Read - 2 minutes
ಭಾರತದಲ್ಲಿ ಜನಕ್ಕೆ, ಅದರಲ್ಲೂ ಸ್ತ್ರೀಯರಿಗೆ ಸೇವೆ ಸಲ್ಲಿಸಲು ಈಗ ಅಗತ್ಯವಾಗಿರುವುದು ಪುರುಷನಲ್ಲ, ಸ್ತ್ರೀ-ಸಾಕ್ಷಾತ್ ಸಿಂಹಿಣಿ. ನಿನ್ನ ವಿದ್ಯೆ, ಪ್ರಾಮಾಣಿಕತೆ, ಪರಿಶುದ್ಧತೆ, ಅನಂತಪ್ರೇಮ, ಧೃಢ ನಿರ್ಧಾರ ಎಲ್ಲಕ್ಕಿಂತ ಹೆಚ್ಚು ನಿನ್ನ ಕೆಲ್ಟಿಕ್ ರಕ್ತ- ಇವು ನಮಗೀಗ ಬೇಕಾಗಿರುವ ಮಹಿಳೆ ನೀನೇ ಎಂಬುದನ್ನು ತೀರ್ಮಾನಿಸಿವೆ. ಈ ಮಾತನ್ನು ಸ್ವಾಮಿ ವಿವೇಕಾನಂದರು ತಮ್ಮ ಪ್ರಿಯ ಶಿಷ್ಯೆ ಸೋದರಿ ನಿವೇದಿತಾಳಿಗೆ ಹೇಳಿದಂಥವು! ಈ ವರ್ಷ ಸೋದರಿ ನಿವೇದಿತಾರ ೧೫೦ನೆಯ ಜಯಂತಿ.
ಸೋದರಿ ನಿವೇದಿತಾಳ ಜೀವನ ಇಂದಿನ ಹೆಣ್ಣುಮಕ್ಕಳಿಗೆ ಆದರ್ಶ. ಮೇರಿ ಮತ್ತು ಸ್ಯಾಮುಅಲ್ ದಂಪತಿಗಳಿಗೆ ಹುಟ್ಟಿದ ಮೊದಲ ಮಗು ಮಾರ್ಗರೇಟ್ ನೊಬೆಲ್. ಈಕೆ ಹುಟ್ಟಿದ್ದು ಅಕ್ಟೋಬರ್ ೨೮, ೧೮೬೭ ರಂದು ಐರ್ಲೆಂಡಿನ ಡಂಗನಾನ್ ಎಂಬ ಸ್ಥಳದಲ್ಲಿ.
ಬಾಲ್ಯದಿಂದಲೂ ಮಾರ್ಗರೇಟ್ ಎಲಿಜಿಬೆತ್ ನೊಬೆಲ್‌ಳದು ಅಸಾಧಾರಣ ವ್ಯಕ್ತಿತ್ವ. ನೊಬೆಲ್ ಬಲು ಬುದ್ಧಿವಂತ ಹುಡುಗಿ. ಹೊಸದು ಏನನ್ನು ಕಂಡರೂ ಅತ್ಯಂತ ಆಸಕ್ತಿ. ಮನೆಗೆ ಯಾರೇ ಬಂದರೂ ಕುತೂಹಲ! ತಂದೆ ಸ್ಯಾಮುಅಲ್ ಧರ್ಮೋಪದೇಶಕರಾಗಿದ್ದರು. ತನ್ನ ಪ್ರೀತಿಯ ತಂದೆಯ ತ್ಯಾಗಗುಣ, ಸ್ನೇಹಹಸ್ತ, ಸೇವಾ ಗುಣಗಳನ್ನು ಕಂಡು ಆನಂದ ಪಡುತ್ತಿದ್ದಳು. ಅದನ್ನೇ ತಂದೆಯಿಂದ ಬಳುವಳಿಯಾಗಿ ಪಡೆದಳು. ನೊಬೆಲ್‌ಳ ತಾತ ಹ್ಯಾಮಿಲ್ಟನ್ ಅಪಾರ ರಾಷ್ಟ್ರಭಕ್ತರಾಗಿದ್ದವರು. ರಾಷ್ಟ್ರೀಯ ವಿಚಾರಗಳನ್ನು ಜನರಲ್ಲಿ ಬಿತ್ತುತ್ತಾ ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ತಂದೆಯ ದೈವ ಭಕ್ತಿ, ತಾತನ ದೇಶಭಕ್ತಿ ಎರಡೂ ಬಾಲಕಿ ನೊಬೆಲ್‌ಳಲ್ಲಿ ಸಹಜವಾಗಿ ಸಮ್ಮೇಳಿತಗೊಂಡಿದ್ದವು! ಆಕೆ ತನ್ನ ಶಿಕ್ಷಣವನ್ನು ಮುಗಿಸಿ ೧೮ನೆಯ ವಯಸ್ಸಿನಲ್ಲಿಯೇ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದಳು. ಆಕೆಯ ಮನಸ್ಸು ಆಧ್ಯಾತ್ಮಿಕ ಚಿಂತನೆಗಳತ್ತ ಸಾಗಿತು, ಸತ್ಯದ ಹುಡುಕಾಟ ತೀವ್ರವಾಯಿತು!
೧೮೯೫ರ ನವೆಂಬರ್ ತಿಂಗಳಲ್ಲಿ ಮಾರ್ಗರೇಟ್ ಭಾರತದಿಂದ ಬಂದ ಹಿಂದೂ ಯೋಗಿಯೊಬ್ಬನ ಬಗ್ಗೆ ಎಲ್ಲರ ಬಾಯಲ್ಲೂ ಕೇಳಿದ್ದಳು. ಅವರು ಸ್ವಾಮಿ ವಿವೇಕಾನಂದರೆಂದು ತಿಳಿದು ಅವರ ಮಾತುಗಳನ್ನಾಲಿಸಲು ಹೋದಳು. ಸ್ವಾಮಿ ವಿವೇಕಾನಂದರ ನಿರರ್ಗಳ ವಾಗ್ಝರಿಯನ್ನು ಆಲಿಸಿ ಆಕೆ ಮಂತ್ರಮುಗ್ಧಳಾದಳು! ಒಂದೇ ಬಾರಿಗೆ ವಿವೇಕಾನಂದರು ಹೇಳಿದ್ದೆಲ್ಲವನ್ನೂ ಸ್ವೀಕರಿಸಲಿಲ್ಲವಾದರೂ ಬರುಬರುತ್ತಾ ಸ್ವಾಮೀಜಿಯ ಮಾತುಗಳ ಸತ್ಯತೆ ಅರ್ಥವಾಗತೊಡಗಿತು. ವಿವೇಕಾನಂದರು ಭಾರತಕ್ಕೆ ಹಿಂದಿರುಗುವ ಸಮಯ ಬಂದಿತು. ತಾನೂ ಹೋಗುವುದಾಗಿ ನಿಶ್ಚಯಿಸಿದಳು. ಹಲವು ದಿನಗಳ ಬಳಿಕ ಸ್ವಾಮೀಜಿಯಿಂದ ಸಮ್ಮತಿಯ ಪತ್ರ ಬಂದಿತು. ೧೮೯೮ರಲ್ಲಿ ಮಾರ್ಗರೇಟ್ ಭಾರತಕ್ಕೆ ಧಾವಿಸಿ ಬಂದಳು!
ಭಾರತಕ್ಕೆ ಬಂದ ಮಾರ್ಗರೇಟ್ ನೋಬೆಲ್ ಸ್ವಾಮಿ ವಿವೇಕಾನಂದರ ಸೂಚನೆಯಂತೆ ಬದುಕು ನಡೆಸತೊಡಗಿದಳು. ಅದೇ ವರ್ಷ ಮಾರ್ಚ್ ೨೫ ರಂದು ವಿವೇಕಾನಂದರು ಮಾರ್ಗರೇಟ್‌ಗೆ ದೀಕ್ಷೆಯನ್ನಿತ್ತು ನಿವೇದಿತಾ ಎಂಬ ಹೆಸರು ಕೊಟ್ಟರು. ಸ್ವಾಮಿ ವಿವೇಕಾನಂದರು ಭಾರತಮಾತೆಯ ಪದತಲಕ್ಕೆ ಅರ್ಪಿಸಿದ ಅನುಪಮ ಪುಷ್ಪ ಸೋದರಿ ನಿವೇದಿತಾ.
ಹಿಂದೂ ಸಂಸ್ಕೃತಿ ಅವಳ ಉಸಿರು, ಭರತ ಖಂಡಕ್ಕೆ ಸೋದರಿ. ದೀನ-ದಲಿತರ ನೋಡುವ ಪರಿ, ಎನಿತು ಕಾರ್ಯದ ವೈಖರಿ. ಈ ಮಾತುಗಳು ಅಕ್ಷರಶಃ ಅಕ್ಕ ನಿವೇದಿತಾಳಿಗೆ ಹೋಲಿಕೆಯಾಗುವಂಥದ್ದು. ಭಾರತವು ನಿವೇದಿತಾಳೊಂದಿಗೆ ಝೇಂಕೃತಿಗೊಳ್ಳುತ್ತದೆ ಎಂಬ ವಿವೇಕಾನಂದರ ಮಾತು ಅಕ್ಷರಶಃ ಸತ್ಯವಾಯಿತು. ಅಕ್ಕ ನಿವೇದಿತಾ ಭಾರತೀಯರಿಗಿಂತಲೂ ಭಾರತೀಯಳಾಗಿ ಬಾಳಿದಳು. ಅತ್ಯಂತ ಅಲ್ಪ ಕಾಲದಲ್ಲಿಯೇ ಹಿಂದೂ ರೀತಿ-ನೀತಿಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಆಕೆ ಯಶಸ್ವಿಯಾದಳು!
ಮಹಾಮಾರಿ ಪ್ಲೇಗ್ ಬಂಗಾಳಕ್ಕೆ ಕಾಲಿಟ್ಟಾಗ ಅಕ್ಕ ನಿವೇದಿತಾ ಹಗಲು-ರಾತ್ರಿಯೆನ್ನದೇ, ತನ್ನ ಆರೋಗ್ಯದ ಬಗ್ಗೆಯೂ ಯೋಚಿಸದೇ ರೋಗಿಗಳ ಸೇವೆ ಮಾಡಿದಳು. ಸ್ವಾಮಿ ವಿವೇಕಾನಂದರ ಆದರ್ಶವನ್ನು ಪೂರ್ಣಗೊಳಿಸುವುದೊಂದೇ ಅವಳ ಉದ್ದೇಶವಾಗಿದ್ದರೂ ಅದರಲ್ಲಿ ತನ್ನದೇ ಮಾರ್ಗವನ್ನು ಹಿಡಿದಳು ನಿವೇದಿತಾ. ಅವಳ ಭಾರತದ ಮೇಲಿನ ಪ್ರೀತಿ ಹೇಳತೀರದು. ತನ್ನ ಆಪ್ತ ಸ್ನೇಹಿತೆಯಾದ ಮಿಸ್ ಮ್ಯಾಕ್ಲಿಯೋಡ್ ಬಳಿ ನಿವೇದಿತಾ ನನ್ನ ಕರ್ತವ್ಯ ಇಡೀ ರಾಷ್ಟ್ರವನ್ನೇ ಎಚ್ಚರಗೊಳಿಸುವುದು ಎಂದು ತಿಳಿಸಿದ್ದಳು.
ಸ್ವಾಮಿ ವಿವೇಕಾನಂದರ ಮಾತಿನಂತೆ ಭಾರತದ ಸ್ತ್ರೀಯರಿಗಾಗಿಯೇ ತನ್ನ ಜೀವನವನ್ನೇ ಸಮರ್ಪಿಸಿದಳು. ವಿವೇಕಾನಂದರ ಕನಸಾದ ಭಾರತೀಯ ಸ್ತ್ರೀಯರ ಶಿಕ್ಷಣಕ್ಕೆ ನಾಂದಿ ಹಾಡಿದಳು. ೧೮೯೮ ರ ನವೆಂಬರ್‌ನಲ್ಲಿ ಹೆಣ್ಣು ಮಕ್ಕಳಿಗಾಗಿ ಒಂದು ಶಾಲೆಯನ್ನು ಪ್ರಾರಂಭಿಸಿದಳು. ಆಕೆಯ ಶಾಲೆಯಲ್ಲಿ ಆಟ-ಪಾಠಗಳ ನಡುವೆ ನೈತಿಕ ಶಿಕ್ಷಣವೂ ಇರುತ್ತಿತ್ತು. ಆಕೆ ತೀಕ್ಷ್ಣ ದೃಷ್ಟಿಯಿಂದ ಮಕ್ಕಳನ್ನು ಪರಿಶೀಲಿಸುತ್ತಿದ್ದಳು.
ಎಲ್ಲ ಕೆಲಸಗಳ ನಡುವೆ ಅಕ್ಕ ನಿವೇದಿತಾ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿದ್ದಳು ಎಂದೇ ಹೇಳಬಹುದು. ಭಾರತದ ಜನರಿಗಾಗಿ ಆಕೆ ತನ್ನ ಸಂಪೂರ್ಣ ಸಮಯವನ್ನು ಕೊಟ್ಟಳು! ೧೯೧೧ ರ ವೇಳೆಗೆ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸವಾಯಿತು. ಜಗದೀಶ್ ಚಂದ್ರ ಬೋಸರೊಡನೆ ಆರೋಗ್ಯದ ಸಂಬಂಧ ಆಕೆ ಡಾರ್ಜಲಿಂಗ್‌ಗೆ ತೆರಳಿದಳು. ಅಕ್ಟೋಬರ್ ೧೩, ೧೯೧೧ ರಂದು ಆಕೆ ತಾಯಿ ಕಾಳಿಯಲ್ಲಿ ಲೀನವಾದಳು! ತನ್ನದೆಲ್ಲವನ್ನೂ ಭಾರತಕ್ಕೆ ಸಮರ್ಪಿಸಿದ ನಿವೇದಿತಾ, ಭಾರತೀಯರಿಗೆಲ್ಲಾ ಭಗಿನಿ ನಿವೇದಿತಳಾಗಿ, ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಪುತ್ರಿಯಾಗಿ, ಭಾರತ ಮಾತೆಯ ಶ್ರೇಷ್ಠ ಪುತ್ರಿಯರಲ್ಲಿ ಒಬ್ಬಳಾಗಿ ಜೀವಿಸಿದಳು.
1902 ರಲ್ಲಿ ಸ್ವಾಮಿ ವಿವೇಕಾನಂದರ ಮಹಾಸಮಾಧಿಯ ನಂತರ ಅಕ್ಕ ನಿವೇದಿತಾ ಭಾರತದ ಸ್ವಾತಂತ್ರ್ಯಕ್ಕಾಗಿ ಕಾರ್ಯಮಾಡುವ ಪಣತೊಟ್ಟಳು. ತರುಣರನ್ನು ಸೇರಿಸಿ ಭಾರತದ ಶ್ರೇಷ್ಠತೆಯನ್ನು ಸಾರುತ್ತಿದ್ದಳು, ಆಂಗ್ಲರ ತಪ್ಪು ನೀತಿಗಳನ್ನು ಪತ್ರಿಕೆಗಳಲ್ಲಿ ಬರೆದು ವಿರೋಧಿಸುತ್ತಿದ್ದಳು. ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದಳು. ಅರಬಿಂದೋ ಘೋಷ್, ಬಾಗಾ ಜತಿನ್, ರಮೇಶ್ ಚಂದ್ರ ದತ್ತ, ಸತೀಶ್ ಚಂದ್ರ ಮುಖರ್ಜಿ, ಬಿಪಿನ್ ಚಂದ್ರ ಪಾಲ್, ರಾಸಬಿಹಾರಿ ಘೋಷ್, ಜಗದೀಶ್ ಚಂದ್ರ ಬೋಸ್ ಹೀಗೆ ಹಲವರ ಸಂಪರ್ಕ ಏರ್ಪಟ್ಟಿತು. ತನಗೆ ತಿಳಿದ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಳು. ಈ ಎಲ್ಲರ ನಡುವೆ ನಿವೇದಿತಾ ಭಗಿನಿ ನಿವೇದಿತಾ ಎಂದೇ ಪ್ರಖ್ಯಾತಳಾದಳು.
ನಿವೇದಿತಾ ಅವರಲ್ಲಿದ್ದ ಭಾರತದ ಮೇಲಿನ ಗೌರವವನ್ನು ಕಂಡು ಗೋಪಾಲಕೃಷ್ಣ ಗೋಖಲೆಯವರು ನಿವೇದಿತಾ ಭಾರತದ ಕರೆಗೆ ಓಗೊಟ್ಟು ನಮ್ಮಲ್ಲಿಗೆ ಬಂದಳು. ಆಕೆ ಭಾರತಕ್ಕೆ ತನ್ನ ಹೃದಯದ ಪೂಜೆಯನ್ನು ಸಲ್ಲಿಸುವುದಕ್ಕೆ ಬಂದಳು; ನಮ್ಮ ಮುಂದಿರುವ ಶ್ರೇಷ್ಠ ಕಾರ್ಯದಲ್ಲಿ ಭಾರತದ ಪುತ್ರ-ಪುತ್ರಿಯರ ನಡುವೆ ಸ್ಥಾನ ಗಳಿಸುವುದಕ್ಕೆ ಬಂದಳು ಎಂದು ಹೇಳಿದ್ದಾರೆ. ಸ್ವಾಮಿ ವಿವೇಕಾನಂದರೇ ಇಂಗ್ಲೆಂಡಿನ ನನ್ನ ಕಾರ್ಯಲತೆಯ ಅತ್ಯಂತ ಸುಂದರ ಪುಷ್ಪ ನಿವೇದಿತಾ ಎಂದು ಹೇಳಿರುವುದು ಆಕೆಯ ವ್ಯಕ್ತಿತ್ವದ ಶ್ರೇಷ್ಠತೆಯನ್ನು ಪ್ರತಿಬಿಂಭಿಸುತ್ತದೆ.
*ಲೇಖಕರು: ಪ್ರಿಯಾ, ಶಿವಮೊಗ್ಗ
Discussion about this post