ಬೆಂಗಳೂರು, ಆ.31: ರಾಜಾಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಪ್ರಭಾವಿಗಳ ಒತ್ತಡ ಹೊರಬರುತ್ತಿದ್ದು, ರಾಜರಾಜೇಶ್ವರಿ ನಗರದಲ್ಲಿರುವ ಚಿತ್ರನಟ ದರ್ಶನ್ ಮನೆ ಒಡೆಯುವುದಿಲ್ಲ ಎಂದು ಹೇಳುವ ಮೂಲಕ ಸಾಮಾನ್ಯರಿಗೊಂದು, ಪ್ರಭಾವಿಗಳಿಗೊಂದು ನೀತಿಯನ್ನು ಅನುಸರಿಸುತ್ತಿದೆ.
ಮನೆ ತೆರವುಗೊಳಿಸುವ ಕುರಿತಂತೆ ಇಂದು ಹೇಳಿಕೆ ಸಚಿವ ಟಿ.ಬಿ. ಜಯಚಂದ್ರ, ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ರಾಜಾಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಈ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರವೇ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ದರ್ಶನ್ ಮನೆ ತೆರವು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮನೆ ಕಟ್ಟಿಕೊಳ್ಳಲು ಸರ್ಕಾರವೇ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಒಂದು ವೇಳೆ ಮನೆ ತೆರವುಗೊಳಿಸಿದರೆ, ದರ್ಶನ್ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಯಿದೆ. ಹೀಗಾಗಿ, ದರ್ಶನ್ ಮನೆ ದಾಖಲೆಗಳನ್ನು ತಹಶೀಲ್ದಾರ್ ಪರಿಶೀಲನೆ ನಡೆಸಿದ್ದಾರೆ. ಎಲ್ಲವೂ ಸರಿಯಾಗಿರುವ ಕಾರಣ ಮನೆಯನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ರಾಜಾಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡವರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದ ರಾಜ್ಯ ಸರ್ಕಾರ, ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವುಗೊಳಿಸುತ್ತೇವೆ ಎಂದಿತ್ತು. ಆದರೆ, ದರ್ಶನ್ ಮನೆ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿ, ಒತ್ತಡಗಳಿಗೆ ಮಣಿದು ಮನೆ ತೆರವನ್ನು ಕೈಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
Discussion about this post