Read - < 1 minute
ಅಗರ್ಟಲಾ, ಅ.12: ರಿಯೋ ಒಲಿಂಪಿಕ್ಸ್ ನ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಸಾಧನೆ ಮಾಡಿದ ಭಾರತದ ದೀಪಾ ಕರ್ಮಾಕರ್ ತಮಗೆ ಉಡುಗೊರೆಯಾಗಿ ಬಂದಿದ್ದ ಬಿಎಂಡಬ್ಲ್ಯೂ ಕಾರನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆ. ಅಗರ್ಟಲಾ ರಸ್ತೆಗಳು ಸರಿಯಾಗಿಲ್ಲದಿರುವುದೇ ದೀಪಾ ಈ ನಿರ್ಧಾರಕ್ಕೆ ಕಾರಣವಾಗಿದೆ.
ಅಗರ್ಟಲಾದ ರಸ್ತೆಗಳು ಕಿರಿದಾಗಿದ್ದು, ಸಮರ್ಪಕವಾದ ನಿರ್ವಹಣೆ ಇಲ್ಲ. ಇದರಿಂದಾಗಿ ಬಿಎಂಡಬ್ಲ್ಯೂ ಕಾರಿನ ನಿರ್ವಹಣೆ ಕಷ್ಟ. ಅಲ್ಲದೇ ಮುಂಬರಲಿರುವ ಚಾಲೆಂಜರ್ಸ್ ಕಪ್ಗಾಗಿ ಹೆಚ್ಚು ಕಸರತ್ತು ಅಗತ್ಯವಿರುವ ಕಾರಣ ಕಾರಿನ ನಿರ್ವಹಣೆಗೆ ಹಣ ವ್ಯಯ ಮಾಡದೆ ಅಭ್ಯಾಸದ ಕಡೆಗೆ ಗಮನ ಹರಿಸುವ ಅಗತ್ಯವಿದೆ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಕಾರಿನ ನಿರ್ವಹಣೆ ವ್ಯಚ್ಛ ಭರಿಸುವುದು ಬೇಡ. ತಾವೀಗ ಮುಂದಿನ ಸ್ಪರ್ಧೆ ಕುರಿತು ತಯಾರಿ ನಡೆಸಬೇಕಾಗಿದೆ ಎಂದು ದೀಪಾ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ದೀಪಾ ಕರ್ಮಾಕರ್ ತರಬೇತುದಾರ ಬಿಶೇಶ್ವರ್ ನಂದಿ, ಇದು ದೀಪಾ ಅವರ ನಿರ್ಧಾರವಲ್ಲ, ಅಗರ್ಟಲಾ ದಲ್ಲಿ ಬಿಎಂಡಬ್ಲ್ಯೂ ಕಾರಿನ ಸರ್ವಿಸ್ ಸೆಂಟರ್ ಇಲ್ಲ ಜೊತೆಗೆ ಇಲ್ಲಿನ ರಸ್ತೆಗಳು ಸರಿಯಿಲ್ಲ ಎಂಬ ಕಾರಣಕ್ಕೆ ದೀಪಾ ಅವರ ಕುಟುಂಬ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ರಿಯೊ ಒಲಿಂಪಿಕ್ಸ್ ನಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಾದ ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಜತೆಗೆ ಪುಲ್ಲೇಲಾ ಗೋಪಿಚಂದ್ ಅವರಿಗೂ? ಬಿಎಂಡಬ್ಲ್ಯೂ ಕಾರನ್ನು ಸೆಪ್ಟೆಂಬರ್ ನಲ್ಲಿ ಉಡುಗೊರೆಯಾಗಿ ನೀಡಲಾಗಿತ್ತು. ಹೈದರಾಬಾದ್ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಚಾಮುಂಡೇಶ್ವರನಾಥ್ ಅವರು ಬಿಎಂಡಬ್ಲ್ಯೂ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.
Discussion about this post