ಎಂಆರ್ ಪಿಕ್ಚರ್ಸ್ ಲಾಂಛನದಲ್ಲಿ ಎಲ್ ಪದ್ಮನಾಭ, ಜಿ.ಎನ್. ಶಶಿಕಿರಣ್ ಮತ್ತು ಕೆ. ಗಿರೀಶ್ ನಿರ್ಮಿಸುತ್ತಿರುವ ಮತ್ತು ಗುರು ದೇಶಪಾಂಡೆ ನಿರ್ದೇಶನದ ‘ಜಾನ್ ಜಾನಿ ಜನಾರ್ಧನ್’ ಚಿತ್ರದ ಚಿತ್ರೀಕರಣ ಈಗ ಮುಗಿದು ಆಡಿಯೋ ಬಿಡುಗಡೆ ಕೂಡಾ ನೆರವೇರಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡು ಎಲ್ಲೆಡೆ ಸೌಂಡು ಮಾಡುತ್ತಿವೆ. ನವಂಬರ್ ಎರಡನೇ ವಾರದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈ ನಡುವೆ ‘ಜಾನ್ ಜಾನಿ ಜನಾರ್ಧನ್’ ಚಿತ್ರತಂಡ ಸಮೇತ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುತ್ತಿದೆ.
ಅಕ್ಟೋಬರ್ ೨೪ರಿಂದ ೨೮ರ ತನಕ ನಡೆಯಲಿರುವ ಈ ಪ್ರವಾಸದಲ್ಲಿ ಚಿತ್ರದಲ್ಲಿ ನಟಿಸಿರುವ ನಾಯಕರು ಸೇರಿದಂತೆ ಚಿತ್ರತಂಡದ ಬಹುತೇಕರು ಪಾಲ್ಗೊಳ್ಳಲಿದ್ದಾರೆ.
ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಿಂದ ಅಕ್ಟೋಬರ್ ೨೪ರಂದು ಬೆಳಿಗ್ಗೆ ೯.೩೦ಕ್ಕೆ ಆರಂಭವಾಗುವ ಈ ಪ್ರವಾಸ ನಂತರ ತುಮಕೂರಿನ ಕಾಲೇಜುಗಳಿಗೆ ಭೇಟಿ ನೀಡಿ ಚಿತ್ರದ ಟ್ರೇಲರ್ ತೋರಿಸಿ, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದೆ. ನಂತರ ಇದೇ ರೀತಿ, ಚಿತ್ರದುರ್ಗ, ಮುಧೋಳ, ಬಿಜಾಪುರ, ಶಹಾಪುರ… ಹೀಗೆ ಜಿಲ್ಲಾವಾರು ಸಭೆಗಳನ್ನು ನಡೆಸುತ್ತಾ, ವಿಶೇಷ ಟ್ಯಾಬ್ಲೋ ಮೂಲಕ ರಸ್ತೆ ಪ್ರದರ್ಶನದಲ್ಲಿ ಸಾಗಲಿದೆ. ಜೊತೆಗೆ ಸ್ಥಳೀಯ ವಾಹಿನಿಗಳಿಗೆ ಕೂಡಾ ಸಂದರ್ಶನಗಳನ್ನು ನೀಡುವುದು ಚಿತ್ರತಂಡದ ಬಯಕೆ.
ಸಾಮಾನ್ಯವಾಗಿ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಕರ್ನಾಟಕದ ಜಿಲ್ಲೆಗಳಲ್ಲಿ ಸಂಚರಿಸಿ ಚಿತ್ರಮಂದಿರಗಳಿಗೆ ಭೇಟಿ ಕೊಡುವುದು ಸಿನಿಮಾತಂಡಗಳ ವಾಡಿಕೆ. ಆದರೆ, ಜಾನ್ ಜಾನಿ ಜನಾರ್ಧನ್ ಚಿತ್ರ ಯುವಕರಿಗೆ ಸಂಬಂಧಿಸಿದ್ದಾಗಿರುವುದರಿಂದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಈ ಚಿತ್ರ ತಲುಪಿಸಿ, ಪ್ರತಿಯೊಬ್ಬರೂ ಚಿತ್ರ ವೀಕ್ಷಿಸುವಂತೆ ಮಾಡಬೇಕು ಎಂದು ಈ ತಂಡ ನಿರ್ಧರಿಸಿದೆ. ರಾಜಧಾನಿಯನ್ನು ಒಳಗೊಂಡಂತೆ ರಾಜ್ಯದ ಪ್ರತಿಯೊಬ್ಬರಿಗೂ ಈ ಚಿತ್ರವನ್ನು ತಲುಪಿಸಬೇಕು ಎನ್ನುವ ಉದ್ದೇಶದಿಂದ ಬಿಡುಗಡೆಗೆ ಮುನ್ನವೇ ‘ಜಾನ್ ಜಾನಿ ಜನಾರ್ಧನ್’ ಚಿತ್ರ ತಂಡ ವಿನೂತ ಮಾದರಿಯ ಪ್ರಚಾರಾಂದೋಲನ ಕೈಗೊಳ್ಳುತ್ತಿರುವುದು ವಿಶೇಷವಾಗಿದೆ.
ನಿರ್ಮಾಪಕರಾದ ಎಲ್ ಪದ್ಮನಾಭ, ಜಿ.ಎನ್. ಶಶಿ ಕಿರಣ್ ಮತ್ತು ಕೆ.ಗಿರೀಶ್ ‘ಎಂ.ಆರ್. ಪಿಕ್ಚರ್ಸ್’ ಲಾಂಛನದ ಮೊದಲ ಪ್ರಯತ್ನವಾಗಿ ಈಗ ‘ಜಾನ್ ಜಾನಿ ಜನಾರ್ಧನ್’ ಚಿತ್ರವನ್ನು ರೂಪಿಸಿದ್ದಾರೆ. ‘ಜಾನ್ ಜಾನಿ ಜನಾರ್ಧನ್’ ಬೃಹತ್ ತಾರಾಗಣ ಹೊಂದಿರುವ ಚಿತ್ರ. . ಅಜಯ್‌ರಾವ್, ಯೋಗೀಶ್(ಲೂಸ್‌ಮಾದ), ಕೃಷ್ಣ(ಮದರಂಗಿ) ನಾಯಕಾರಾಗಿ ನಟಿಸಿರುವ ಈ ಚಿತ್ರದಲ್ಲಿ ಎಂ.ಎಸ್ ಉಮೇಶ್, ಗಿರಿಜಾ ಲೋಕೇಶ್, ಬ್ಯಾಂಕ್ ಜನಾರ್ಧನ್, ಟೆನ್ನಿಸ್ ಕೃಷ್ಣ, ಗುರುನಂದನ್, ಯಶವಂತ್ ಶೆಟ್ಟಿ, ಶ್ರೀನಿವಾಸಮೂರ್ತಿ, ರವಿಶಂಕರ್ ಗೌಡ, ಪ್ರಶಾಂತ್ ಸಿದ್ದಿ, ಲಕ್ಷ್ಮೀದೇವಿ, ಬಿರಾದಾರ್, ಗಿರಿಜಾ ಲೋಕೇಶ್, ಜಯಶ್ರೀ, ದಿಯಾ, ರೇಖಾ ಕುಮಾರ್, ಚಿತ್ರಾ ಶೆಣೈ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ. ಜೊತೆಗೆ ಮಾಲಾಶ್ರೀ, ಐಂದ್ರಿತಾ ರೇ, ಮುಂಬೈ ಬೆಡಗಿ ಕಾಮನಾ ರಾನಾವತ್ ಕೂಡಾ ನಟಿಸಿದ್ದಾರೆ. ಸಂಪೂರ್ಣ ಹಾಸ್ಯದೊಂದಿಗೆ ಗಂಭೀರವಾದ ವಿಚಾರವೊಂದನ್ನು ತೆರೆದಿಡುವ ಪ್ರಯತ್ನ ಜಾನ್ ಜಾನಿ ಜನಾರ್ಧನ್ ಚಿತ್ರದ್ದಾಗಿದೆ.
‘ಜಾನ್ ಜಾನಿ ಜನಾರ್ಧನ್’ ಚಿತ್ರತಕ್ಕೆ ಗುರು ದೇಶಪಾಂಡೆ ಅವರ ನಿರ್ದೇಶನವಿದ್ದು, ಅರ್ಜುನ್ ಜನ್ಯರ ಸಂಗೀತ ನಿರ್ದೇಶನ ಮತ್ತು ಸಂತೋಶ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.
Discussion about this post