ನವದೆಹಲಿ, ಅ.25: ಅತ್ತ ಪಾಕಿಸ್ಥಾನದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಉಗ್ರ ದಾಳಿಯಲ್ಲಿ 60 ಮಂದಿ ತರಬೇತಿ ನಿರತ ಪೊಲೀಸರು ಸಾವನ್ನಪ್ಪಿರುವ ಬೆನ್ನಲ್ಲೇ, ಇತ್ತ ನವದೆಹಲಿಯ ಚಾಂದನೀ ಚೌಕ್‌ನಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಇಂದು ಮುಂಜಾನೆ 11.30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಗಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ. ಇಡೀ ಪ್ರದೇಶದಲ್ಲಿ ತೀವ್ರ ತಪಾಸಣೆ ನಡೆಸಲಾಗಿದ್ದು, ವಿಧಿ ವಿಜ್ಞಾನ ತಂಡದ ಸ್ಫೋಟದ ಕುರಿತು ಮಾಹಿತಿ ಕಲೆ ಹಾಕುತ್ತಿದೆ.
ಇದೇ ವೇಳೆ ಡಿಸಿಪಿ ಮಧುರ್ ವರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭಯೋತ್ಪಾದನಾ ನಿಗ್ರಹ ದಳ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ.ಆರಂಭದಲ್ಲಿ ಇದನ್ನು ಸಿಲಿಂಡರ್ ಸ್ಫೋಟ ಎಂದು ಭಾವಿಸಲಾಗುತ್ತಿತ್ತಾದರೂ, ಬಳಿಕ ಉಗ್ರರ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ. ಇದೀಗ ವಿಧಿವಿಜ್ಞಾನ ತಂಡದ ತಜ್ಞರು ಪರಿಶೀಲನೆ ನಡೆಸುತ್ತಿದ್ದು, ಸ್ಫೋಟ ನಡೆಸಿದ ಸ್ಥಳದಲ್ಲಿ ಪಟಾಕಿಯಲ್ಲಿ ಬಳಸಲಾಗುವಂತಹ ರಾಸಾಯನಿಕಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಭಯೋತ್ಪಾದಕರ ಕೃತ್ಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ಪೊಲೀಸರು ಈಗಾಗಲೇ ನಿರ್ಧರಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ…
Discussion about this post