Read - < 1 minute
ಶ್ರೀನಗರ, ಸೆ.13: ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನಾಕಾರರು ಹಾಗೂ ಭದ್ರತಾಪಡೆಗಳ ನಡುವಿನ ಘರ್ಷಣೆಗಳ ನಡುವೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರತ್ಯೇಕತಾವಾದಿಗಳು ಈದ್ ಪ್ರಾರ್ಥನೆ ನಂತರ ಪ್ರತಿಭಟನೆಗೆ ಕರೆ ನೀಡಿದ್ದರಿಂದ ಕಾಶ್ಮೀರದ ಎಲ್ಲಾ 10 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಈ ನಡುವೆ ಕಾಶ್ಮೀರದ ಬಂಡಿಪೋರಾದಲ್ಲಿ ಭದ್ರತಾಪಡೆ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಸೇನಾ ಸಿಬ್ಬಂದಿ ಗೋಲಿಬಾರ್ ನಡೆಸಿದ್ದಾರೆ. ಘಟನೆಯಲ್ಲಿ ಗುಂಡೇಟು ತಗುಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಕಾಶ್ಮೀರದ ಹಲವೆಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಇಂಟರ್ ನೆಟ್, ದೂರವಾಣಿ ಸೇವೆ ಸ್ಥಗಿತಗೊಳಿಸಲಾಗಿದೆ.
ಇನ್ನು ಶ್ರೀನಗರ ಸೇರಿದಂತೆ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಈದ್ ಸಂಬಂಧ ಸಾರ್ವಜನಿಕ ಸಭೆಗೆ ಆಯಾ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಇದೇ ಮೊದಲ ಬಾರಿಗೆ ಶ್ರೀನಗರದ ಪ್ರಖ್ಯಾತ ಹಜರತ್ ಬಾಲ್ ಸಮಾಧಿ ಬಳಿ ಮುಸಲ್ಮಾನರು ಪ್ರಾರ್ಥನೆ
ಸಲ್ಲಿಸಲಿಲ್ಲ. ಜನರು ಸ್ಥಳೀಯ ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿದೆ.
Discussion about this post