Read - 2 minutesನವದೆಹಲಿ, ಸೆ.1: ತಮ್ಮ ಮಹತ್ವಾಕಾಂಕ್ಷೆಯ ಜಿಯೋ ನೆಟ್ವರ್ಕ್ನ್ನು ಅನಾವರಣಗೊಳಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಜಿಯೋ ನೆಟ್ವರ್ಕ್ನಲ್ಲಿ ಭಾರತದೆಲ್ಲೆಡೆ ಇತರ ಯಾವುದೇ ನೆಟ್ವರ್ಕ್ಗೆ ಮಾಡಲಾಗುವ ಎಲ್ಲ ಧ್ವನಿ ಕರೆಗಳು ಉಚಿತ ಎಂದು ಘೋಷಿಸಿದ್ದಾರೆ.
ಮುಂಬೈನಲ್ಲಿ ನಡೆದ ರಿಲಯನ್ಸ್ ೪೨ನೆಯ ಷೇರುದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಯೋ ಜಾಲದಲ್ಲಿ ದೇಶದಾದ್ಯಂತ ರೋಮಿಂಗ್ ಶುಲ್ಕ ಶೂನ್ಯವಾಗಿರುತ್ತದೆ. ದೀಪಾವಳಿಯಂತಹ ಹಬ್ಬ-ಹರಿದಿನಗಳ, ರಜಾದಿನಗಳ ಸಂದೇಶಗಳಿಗೆ ಇನ್ನು ಮುಂದೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಘೋಷಿಸಿದರು.
ಜಿಯೋ ನೆಟ್ವರ್ಕ್ ಮೂಲಕ ಮತ್ತಷ್ಟು ಜನಪ್ರಿಯ ಸೇವೆಗಳನ್ನು ಒದಗಿಸಿರುವ ಮುಖೇಶ್ ಅಂಬಾನಿ, ಈಗ ಭಾರತೀಯರು ಡಾಟಾಗಿರಿ ಮಾಡಬಹುದು. ಜಿಯೋ ನೆಟ್ವರ್ಕ್ ಮೂಲಕ ಹೆಚ್ಚು ಡಾಟಾ ಬಳಸಿದಷ್ಟೂ ದರ ಕಡಿಮೆಯಾಗಲಿದೆ. ಡಾಟಾ ಕೊರತೆಯಿಂದ ಭಾರತವನ್ನು ಸಮೃದ್ಧ ಡಾಟಾ ಬಳಕೆಯತ್ತ ಕೊಂಡೊಯ್ಯುವುದು ರಿಲಯನ್ಸ್ ಜಿಯೋ ನೆಟ್ವರ್ಕ್ನ ಪ್ರಮುಖ ಉದ್ದೇಶವಾಗಿದೆ. ಜಿಯೋ ನೆಟ್ವರ್ಕ್ ಭಾರತವನ್ನು ವಿಶ್ವದಲ್ಲೇ ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಡಾಟಾ ಮಾರುಕಟ್ಟೆಯನ್ನಾಗಿ ಮಾಡಲಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು ಡಿಜಿಟಲ್ ಇಂಡಿಯಾಗೆ ಜಿಯೋ ನೆಟ್ವರ್ಕ್ ಸೇವೆಯನ್ನು ಅರ್ಪಿಸುತ್ತೇವೆ ಎಂದಿರುವ ಅಂಬಾನಿ, ವಿಶ್ವವೇ ಹೊಸ ಯುಗದತ್ತ ಸಾಗುತ್ತಿರಬೇಕಾದರೆ ಭಾರತೀಯರು ಹಿಂದೆ ಉಳಿಯುವಂತಿಲ್ಲ, ಯುವಕರಿಗೆ ಸರಿಯಾದ ವಾತಾವರಣ ನೀಡಿ ಅವರು ನಮ್ಮನ್ನು ಬೆರಗುಗೊಳಿಸುತ್ತಾರೆ ಎಂದು ಹೇಳಿದ್ದಾರೆ.
ಕಡಿಮೆ ಸಮಯ, ಹೆಚ್ಚು ಗ್ರಾಹಕರ ಗುರಿ
ರಿಲಯನ್ಸ್ ಜಿಯೋ ನೆಟ್ ವರ್ಕ್ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಗ್ರಾಹಕರನ್ನು ತಲುಪುವ ಗುರಿ ಹೊಂದಲಾಗಿದೆ ಎಂದಿರುವ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಮಾಚರ್್ 2017ರ ವೇಳೆಗೆ ಭಾರತದ ಜನಸಂಖ್ಯೆಯ ಶೇ.90 ರಷ್ಟನ್ನು 4ಜಿ ಸಂಪರ್ಕ ಜಾಲ ಒಳಗೊಳ್ಳಲಿದೆ ಎಂದು ಹೇಳಿದ್ದಾರೆ.
4ಜಿ ಮೊಬೈಲ್ ನೆಟ್ ವರ್ಕ್ ನಲ್ಲಿ ರೋಮಿಂಗ್ ಸೇರಿದಂತೆ ಎಲ್ಲಾ ದೇಶೀಯ ಧ್ವನಿ ಕರೆಗಳು ಉಚಿತವಾಗಿರಲಿದೆ. ವಿವಿಧ ಕಂಪನಿಗಳ ಪ್ರತಿಸ್ಫರ್ಧೆ ಹಿನ್ನೆಲೆಯಲ್ಲಿ ಡಾಟಾ ಬೆಲೆಗಳು ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ. ಮುಂಬೈನಲ್ಲಿ ನಡೆದ ರಿಲಯನ್ಸ್ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖೇಶ್ ಅಂಬಾನಿ, 2017ರ ಮಾರ್ಚ್ ವೇಳೆಗೆ 4 ಜಿ ಸಂಪರ್ಕ ಜಾಲವು ಭಾರತದ 1.25 ಶತಕೋಟಿ ಜನಸಂಖ್ಯೆಯಲ್ಲಿ ಶೇ.90 ರಷ್ಟನ್ನು ಒಳಗೊಳ್ಳಲಿದೆ. ಅಂತಿಮವಾಗಿ 18 ಸಾವಿರ ನಗರ ಹಾಗೂ 2,00,000 ಹಳ್ಳಿಗಳನ್ನೂ ಆವರಿಸಲಿದೆ ಎಂದು ಮಾಹಿತಿ ನೀಡಿದರು.
100 ಮಿಲಿಯನ್ ಗ್ರಾಹಕರ ಗುರಿ
ದೇಶದಾದ್ಯಂತ ರಿಲಯನ್ಸ್ 4ಜಿ ನೆಟ್ ವರ್ಕ್ ಆರಂಭಿಸಿದ ನಂತರ ಸಾಧ್ಯವಾದಷ್ಟೂ ಕಡಿಮೆ ಅವಧಿಯಲ್ಲೇ 10 ಕೋಟಿ ಗ್ರಾಹಕರನ್ನು ಪಡೆಯುವ ಗುರಿ ಹೊಂದಲಾಗಿದೆ ಎಂದು ಮುಖೇಶ್ ಆಶಯ ವ್ಯಕ್ತಪಡಿಸಿದ್ದಾರೆ. ಕಡಿಮೆ ಸಮಯದಲ್ಲೇ ಉದ್ದೇಶಿತ ಗುರಿ ಸಾಧಿಸುವ ಮೂಲಕ ನಿಸ್ತಂತು ಮೊಬೈಲ್ ವಲಯದಲ್ಲಿ ರಿಲಯನ್ಸ್ ಮಹತ್ವಾಕಾಂಕ್ಷೆ ಹಜ್ಜೆಯಿರಿಸಲಿದೆ.
ಇದಲ್ಲದೆ, ಎಲ್ವೈಎಫ್ ಬ್ರಾಂಡ್ನಡಿ ಗ್ರಾಹಕರ ಕೈಗೆಟುಕುವ ದರದಲ್ಲಿ 2,999 ರೂ.ಆರಂಭಿಕ ಮೌಲ್ಯದ 4ಜಿ ಸ್ಮಾರ್ಟ್ ಫೋನ್ ಗಳನ್ನು ರಿಲಯನ್ಸ್ ಕಂಪನಿ ಘೋಷಿಸಿದೆ.
ಜಿಯೋ ಆಫರ್ ಏನೇನು?
*ಉಚಿತ ಕರೆ, ಶೂನ್ಯ ರೋಮಿಂಗ್ ಶುಲ್ಕ
*50 ರೂ.ನಲ್ಲಿ ಪ್ರತೀ ಜಿಬಿಗೆ 45 ಯೋಜನೆ
*ವಿದ್ಯಾರ್ಥಿಗಳಿಗೆ ಶೇ.25 ಹೆಚ್ಚುವರಿ ಡಾಟಾ
*ಯೋಜನೆ ಆರಂಭಗೊಂಡ ಮೊದಲ ನಾಲ್ಕು ತಿಂಗಳು ಉಚಿತ ಡಾಟಾ ಸೇವೆ
*ಸಾಂದರ್ಭಿಕ ಬಳಕೆದಾರರಿಗೆ ಆರಂಭಿಕ 19 ರೂ.ದರದಲ್ಲಿ 10 ಯೋಜನೆಗಳು
*ಕಡಿಮೆ ಡಾಟಾ ಬಳಕೆದಾರರಿಗೆ ಮಾಸಿಕ 149 ರೂ. ಹಾಗೂ ಹೆಚ್ಚು ಡಾಟಾ ಬಳಕೆದಾರರಿಗೆ ಮಾಸಿಕ 4,999 ರೂ.
*ಕಡಿಮೆ ಕಾಲಾವಧಿಯಲ್ಲಿ 100 ಮಿಲಿಯನ್ ಗ್ರಾಹಕರ ಗುರಿ
*ಎಲ್ವೈಎಫ್ ಬ್ರಾಂಡ್ನಡಿ 2999 ರೂ.ಆರಂಭಿಕ ಮೌಲ್ಯದ ಹ್ಯಾಂಡ್ಸೆಟ್
*ಸೆಪ್ಟೆಂಬರ್ 5 ರಂದು ಔಪಚಾರಿಕ ಚಾಲನೆ
ಅತ್ಯಂತ ಕಡಿಮೆ ದರ
ಡಾಟಾಗೆ ಸಂಬಂಧಿಸಿದಂತೆ ಇನ್ನು ಮುಂದೆ ಗ್ರಾಹಕರು ಹೆಚ್ಚು ಹೆಚ್ಚು ಡಾಟಾಗಳನ್ನು ಉಪಯೋಗಿಸಿದರೆ ಕಡಿಮೆ ದರ ಅನ್ವಯ ವಾಗುವುದು. ವಿಶ್ವದಲ್ಲಿನ ಯಾವುದೇ ಡಾಟಾ ನೆಟ್ ವರ್ಕ್ ವಿಧಿಸುವ ದರಕ್ಕಿಂತ ಜಿಯೋ ನೆಟ್ ವರ್ಕ್ ಡಾಟಾ ಶುಲ್ಕ ಅತ್ಯಂತ ಕಡಿಮೆ ದರದ್ದಾಗಿರುತ್ತದೆ.
-ಮುಖೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ
Discussion about this post