Read - < 1 minute
ಸೂರಿ ನಿರ್ದೇಶನದ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರೆಬಲ್ ಸ್ಟಾರ್ ಅಂಬರೀಶ್, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ದೊಡ್ಮನೆ ಹುಡುಗ ಚಲನಚಿತ್ರ ಮಧ್ಯರಾತ್ರಿಯಿಂದಲೇ ರಾಜ್ಯದಾದ್ಯಂತ ಭರ್ಜರಿ ಓಪನಿಂಗ್ ಪಡೆದಿದೆ.
ರಾಜ್ಯದ ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆ ಮತ್ತು ಪಟ್ಟಣಗಳಲ್ಲಿ ರಾತ್ರಿಯಿಂದಲೇ ಅಪ್ಪು ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಜಮಾಯಿಸಿ ನೆಚ್ಚಿನ ನಟನ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.
ಚಿತ್ರದುರ್ಗದ ಬಸವೇಶ್ವರ ಹಾಗೂ ಯೂನಿಯನ್ ಥಿಯೇಟರ್ಗಳಲ್ಲಿ ಭರ್ಜರಿ ಓಪನಿಂಗ್ ಆಗಿದ್ದು ಈ ಚಿತ್ರ ಪ್ರೇಕ್ಷಕರ ಮನೆಗೆದ್ದಿದೆ. ಈ ಚಿತ್ರಮಂದಿರಗಳು ಹೌಸ್ ಫುಲ್ ಆಗಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಟಿಕೆಟ್ ಜೊತೆ ಲಾಡು ಹಂಚಿದರು.
ಮಂಡ್ಯದಲ್ಲೂ ಸಂಜಯ, ಮಹಾವೀರ ಚಿತ್ರಮಂದಿರಗಳಲ್ಲಿ ದೊಡ್ಮನೆ ಹುಡುಗ ಚಲನಚಿತ್ರ ತೆರೆಕಂಡಿದೆ. ಸಂಜಯ ಚಿತ್ರಮಂದಿರದಲ್ಲಿ ಇಂದು ಐದು ಪ್ರದರ್ಶನಹಾಗೂ ಮಹಾವೀರ ಥಿಯೇಟರ್ ನಲ್ಲಿ 4 ಪ್ರದರ್ಶನಗೊಳ್ಳುತ್ತಿದೆ.
ಅಂಬಿ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಚಿತ್ರಮಂದಿರದ ಹೊರಗೆ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಅವರ ಕಟೌಟ್ ಗಳು ರಾರಾಜಿಸುತ್ತಿದ್ದವು.
ಬಳ್ಳಾರಿಯ ಶಿವಗಂಗಾ ಥಿಯೇಟರ್ ಕಾಂಪ್ಲೆಕ್ಸ್ ನ ನಾಲ್ಕು ಚಿತ್ರಮಂದಿರ, ಹೊಸಪೇಟೆಯ ಒಂದು ಚಿತ್ರಮಂದಿರದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ.
ತುಮಕೂರಿನಲ್ಲಿ ಮಧ್ಯರಾತ್ರಿ 12 ಗಂಟೆಗೆ ಚಿತ್ರಪ್ರದರ್ಶನಗೊಂಡಿದ್ದು, ಅಭಿಮಾನಿಗಳು ರಾತ್ರಿ ನಿದ್ದೆ ಮಾಡದೆ ಟಿಕೆಟ್ಗಾಗಿ ನಿಂತಿದ್ದು, ಕಂಡುಬಂತು. ನಗರದ ಗಾಯತ್ರಿ ಚಿತ್ರಮಂದಿರದಲ್ಲಿ ಮುಂಜಾನೆಯಿಂದಲೇ ಟಿಕೆಟ್ ಗಾಗಿ ಅಭಿಮಾನಿಗಳು ಕಾದು ನಿಂತು ಮೊದಲ ಪ್ರದರ್ಶನ ವೀಕ್ಷಿಸಿ ಸಂಭ್ರಮಿಸಿದರು.
Discussion about this post