ಶ್ರೀನಗರ, ಅ.29: ಪಾಕ್ ಉಗ್ರರ ನೀಚ, ಕ್ರೂರಬುದ್ಧಿಯ ತೋರಿಸುವ ಘಟನೆ ಗಡಿ ಭಾಗದಲ್ಲಿ ನಡೆದಿದೆ.
ಭಾರತೀಯ ಯೋಧನನ್ನು ಹತ್ಯೆ ಮಾಡಿ, ಅವನ ದೇಹವನ್ನು ಹಲವು ತುಂಡುಗಳನ್ನಾಗಿ ಕತ್ತರಿಸಿದ್ದಾರೆ. ಇಂತಹ ಹೇಯ ಕೃತ್ಯ ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ನಡೆದಿದೆ.
ಗಡಿನಿಯಂತ್ರಣ ರೇಖೆ ಮೀರಿ ಒಳನುಗ್ಗಿದ ಉಗ್ರರು, ಯೋಧನಿಗೆ ಗುಂಡಿಕ್ಕಿದ್ದಾರೆ. ಆತ ಮೃತನಾದ ಬಳಿಕ, ಅವನ ದೇಹವನ್ನು ಕತ್ತರಿಸಿದ್ದಾರೆ. ಹೀಗೆ ಕತ್ತರಿಸಲ್ಪಟ್ಟ ದೇಹ, ಮಚಿಲ್ ವಲಯದಲ್ಲಿ ದೊರೆತಿದೆ.
ಸೇನಾ ವಕ್ತಾರರ ಪ್ರಕಾರ, ಉಗ್ರರು ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ನುಗ್ಗುವ ಮುನ್ನ ಈ ಕೃತ್ಯವೆಸಗಿದ್ದಾರೆ. ಇದೇ ಸಮಯದಲ್ಲಿ ಪಾಕಿಸ್ಥಾನ ಗುಂಡಿನ ದಾಳಿ ನಡೆಸಿ, ಅವರಿಗೆ ಸಹಕರಿಸಿದೆ ಎಂದು ಆರೋಪಿಸಿದ್ದಾರೆ.















