Read - < 1 minute
ಶ್ರೀನಗರ, ಅ.೩: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ೪೬ ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ್ದ ಉಗ್ರರ ಪೈಕಿ ಇಬ್ಬರು ಉಗ್ರರನ್ನು ಈಗಾಗಲೇ ಹತ್ಯೆಗೈಯ್ಯಲಾಗಿದೆ. ಭಾರತೀಯ ಸೈನಿಕರ ದಾಳಿಯಲ್ಲಿ ಗಾಯಗೊಂಡಿರುವ ಮತ್ತೋರ್ವ ಉಗ್ರ ಪ್ರಾಣ ಉಳಿಸಿಕೊಳ್ಳಲು ಝೇಲಂ ನದಿಗೆ ಹಾರಿದ್ದಾನೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟ ಮಾಡಿದ್ದು, ಬಾರಾಮುಲ್ಲಾದ ಹಿಂಬದಿಯಲ್ಲಿರುವ ಪಾರ್ಕ್ ಮೂಲಕ ಸೇನಾ ಶಿಬಿರ ಪ್ರವೇಶಿಸುವ ಉಗ್ರರ ಯತ್ನವನ್ನು ಅಲ್ಲಿ ಪಹರೆ ನಡೆಸುತ್ತಿದ್ದ ಭಾರತೀಯ ಯೋಧರು ವಿಫಲಗೊಳಿಸಿದ್ದು, ಪ್ರತಿ ದಾಳಿ ನಡೆಸುವ ಮೂಲಕ ಉಗ್ರರನ್ನು ಹಿಮ್ಮೆಟಿಸಿದ್ದಾರೆ. ಈ ವೇಳೆ ಇಬ್ಬರು ಉಗ್ರರನ್ನು ಸದೆಬಡಿಯಲಾಗಿದ್ದು, ಪ್ರಾಣಭೀತಿಯಿಂದ ಓರ್ವ ಉಗ್ರ ಬಾರಾಮುಲ್ಲಾ ತೊರೆದಿದ್ದಾನೆ.
ಇನ್ನೊಂದೆಡೆ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೋರ್ವ ಉಗ್ರ ಸಮೀಪದ ಝೇಲಂ ನದಿಗೆ ಹಾರಿ ಪ್ರಾಣ ಉಳಿಸಿಕೊಳ್ಳುವ ಯತ್ನ ನಡೆಸಿದ್ದಾನೆ. ಮೂಲಗಳ ಪ್ರಕಾರ ಝೇಲಂ ನದಿಗೆ ಹಾರಿರುವ ಗಾಯಗೊಂಡ ಉಗ್ರ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಬಾರಾಮುಲ್ಲಾದಲ್ಲಿ ಉಗ್ರರ ವಿರುದ್ಧ ಕಳೆದ ರಾತ್ರಿಯಿಂದ ನಡೆಯುತ್ತಿದ್ದ ಸೇನಾಕಾರ್ಯಾಚರಣೆ ಮುಕ್ತಾಯವಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
Discussion about this post