Read - < 1 minute
ರಾಯ್ಪುರ: ಛತ್ತೀಸ್ಗಢದ ಬಸ್ತಾರ್ ವಿಭಾಗದಲ್ಲಿ ನಡೆದ ಪ್ರತ್ಯೇಕ ಕಾಳಗಗಳಲ್ಲಿ ಭದ್ರತಾಪಡೆಗಳು ಮೂವರು ನಕ್ಸಲೀಯ ಭಯೋತ್ಪಾದಕರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಸ್ತಾರ್ ಜಿಲ್ಲೆಯಲ್ಲಿ ಇಬ್ಬರು ನಕ್ಸಲ್ ಉಗ್ರರು ಹತರಾದರೆ, ಇನ್ನೊಬ್ಬನನ್ನು ಬಿಜಾಪುರದಲ್ಲಿ ಕೊಲ್ಲಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬರ್ಗುಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಂಗುವೆಲ್ ಅರಣ್ಯಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸ್ಥಳೀಯರು ನೀಡಿದ ಮಾಹಿತಿಯಾಧಾರದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಈ ಮುಖಾಮುಖಿ ನಡೆಯಿತೆಂದು ಬಸ್ತಾರ್ ಎಸ್ಪಿ ಆರ್.ಎನ್.ಡ್ಯಾಶ್ ತಿಳಿಸಿದರು.
ಪ್ರಮುಖ ನಕ್ಸಲ್ ನಾಯಕನೊಬ್ಬನನ್ನು ಸ್ವಾಗತಿಸಲು ಈ ನಕ್ಸಲ್ ಗುಂಪು ಇಂದ್ರಾವತಿ ನದಿಯನ್ನು ದಾಟಿ ಬಸ್ತಾನಾರ್ ಕಣಿವೆಯತ್ತ ಸಾಗುತ್ತಿರುವ ಬಗ್ಗೆ ಮಾಹಿತಿಗಳು ಬಂದಿದ್ದವು. ಇದರಂತೆ ಕಾರ್ಯಾಚರಣೆ ನಡೆಸಿದಾಗ ಭಾರೀ ಗುಂಡಿನ ಕಾಳಗ ನಡೆದಿದೆ. ಹತರಿಂದ ರೈಫಲ್ಗಳು, ಸ್ಪೋಟಕಗಳು, ಪೈಪ್ ಬಾಂಬ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Discussion about this post