ಮಡಿಕೇರಿ ಅ.24 :
ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿ ಸೇರಿದಂತೆ ನಾಲ್ವರನ್ನು ಪಿರ್ಯಾದಾರರನ್ನಾಗಿ ಪರಿಗಣಿಸಬೇಕೆಂದು ಸೆ.29 ರಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅ.24 ಕ್ಕೆ ನಿಗಧಿಯಾಗಿತ್ತಾದರೂ ನ್ಯಾಯಾಲಯ ಮತ್ತೆ ವಿಚಾರಣೆೆಯನ್ನು ಇದೇ ಡಿ.31ಕ್ಕೆ ಮುಂದೂಡಿತು.
ಕಳೆದ ಸೆ.29 ರಂದು ಡಿವೈಎಸ್ಪಿ ಗಣಪತಿ ಅವರ ಪುತ್ರ ನೇಹಾಲ್ ಪ್ರಕರಣದ ಕುರಿತು ಸಿಐಡಿ ಸಲ್ಲಿಸಿದ್ದ ‘ಬಿ’ ಶೀಟ್ ವರದಿಗೆ ಸಮ್ಮತಿ ಸೂಚಿಸುವ ಮೂಲಕ ಪ್ರಕರಣದಿಂದ ಹಿಂದಕ್ಕೆ ಸರಿದಿದ್ದರು. ಆದರೆ, ಕುತೂಹಲಕಾರಿ ಬೆಳವಣಿಗೆಯಲ್ಲಿ ಗಣಪತಿ ಅವರ ತಂದೆ ಕುಶಾಲಪ್ಪ, ತಾಯಿ ಪೊನ್ನಮ್ಮ, ಸಹೋದರ ಮಾಚಯ್ಯ ಮತ್ತು ಸಹೋದರಿ ಸಬಿತಾ ಅವರು, ಒಟ್ಟು ಪ್ರಕರಣದಲ್ಲಿ ತಮ್ಮನ್ನು ಪಿರ್ಯಾದಾರರನ್ನಾಗಿ ಪರಿಗಣಿಸುವಂತೆ ವಕೀಲರಾದ ಸುಮಂತ್ ಪಾಲಾಕ್ಷ ಅವರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಸೋಮವಾರ ಈ ಬಗ್ಗೆ ನ್ಯಾಯಾಲಯದ ನಿಲುವು ಏನಾಗಬಹುದೆನ್ನುವ ಕುತೂಹಲ ಮನೆ ಮಾಡಿತ್ತಾದರು ವಿಚಾರಣೆ ಮುಂದೂಡಲ್ಪಟ್ಟಿತು.
ಗಣಪತಿ ಅವರ ತಂದೆ ತಾಯಿಯನ್ನು ಒಳಗೊಂಡಂತೆ ನಾಲ್ವರನ್ನು ಪ್ರಕರಣದಲ್ಲಿ ಪಿರ್ಯಾದಾರರನ್ನಾಗಿ ಪರಿಗಣಿಸಿದಲ್ಲಿ ಒಟ್ಟು ಪ್ರಕರಣಕ್ಕೆ ಮತ್ತೆ ಜೀವ ಪಡೆದುಕೊಳ್ಳುವ ಹಿನ್ನೆಲೆಯಲ್ಲಿ ಡಿ.31 ರ ವಿಚಾರಣೆ ಕುತೂಹಲವನ್ನು ಕಾಯ್ದುಕೊಂಡಿದೆ.
News By: INDRESH
Discussion about this post