ನವದೆಹಲಿ, ಸೆ.27: ದೇಶಾದ್ಯಂತ ಫ್ಲೂ ಜ್ವರ ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ ಎಲ್ಲ ಪ್ಯಾರಾಸಿಟಮೋಲ್ ಔಷಧಿಗಳ ಬೆಲೆಯನ್ನು ಶೇ.30ರಷ್ಟು ಇಳಿಸಲು ಕೇಂದ್ರ ಸರಕಾರದ ಔಷಧಿ ನಿಯಂತ್ರಣ ವಿಭಾಗ ಸೂಚಿಸಿದೆ.
ಈಗಾಗಲೇ ಪ್ಯಾರಾಸಿಟಮೋಲ್ ಗುಳಿಗೆಗಳು ಬೆಲೆ ನಿಯಂತ್ರಣ ವ್ಯಾಪ್ತಿಯಲ್ಲಿದ್ದು, ಡೆಂಗ್ ಹಾಗೂ ಚಿಕೂನ್ ಗುನ್ಯಾದಿಂದ ತೀವ್ರ ಜ್ವರ ಇದ್ದ ಸಂದರ್ಭದಲ್ಲಿ ಚುಚ್ಚುಮದ್ದು ಬಳಸಲಾಗುತ್ತದೆ. ಸೆಪ್ಟೆಂಬರ್ ಮಧ್ಯದಲ್ಲಿ ಈ ಆದೇಶವನ್ನು ಕಂಪೆನಿಗಳಿಗೆ ನೀಡಲಾಗಿದ್ದು, ತಕ್ಷಣದಿಂದ ಇದು ಜಾರಿಗೆ ಬರಲಿದೆ.
ಆಗಸ್ಟ್ ನಲ್ಲಿ ಪ್ಯಾರಾಸಿಟಮೋಲ್ ಗುಳಿಗೆಯ ಮಾರಾಟ ಶೇ.47.2ರಷ್ಟು ಹೆಚ್ಚಿದ್ದು, ಈ ಜ್ವರನಿವಾರಕ ಔಷಧಿಯನ್ನು ಬೇರೆ ಗುಳಿಗೆಗಳ ಜೊತೆಗೂ ನೀಡಲಾಗುತ್ತದೆ. ಜನರಿಗೆ ಈ ಔಷಧಿ ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಫಾರ್ಮಸ್ಯೂಟಿಕ್ ಬೆಲೆನಿಗದಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಗತ್ಯ ಔಷಧಗಳ ಪಟ್ಟಿಯಲ್ಲಿರುವ ಪ್ಯಾರಾಸಿಟಮೋಲ್ ಚುಚ್ಚುಮದ್ದು ಹಾಗೂ ಕ್ಯಾಪ್ಸೂಲ್ ಹಾಗೂ ಕ್ರೋಸಿನ್ನಂಥ ಔಷಧಿ ಬೆಲೆಯನ್ನು ನಿಯಂತ್ರಿಸಲಾಗುತ್ತಿದೆ. ಫ್ಲೂ ಹೆಚ್ಚಿರುವ ಕಾರಣದಿಂದ ಪ್ಯಾರಾಸಿಟಮೋಲ್ ಚುಚ್ಚುಮದ್ದಿಯ ಬಳಕೆ ವ್ಯಾಪಕವಾಗಿ ಹೆಚ್ಚಿದೆ. ಸೆಪ್ಟೆಂಬರ್ 18ರ ವರೆಗಿನ ಅಂಕಿ-ಅಂಶದ ಪ್ರಕಾರ, ದೇಶಾದ್ಯಂತ ಡೆಂಘೀಯಿಂದ 78 ಮಂದಿ ಮೃತಪಟ್ಟಿದ್ದಾರೆ. 40 ಸಾವಿರಕ್ಕೂ ಹೆಚ್ಚು ಮಂದಿ ಈ ಸೊಳ್ಳೆಯಿಂದ ಹರಡುವ ರೋಗದಿಂದ ಬಳಲುತ್ತಿದ್ದಾರೆ. ನವದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲೇ ಸುಮಾರು 17 ಸಾವಿರ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿ ವಿವರಿಸಿದ್ದಾರೆ.
Discussion about this post