ ಪರಮಾವಧಿ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶ ನೀಡಲು ಸುಪ್ರೀಂಕೋರ್ಟ್ ನ ಇಬ್ಬರು ನ್ಯಾಯಮೂರ್ತಿಗಳ ವಿಭಾಗೀಯ ಪೀಠಕ್ಕೆ ಅಧಿಕಾರವಿಲ್ಲ.
ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಕುರಿತು ಸುಪ್ರೀಂಕೋರ್ಪಿನ ಮೂರು ಜನರ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ. ಅಲ್ಲಿ ತೀರ್ಮಾನವಾಗದ ಹೊರತು ಇಬ್ಬರು ಸದಸ್ಯರನ್ನೊಳಗೊಂಡ ವಿಭಾಗೀಯ ಪೀಠ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶ ನೀಡುವುದು ಅಸಂವಿಧಾನಿಕ.
ಇದು ನಿಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕಾಗಿತ್ತು. ಕೇಂದ್ರ ಸರ್ಕಾರವು ಕೂಡ ಈ ಪೀಠದ ವ್ಯಾಪ್ತಿಯನ್ನು ನೆನಪಿಸಬೇಕಿತ್ತು ಎಂದು ಹೇಳಿದ್ದಾರೆ.
ಸೆ.20ರಂದು ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತ ಪಡಿಸಿ ಅರ್ಜಿ ಸಲ್ಲಿಸಬೇಕಿತ್ತು, ಅಂತಹ ಅರ್ಜಿ ಸಲ್ಲಿಸದಿದ್ದರೆ ಅದು ದೊಡ್ಡ ಪ್ರಮಾದವಾಗಲಿದೆ. ಕನಿಷ್ಠ ಈಗಲಾದರೂ ವಿರೋಧ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಲಿ ಎಂದರು ಸಲಹೆ ನೀಡಿದರು.
ಮತ್ತೆ ತಮಿಳುನಾಡಿಗೆ ನೀರು ಬಿಡಬೇಕೆಂದು ಹೇಳಿರುವುದು ಅನ್ಯಾಯದ ಮೇಲಿನ ಅನ್ಯಾಯದ ಆದೇಶ. ಮೊದಲಿನಿಂದಲೂ ಇದೇ ರೀತಿಯ ತೀರ್ಪು ಬರುತ್ತಿದೆ. ಇದನ್ನು ಪಾಲಿಸಲು ಸಾಧ್ಯವಿಲ್ಲವೆಂದು ಸುಮ್ಮನೆ ಕುಳಿತುಕೊಳ್ಳಬೇಕು. ನ್ಯಾಯಾಲಯದಿಂದ ಏನೇ ಕ್ರಮ ಜರುಗಿಸಿದರೂ ಅದನ್ನು ಎದುರಿಸಲು ಸಿದ್ಧರಾಗಬೇಕೆಂದು ಆಚಾರ್ಯ ಸಲಹೆ ನೀಡಿದ್ದಾರೆ.
ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಮಾತನಾಡಿ, ನಮ್ಮ ರಾಜ್ಯದ ಪರ ವಕೀಲ ನಾರಿಮನ್ ಅವರು ಕರ್ನಾಟಕದ ನಿಲುವನ್ನು ಸಮರ್ಥಿಸಿಕೊಳ್ಳದೆ ಇರುವುದು ಖಂಡನಿಯ ಎಂದಿದ್ದಾರೆ.
ಒಂದು ವೇಳೆ ಅವರು ವಾದ ಮಾಡಲು ಮನಸ್ಸಿಲ್ಲ. ಕರ್ನಾಟಕ ರಾಜ್ಯದ ವಿಧಾನಮಂಡಲ ಅಧಿವೇಶನ ಮತ್ತು ಸರ್ವಪಕ್ಷ ಸಭೆ ತೆಗೆದುಕೊಂಡ ನಿರ್ಣಯಗಳು ಅವರಿಗೆ ಇಷ್ಟವಾಗದೆ ಇದ್ದರೆ ರಾಜ್ಯ ಸರ್ಕಾರ ಅದನ್ನು ಮೊದಲೆ ಗ್ರಹಿಸಬೇಕಿತ್ತು. ವಾದ ಮಾಡಲು ಬೇರೆ ವಕೀಲರನ್ನು ನೇಮಿಸಬೇಕಿತ್ತು ಎಂದು ಹೇಳಿದರು.
ತರಾತುರಿಯ ಆದೇಶ: ದೇವೇಗೌಡ
ಕಾವೇರಿ ವಿವಾದ ಕುರಿತ ಸುಪ್ರೀಂಕೋರ್ಟ್ ನ ಆದೇಶವನ್ನು ಇದು ತರಾತುರಿಯ ಆದೇಶ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೊಂದು ಮಹಾದುರಂತ ಎಂದಿದ್ದಾರೆ. ಸೆ.18ರಂದು ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಕಾವೇರಿ ನ್ಯಾಯಾಧಿಕರಣದ ತೀರ್ಪಿಗೆ ಆಕ್ಷೇಪಣೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ಅಷ್ಟೊರಳಗೆ ಈ ತೀರ್ಪು ಆಘಾತಕಾರಿಯಾಗಿದೆ. ಎಷ್ಟು ಮಾತನಾಡಿದರೂ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ವಕೀಲ ನಾರಿಮನ್ ಅವರ ನಿರ್ದೇಶನದಂತೆ ರಾಜ್ಯ ಸಕರ್ಾರ ನಡೆದುಕೊಂಡಿದೆ. ವಿಧಾನಮಂಡಳದ ನಿರ್ಣಯಕ್ಕೂ ಮುನ್ನಾ ಅವರನ್ನು ಸಂಪರ್ಕಿಸಲಾಗಿತ್ತು. ಎಲ್ಲವೂ ಅವರ ಸಲಹೆಯ ಮೇರೆಗೆ ನಡೆದಿದೆ ಎಂದಿದ್ದಾರೆ.
ನಗರದಲ್ಲಿ ನಿಷೇದಾಜ್ಞೆ ಜಾರಿ
ಕಾವೇರಿ ಪ್ರಕರಣದ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಮುಂದುವರೆದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ 400 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ನಗರದಾದ್ಯಂತ ಆಯಾಯ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಇಂದು ಮಧ್ಯರಾತ್ರಿ 1 ಗಂಟೆಯಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದೆ.
14 ಅರೆಸೇನಾಪಡೆ, 30 ಸಿಎಆರ್, 40 ಕೆಎಸ್ಆರ್ ಪಿ, ಐಟಿಬಿಪಿ , ಆರ್ ಎಎಫ್ ತುಕಡಿಯನ್ನು ನಿಯೋಜಿಸಲಾಗಿದೆ.
ಮಂಡ್ಯ:
ಶಾಂತಿ ಸುವ್ಯವಸ್ಥೆ, ಕಾನೂನು ಪಾಲನೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಂಡ್ಯ ಜಿಲ್ಲೆಯ ಮಂಡ್ಯ ಉಪವಿಭಾಗ ವ್ಯಾಪ್ತಿಯ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲ್ಲೂಕುಗಳ ಪೂರ್ಣ ವ್ಯಾಪ್ತಿಯಲ್ಲಿ ಅಕ್ಟೋಬರ್ 1 ರಿಂದ ಅಕ್ಟೋಬರ್ 3ರ ಮಧ್ಯರಾತ್ರಿಯ ವರೆಗೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಡ್ಯ ಉಪ ವಿಭಾಗದ ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಮತ್ತೆ ನಿಷೇಧಾಜ್ಙೆ ಮುಂದುವರಿಕೆ
ನಾಗಮಂಗಲ, ಕೆ.ಆರ್.ಪೇಟೆ ತಾಲೂಕು ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲೂ ನಿಷೇಧಾಜ್ಞೆ ಮುಂದುವರಿಸಲಾಗಿದೆ.
ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ಅಕ್ಟೋಬರ್ 1ರಿಂದ 3ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿದೆ.
Discussion about this post