Read - 2 minutes
ನವದೆಹಲಿ, ಸೆ.2: ನಾವು ಮಾಡಿದ್ದೆಲ್ಲವನ್ನು ಚುನಾವಣೆಗೆ ಲಿಂಕ್ ಮಾಡುವ ಮೂಲಕ ಮಾತನಾಡುವುದು ಹಾಗೂ ಟೀಕಿಸುವುದು ನಿಜಕ್ಕೂ ದುರಾದೃಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಎನ್ ಎನ್ ನ್ಯೂಸ್ 18 ಚಾನಲ್ ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮೋದಿ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಸಂದರ್ಶನದ ಉದ್ದಕ್ಕೂ ಪ್ರಸ್ತುತ ಪ್ರಮುಖ ವಿಚಾರಗಳು, ದೇಶದ ಆರ್ಥಿಕತೆ, ಸಾಮಾಜಿಕ ಪೂರ್ವಾಗ್ರಹ ಚುನಾವಣಾ ರಾಜಕೀಯ ಹಾಗೂ ಸರ್ಕಾರದ ಆದ್ಯತಾ ಕಾರ್ಯಗಳೂ ಸೇರಿದಂತೆ ಹಲವು ವಿಚಾರಗಳ ಕುರಿತು ಮೋದಿ ಮಾತನಾಡಿದ್ದಾರೆ.
ಪ್ರಧಾನಿ ಮೋದಿ ಮಾತಿನ ಹೈಲೆಟ್ಸ್:
* ಕಾಶ್ಮೀರದ ಜನತೆ ಉಳಿಸಿಕೊಂಡಿರುವ ನಂಬಿಕೆ ಹಾಗೂ ಅಭಿವೃದ್ಧಿ ಕುರಿತಾಗಿ ಯಾವಾಗಲೂ ಬದ್ಧತೆಯನ್ನು ಹೊಂದಿದ್ದೇನೆ.
*ದೇಶಕ್ಕೆ ಅಗತ್ಯವಾಗಿರುವ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
*ಹಿಂದಿನ ಸರ್ಕಾರದ ಆಡಳಿತದ ಕಾಲಾವಧಿಗೆ ಹೋಲಿಕೆ ಮಾಡಿ ನೋಡಿದರೆ, ನಮ್ಮ ಸರ್ಕಾರದ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯ, ಕೋಮುಗಲಭೆಗಳು, ಬುಡಕಟ್ಟು ನಿವಾಸಿಗಳ ಮೇಲಿನ ದೌರ್ಜನ್ಯದಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ವರದಿಗಳು ಹೇಳಿವೆ.
*ದಲಿತ ಸಾಂಸದ, ದಲಿತ ಶಾಸಕ, ಬುಡಕಟ್ಟು ಸಾಂಸದ, ಬುಡಕಟ್ಟು ಶಾಸಕರು ಬಿಜೆಪಿಯಲ್ಲೇ ಹೆಚ್ಚು ಇದ್ದು, ಇದಕ್ಕೆ ಪಕ್ಷ ಆದ್ಯತೆ ನೀಡಿದೆ.
*ಈ ದೇಶದಲ್ಲಿ ಜಾತಿ ಎಂಬ ವಿಷಬೀಜವನ್ನು ಹಿಂದೆಯೇ ಬಿತ್ತಿ, ಇಡಿಯ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ.
*ಅನ್ಯಾಯದ ಗಾಯಗಳು ಸಾವಿರಾರು ವರ್ಷ ಕಳೆದರೂ ಮಾಯವಾಗಿಲ್ಲ. ಸಣ್ಣದೊಂದು ಹಾನಿ ಬಹಳಷ್ಟು ದೊಡ್ಡ ನೋವಿಗೆ ಕಾರಣವಾಗುತ್ತದೆ. ಘಟನೆ ದೊಡ್ಡದೋ ಅಥವಾ ಸಣ್ಣದೋ ವಿಚಾರವಲ್ಲ. ಅದರಿಂದಾಗುವ ನೋವು ಹಾಗೂ ಹಿಂಸೆ ದೊಡ್ಡದು.
*ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಅಭಿವೃದ್ಧಿ ಕುರಿತಾಗಿನ ವಿಚಾರಗಳ ನಮ್ಮ ಅಂಶಗಳು.
*ನಾವು ಮಾಡಿದ ಪ್ರತಿ ಕೆಲಸವನ್ನೂ ಚುನಾವಣೆಗೆ ಲಿಂಕ್ ಮಾಡಿ ಮಾತನಾಡುವುದು ಹಾಗೂ ಟೀಕಿಸುವುದು ನಿಜಕ್ಕೂ ಖೇದಕರ.
*ಸಬಲೀಕರಣದ ಪ್ರಮುಖ ಅಸ್ತ್ರಶಿಕ್ಷಣ.
*ಅಭಿವೃದ್ಧಿ ಎಂದಿಗೂ ನಮ್ಮ ಪ್ರಮುಖ ವಿಚಾರ. ಇದು ಎಂದಿಗೂ ನಮ್ಮ ಆದ್ಯತೆಯಾಗಿರುತ್ತದೆ. ಇದರಲ್ಲಿ ರಾಜಕೀಯವಿಲ್ಲ, ಬದಲಾಗಿ ಬದ್ದತೆಯಿದೆ.
*ದೇಶವನ್ನು ಬಡತನ ಮುಕ್ತವನ್ನಾಗಿಸಬೇಕು ಎಂದರೆ ಅಭಿವೃದ್ಧಿಯಾಗಬೇಕು. ಬಡವರನ್ನು ಸಬಲರನ್ನಾಗಿ ಮಾಡಬೇಕು.
*ಯುವ ಸಮೂಹವನ್ನು ಎಚ್ಚರಿಸಲು ಹಾಗೂ ಪ್ರೇರಣೆಗೊಳಿಸಲು ಸ್ಟಾರ್ಟ್ ಅಪ್ ಯೋಜನೆಯನ್ನು ಜಾರಿ ಮಾಡಿದ್ದೇವೆ.
*ದೇಶ 80 ಕೋಟಿ ಯುವಕರನ್ನು ಹೊಂದಿದೆ. ಇದರಲ್ಲಿ ಬಹುತೇಕರು 30ರ ವಯಸ್ಸಿನ ಆಸುಪಾಸಿನವರು. ಇವರಿಗೆಲ್ಲಾ ಕೌಶಲ್ಯಾಭಿವೃದ್ಧಿ ಮಾಡಿದರೆ ದೇಶದ ಗತಿಯನ್ನೇ ಇವರೆಲ್ಲಾ ಬದಲಿಸಿ, ಅಭಿವೃದ್ಧಿಯತ್ತ ಕೊಂಡೊಯ್ಯುವರು.
*ಪ್ರತಿ ಭಾರತೀಯನಿಗೂ ಇಂದು ಅಭಿವೃದ್ಧಿ ಬೇಕಾಗಿದೆ.
*ಬಿಜೆಪಿಯವರೂ ಸೇರಿದಂತೆ ಭಾರತದ ಎಲ್ಲ ರಾಜಕಾರಣಿಗಳಿಗೆ ಒಂದು ವಿಚಾರ ಹೇಳಲು ಬಯಸುತ್ತೇನೆ. ನೀವು ಯಾವುದೇ ಒಂದು ವರ್ಗ ಅಥವಾ ಸಮೂಹದ ವಿರುದ್ಧ ಮಾತನಾಡಿದರೆ, ಆ ಸಮೂಹಕ್ಕೆ ಮಾತ್ರವಲ್ಲ ನೀವು ಇಡಿಯ ದೇಶಕ್ಕೆ ಉತ್ತರದಾಯಿಯಾಗುತ್ತೀರ, ನೆನಪಿರಲಿ…
*ದಲಿತರ ಜೀವನವನ್ನು ಉತ್ತಮಗೊಳಿಸುವಲ್ಲಿ ನಾನು ಬದ್ಧನಾಗಿದ್ದೇನೆ.
*ಮೋದಿ ಅಂಬೇಡ್ಕರ್ ಅವರ ಭಕ್ತನಾಗಿರುವುದು ಬಹಳಷ್ಟು ಮಂದಿಗೆ ಸಂಕಟ ಪ್ರಾಯವಾಗಿದೆ.
*19 ಹಾಗೂ 20ನೆಯ ಶತಮಾನದಲ್ಲಿ ನಾವು 1700 ಕಾನೂನುಗಳನ್ನು ನಾವು ಜಾರಿಗೊಳಿಸಿದ್ದೇವೆ. ಆದರೆ, ಇವುಗಳನ್ನು ರಾಜ್ಯಗಳೂ ಸಹ ಮಾಡುವಂತೆ ನಾನು ಕೇಳುತ್ತೇನೆ.
*ದಲಿತರ ಮೇಲಿನ ಹಲ್ಲೆ ಸೇರಿದಂತೆ ಯಾವುದೇ ಪ್ರಕರಣಗಳಿದ್ದರೂ ಅದರ ಅಡ್ಡ ಪರಿಣಾಮ ರಾಷ್ಟ್ರದ ಮೇಲಾಗುತ್ತದೆ. ಅದು ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ.
*ವಿದೇಶದಲ್ಲಿರುವ ಕಾಳಧನವನ್ನು ವಾಪಾಸು ತರಲು ನಮ್ಮಲ್ಲಿ ಕಠಿಣ ಕಾನೂನು ಇದೆ. ಅದರೆ, ಅದಕ್ಕೆ ಸಮಯ ಬೇಕು.
*ದೇಶದಲ್ಲಿ ವಿದ್ಯುತ್ ಕೊರತೆ ನೀಗಿಸಲು ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ಮೂಲಭೂತ ಸೌಲಭ್ಯವನ್ನು ಉನ್ನತೀಕರಿಸುವ ಮೂಲಕ ಅಭಿವೃದ್ಧಿ ಹೊಂದುವ ಹಾದಿಯಲ್ಲಿ ಆರ್ಥಿಕತೆಗೆ ಸಹಾಯ ಮಾಡುತ್ತಿದ್ದೇವೆ.
*ರಾಜಕೀಯ ದ್ವೇಷವನ್ನು ನಾನು ಎಂದು ಮಾಡಿಲ್ಲ ಎನ್ನುವುದಕ್ಕೆ ನನ್ನ ಹಿಂದಿನ ಇತಿಹಾಸ ದಿನಗಳೇ ಸಾಕ್ಷಿಯಾಗಿದೆ.
*ಸ್ವಾತಂತ್ರ್ಯಾ ನಂತರ ನಾವು ಬಹಳಷ್ಟು ವಿದೇಶಿ ಹೂಡಿಕೆಯನ್ನು ಕಂಡಿದೆ. ಈ ವಿಚಾರದಲ್ಲಿ ನಾವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದೇವೆ.
*ಸಾಮಾನ್ಯ ಜನರ ಬದುಕನ್ನು ಉನ್ನತೀಕರಿಸುವುದು ಹೇಗೆ ಎಂಬ ವಿಚಾರದ ಕುರಿತು ನಾವು ಗಂಭೀರ ಚಿಂತನೆ ನಡೆಸಬೇಕಿದೆ.
*ತೆರಿಗೆ ಪದ್ದತಿಯನ್ನು ಸರಳೀಕರಣ ಮಾಡಬೇಕಿದೆ. ಇದು ಸಾಮಾನ್ಯ ಜನರಿಗೆ ಸಹಕಾರಿಯಾಗುವುದು ಮಾತ್ರವಲ್ಲದೇ, ಇದರಿಂದ ಬರುವ ಆದಾಯದಿಂದ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.
*ಸಮಾಧಾನಕರ ವ್ಯವಹಾರ ವೇಗದ ಅಭಿವೃದ್ಧಿಗೆ ಸಹಕಾರಿ. ಇದು ವ್ಯವಸ್ಥೆಯಲ್ಲಿ ಬದಲಾವಣೆ ತರದೇ ಆಗಲು ಸಾಧ್ಯವಿಲ್ಲ.
*ನನ್ನ ಸರ್ಕಾರದ ಮಂತ್ರ: ಸುಧಾರಣೆ… ನಿರ್ವಹಣೆ…ರೂಪಾಂತರ(reform, perform and transform)
*ಸ್ವತಂತ್ರ್ಯಾ ನಂತರದ ಭಾರತದಲ್ಲಿ ಜಿಎಸ್ ಟಿ ಅತಿದೊಡ್ಡ ತೆರಿಗೆ ಸುಧಾರಣೆಯಾಗಿದೆ. ಇದು ದೇಶದಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತದೆ.
*ಹತಾಶ ವಾತಾವರಣವನ್ನು ನಿರ್ನಾಮ ಮಾಡುವುದು ನಾನ ಅಧಿಕಾರಕ್ಕೆ ಬಂದ ನಂತರದ ಮೊದಲ ಆದ್ಯತೆಯಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ.
*ನನ್ನ ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ವಿಚಾರ ಹಾಗೂ ಈ ಕುರಿತ ನಿರ್ಣಯವನ್ನು ದೇಶದ ಜನರಿಗೇ ಬಿಟ್ಟಿದ್ದೇನೆ.
*ಅಭಿವೃದ್ಧಿ ಕಾರ್ಯಗಳನ್ನು ಅನಾವಶ್ಯಕವಾಗಿ ಚುನಾವಣಾ ವಿಚಾರವನ್ನಾಗಿ ಮಾಡಿಕೊಳ್ಳಬಾರದು.
*ಪಾರ್ಲಿಮೆಂಟ್, ಅಸೆಂಬ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯವಂತೆ ಬದಲಾವಣೆ ಮಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೋದಿಯವರ ಮಾತು ಅತ್ಯಂತ ಬಲವಾಗಿತ್ತು.
*ನಾನು 14 ವರ್ಷ ಮುಖ್ಯಮಂತ್ರಿಯಾಗಿದ್ದೆ. ಆದರೆ, ಆ ಅವಧಿಯಲ್ಲಿ ರಾಜಕೀಯ ಕಾರಣಗಳಿಗಾಗಿ ಯಾವುದೇ ಪ್ರಕರಣಗಳನ್ನು ಹೊರತೆಗೆದಿಲ್ಲ. ರಾಜಕೀಯ ಕಾರಣಗಳಿಗೆ ಹಾಗೂ ದ್ವೇಷಗಳಿಗೆ ಯಾವುದೇ ಪ್ರಕರಣ ಹೊರಗೆಳೆಯುವಂತೆ ಒತ್ತಡ ಹೇರಿಲ್ಲ. ನಮಗೆ ನ್ಯಾಯ ಮುಖ್ಯವಷ್ಟೇ.
*ಕಾಳಧನಿಕರು ತಮ್ಮ ಆಸ್ತಿಯನ್ನು ನ್ಯಾಯಯುತವಾಗಿ ಸೆಪ್ಟೆಂಬರ್ 30ರ ಒಳಗಾಗಿ ಘೋಷಿಸಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಮುಲಾಜಿಲ್ಲ.
Discussion about this post