Read - < 1 minute
ನವದೆಹಲಿ: ಸೆ:30: ಭಾರತೀಯ ವಾಯು ಪ್ರದೇಶದ ಮೇಲೆ ಪಾಕಿಸ್ತಾನದ ಏರ್ಲೈನ್ ವಿಮಾನಗಳು ಇನ್ನು ಮುಂದೆ ಹಾರಾಡುವುದು ಅನುಮಾನ. ಪಾಕ್ ಆಕ್ರಮಿಕ ಕಾಶ್ಮೀರದಲ್ಲಿ ಸೇನಾಪಡೆಗಳು ನಡೆಸಿದ ಕಾರ್ಯಾಚರಣೆ ನಂತರ ಪ್ರಧಾನಮಂತ್ರಿಯವರ ಕಾರ್ಯಾಲಯ (ಪಿಎಂಓ) ಈ ಬಗ್ಗೆ ಗಂಭೀರ ಪರಿಶೀಲನೆ ನಡೆಸುತ್ತಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಯಾಣಿಕರ ವಿಮಾನಗಳ ಸಂಚಾರ ಈವರೆಗೆ ಅಬಾಧಿತವಾಗಿದೆ. ಉಭಯ ದೇಶಗಳ ನಡುವೆ ನೇರ ವಿಮಾನಗಳಿಗೆ ಪ್ರಸ್ತುತ ಅವಕಾಶವಿದೆ. ಆದರೆ ಪಾಕಿಸ್ತಾನದ ಉಗ್ರಗಾಮಿಗಳ ಉಪಟಳ ಮತ್ತು ಅವರನ್ನು ಸಂಹಾರ ಮಾಡಲು ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆ ನಂತರದ ಬೆಳೆವಣಿಗೆ ಹಿನ್ನೆಲೆಯಲ್ಲಿ ಸಿಂಧೂ ಜಲ ಒಪ್ಪಂದ ಮರುಪರಿಶೀಲಿಸುತ್ತಿರುವ ಭಾರತವು, ತನ್ನ ಪ್ರದೇಶದಲ್ಲಿ ಪಾಕ್ ವಿಮಾನಗಳ ಹಾರಾಟಕ್ಕೂ ಕಡಿವಾಣ ಹಾಕಲು ಗಂಭೀರ ಚಿಂತನೆ ನಡೆಸಿದೆ.
ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ಒಂದು ವಾರದಲ್ಲಿ ಐದು ವಿಮಾನಗಳನ್ನು ಭಾರತಕ್ಕೆ ಸಂಚಾರದ ವ್ಯವಸ್ಥೆ ಕಲ್ಪಿಸಿದೆ ಒಂದು ವಿಮಾನ ದೆಹಲಿ-ಕರಾಚಿ ಮಾರ್ಗವಾಗಿ ಹಾಗೂ ತಲಾ ಎರಡು ವಿಮಾನಗಳು ದೆಹಲಿ-ಲಾಹೋರ್ ಮತ್ತು ಮುಂಬೈ ಕರಾಚಿ ನಗರಗಳ ನಡುವೆ ಹಾರುತ್ತಿದೆ.
ಪಾಕಿಸ್ತಾನದ ಏರ್ಲೈನ್ ವಿಮಾನಗಳು ಇನ್ನು ಮುಂದೆ ತನ್ನ ವಾಯುಪ್ರದೇಶದಲ್ಲಿ ಹಾರಾಡುವುದನ್ನು ನಿಷೇಧಿಸಲು ಸಾಧ್ಯವೇ? ಇದರಿಂದ ಭಾರತದ ವಿಮಾನಯಾನದ ಮೇಲೆ ಯಾವುದಾದರೂ ಪರಿಣಾಮ ಉಂಟಾಗಲಿದೆಯೇ ? ಇವುಗಳ ಬಗ್ಗೆ ಸವಿವರ ಮಾಹಿತಿ ನೀಡುವಂತೆ ಪ್ರಧಾನಮಂತ್ರಿಯವರ ಕಾರ್ಯಾಲಯವು ನಾಗರಿಕ ವಿಮಾನಯಾನ ಇಲಾಖೆಯನ್ನು ಕೋರಿದೆ. ಈ ಕುರಿತು ಅಗತ್ಯವಾದ ಎಲ್ಲ ಮಾಹಿತಿಗಳನ್ನು ಪಿಎಂಓಗೆ ನೀಡಲಾಗಿದೆ. ಈ ಕುರಿತು ಅತಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಭಾರತದ ಐದು ಏರ್ಲೈನ್ ಸಂಸ್ಥೆಗಳು ಪಾಕಿಸ್ತಾನ ವಾಯುಪ್ರದೇಶದಿಂದ ತನ್ನ ವಿಮಾನಗಳ ಹಾರಾಟದ ದಿಕ್ಕನ್ನು ಬದಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಇತ್ತೀಚೆಗೆ ಕೋರಿದ್ದವು.
Discussion about this post