Read - < 1 minute
ಇಸ್ಲಮಾಬಾದ್, ಸೆ.1: ಭಾರತ- ಪಾಕಿಸ್ಥಾನದ ನಡುವಿನ `ಮಾಧ್ಯಮ ಸಮರ’ ಬಿರುಸುಗೊಂಡಿದೆ.
ಬಲೂಚಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಸುತ್ತ ತನ್ನ ಪ್ರಸಾರದ ವ್ಯಾಪ್ತಿಯನ್ನು ಹೆಚ್ಚಿಸಲು ಆಲ್ ಇಂಡಿಯಾ ರೇಡಿಯೋ ಚಿಂತನೆ ನಡೆಸಿದ ಬೆನ್ನಲ್ಲೇ ಭಾರತದ ಎಲ್ಲಾ ವಾಹಿನಿಗಳ ಪ್ರಸಾರಕ್ಕೆ ಪಾಕಿಸ್ಥಾನ ನಿಷೇಧ ಹೇರಿದೆ.
ಅಕ್ಟೋಬರ್ 15ರಿಂದ ಜಾರಿಗೆ ಬರುವಂತೆ ಭಾರತೀಯ ವಾಹಿನಿಗಳ ಭಾರತೀಯ ಟಿವಿ ವಾಹಿನಿಗಳ ಪ್ರಸಾರ ಸಮಯವನ್ನು ಶೇ.6ಕ್ಕಿಂತ ಕಡಿಮೆ ಇರುವಂತೆ ಆದೇಶ ಹೊರಡಿಸಲಾಗಿದೆ. ಆದರೆ, ಪಾಕ್ ಮಾಧಮಗಳ ಪ್ರಕಾರ, ಅಲ್ಲಿನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ಭಾರತೀಯ ಟಿವಿ ವಾಹಿನಿಗಳ ಡಿಟಿಎಚ್ ಪ್ರಸಾರದ ಮೇಲೆ ನಿಷೇಧ ಹೇರಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬಲೂಚಿಸ್ಥಾನದ ಹೋರಾಟಗಾರರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ಬಳಿಕ ಈ ವಿದ್ಯಮಾನಗಳು ನಡೆದಿವೆ.
ವಿಶ್ವಸಂಸ್ಥೆಗೆ ಶರೀಫ್ ಪತ್ರ
ಈ ಮಧ್ಯೆ, ಕಾಶ್ಮೀರ ವಿಚಾರವನ್ನು 2ನೇ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಲು ಪಾಕಿಸ್ಥಾನ ಪ್ರಧಾನಿ ನವಾಜ್ ಶರೀಫ್ ಯತ್ನಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪಾಕಿಸ್ಥಾನ ಪ್ರಧಾನಿ ಶರೀಫ್ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.
ಕಾಶ್ಮೀರದಲ್ಲಿ ಪಾಕ್ ಪ್ರೇರಿತ ಪ್ರತ್ಯೇಕತಾವಾದಿ ಸಂಘಟನೆಗಳು ಕಳೆದೆರಡು ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದು, ಇದರಿಂದ ಶಾಂತಿ ಸ್ಥಾಪಿಸಲು ಮೋದಿ ಸರ್ಕಾರ ಹಾಗೂ ಜಮ್ಮು ಕಾಶ್ಮೀರ ಸರ್ಕಾರ ಹರಸಾಹಸಪಡುತ್ತಿದೆ. ಆದರೆ ಕಾಶ್ಮೀರದಲ್ಲಿ ಭಾರತದಿಂದ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಬೇಕೆಂದು ವಿಶ್ವ ಸಂಸ್ಥೆ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ನವಾಜ್ ಶರೀಫ್ ಕೇಳಿಕೊಂಡಿದ್ದಾಗಿ ವಿದೇಶಾಂಗ ಕಚೇರಿ ವಕ್ತಾರ ನಫೀಸ್ ಜಕಾರಿಯಾ ಹೇಳಿದ್ದಾರೆ.
ಈಗಿನ ಜಮ್ಮು ಕಾಶ್ಮೀರದ ಸ್ಥಿತಿಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಲಾಗುತ್ತಿಲ್ಲ. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪತ್ರ ಬರೆದಿದ್ದಾಗಿ ವಕ್ತಾರರು ತಿಳಿಸಿದ್ದಾರೆ.
Discussion about this post