Read - < 1 minute
ಬೆಂಗಳೂರು, ಸೆ.30: ರಾಜ್ಯದಲ್ಲಿ ಜಲ ಕ್ಷಾಮ ತಲೆದೋರಿದ ಬೆನ್ನಲ್ಲೇ ಬರ ಪರಿಸ್ಥಿತಿ ಆವರಿಸಿ, ಜನ-ಜಾನುವಾರುಗಳು ತತ್ತರಿಸುತ್ತಿದ್ದರೂ ಬರ ಪೀಡಿತ ಪ್ರದೇಶಗಳ ಘೋಷಣೆಗೆ ಅಧಿಕಾರಿಗಳಲ್ಲೇ ಒಮ್ಮತ ಮೂಡಿಲ್ಲ ಎಂದು ತಿಳಿದುಬಂದಿದೆ.
ಬರಪೀಡಿತ ಪ್ರದೇಶಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದೆ. ಮತ್ತೊಂದೆಡೆ ಬರಪೀಡಿತ ಪ್ರದೇಶಗಳ ಘೋಷಣೆಗಾಗಿ ರಾಜಕೀಯ ಒತ್ತಡವೂ ಬರತೊಡಗಿದೆ. ಇದರಿಂದ ಕಂದಾಯ ಹಾಗೂ ಕೃಷಿ ಸಚಿವರು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ.
ಒಂದೆಡೆ ಅಧಿಕಾರಿಗಳಲ್ಲಿನ ಭಿನ್ನಾಭಿಪ್ರಾಯ ಮತ್ತೊಂಡೆ ರಾಜಕೀಯ ಒತ್ತಡವನ್ನು ಎದುರಿಸಿ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿ, ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾಗಿದೆ.
ನಿರಂತರವಾಗಿ ರಾಜ್ಯ ಬರಪರಿಸ್ಥಿತಿಯನ್ನು ಎದುರಿಸುತ್ತಾ ಬಂದಿದ್ದು, ಇದುವರೆಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬರಪೀಡಿತ ಪ್ರದೇಶಗಳ ಬಗ್ಗೆ ಕೇಂದ್ರ ಸರ್ಕಾರ ಚಕಾರವೆತ್ತಿಲ್ಲ. ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ನೀಡುತ್ತಿದೆ.
ಆದರೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಕೇಂದ್ರ ಸರ್ಕಾರದ ಮಾರ್ಗಸೂಚಿ ನೆಪವೊಡ್ಡಿ ಬರಪೀಡಿತ ಪ್ರದೇಶಗಳ ಘೋಷಣೆಗೆ ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ರಾಜ್ಯದಲ್ಲಿ 68 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ವಾಸ್ತವವಾಗಿ ಇದುವರೆಗೆ ಬರಪೀಡಿತವಾಗಿರುವ ತಾಲೂಕುಗಳ ಸಂಖ್ಯೆ 106ರಿಂದ 108ಕ್ಕೆ ಏರಿಕೆಯಾಗಲಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಒಂದು ಹೋಬಳಿ ಬರಪೀಡಿತವಾಗಿದ್ದರೂ ಇಡೀ ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಿರುವ ನಿದರ್ಶನಗಳಿವೆ. ಕೇಂದ್ರ ಸರ್ಕಾರದಿಂದಲೂ ಪರಿಹಾರ ಬಂದಿದೆ. ಏಕೆಂದರೆ ರಾಜ್ಯದಲ್ಲಿರುವಂತೆ ಹೋಬಳಿ ಮಟ್ಟದಲ್ಲಿ ಮಳೆ, ಬೆಳೆ ಮಾಹಿತಿ ಸಂಗ್ರಹಿಸುವ ಪದ್ಧತಿ ಅಖಿಲ ಭಾರತ ಮಟ್ಟದಲ್ಲಿ ಇಲ್ಲ.
ಒಂದು ಅಥವಾ ಎರಡು ಹೋಬಳಿಗಳು ಪೂರ್ಣವಾಗಿ ಬರಕ್ಕೆ ತುತ್ತಾಗಿದ್ದರೂ ಇಡೀ ತಾಲೂಕನ್ನು ಬರಪೀಡಿತವೆಂದು ಘೋಷಿಸಲಾಗುತ್ತಿತ್ತು. ಆದರೆ, ಈ ಬಾರಿ ತಾಲೂಕಿನ ಒಟ್ಟು ಹೋಬಳಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹೋಬಳಿಗಳಲ್ಲಿ ಬರ ಆವರಿಸಿದ್ದರೆ ಮಾತ್ರ ಬರಪೀಡಿತ ತಾಲ್ಲೂಕು ಘೋಷಣೆ ಮಾಡಬೇಕು. ಕಡಿಮೆ ಇದ್ದರೆ, ಬರಪೀಡಿತ ತಾಲ್ಲೂಕುಗಳ ಘೋಷಣೆಯಿಂದ ಕೈ ಬಿಡಬೇಕು ಎಂಬ ವಾದವನ್ನು ಹಿರಿಯ ಅಧಿಕಾರಿಗಳು ಸರ್ಕಾರದ ಮುಂದಿಡುತ್ತಿದ್ದಾರೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡುವ ಮಳೆ, ಹವಾ ಮುನ್ಸೂಚನೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನೀಡುವ ಬೆಳೆ ಪರಿಸ್ಥಿತಿ ಆಧಾರದ ಮೇಲೆ ಬರ ಘೋಷಣೆ ಮಾಡಲಾಗುತ್ತದೆ.
ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಲ್ಲಿ ಬರದ ಬಗ್ಗೆ ಭಿನ್ನಾಭಿಪ್ರಾಯವಿರುವುದರಿಂದ ಬರಪೀಡಿತ ಪ್ರದೇಶಗಳ ಘೋಷಣೆ ಕಡಿಮೆ ಆಗಿದೆ. ಇದು ರಾಜಕೀಯ ಟೀಕೆಗೂ ಗುರಿಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಮತ್ತೆ ಮಂಗಳವಾರ ಸಚಿವ ಸಂಪುಟದ ಉಪ ಸಮಿತಿ ಸಭೆ ಸೇರಿ ನಿಖರವಾಗಿ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲು ಉದ್ದೇಶಿಸಿದೆ.
Discussion about this post