Read - < 1 minute
ಟೊರೊಂಟೊ, ಅ:4:ಭಾರತ ಮತ್ತು ಪಾಕಿಸ್ಥಾನ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಭಾರತದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಕೆನಡಾ ಪ್ರವಾಸದಲ್ಲಿರುವ ಜೇಟ್ಲಿ, ರಾಜಧಾನಿ ಟೊರೊಂಟೊ ವಿಶ್ವವಿದ್ಯಾಲಯದ ರೋಟ್ ಮ್ಯಾನ್ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಪ್ರದೇಶದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿ ಕಾರ್ಯಾಚರಣೆಗಳಂಥ ಯಾವುದೇ ಪ್ರಸಂಗಗಳಿಂದ ಉಭಯ ದೇಶಗಳ ನಡುವೆ ಬಿಗಡಾಯಿಸಿರುವ ಪ್ರಕ್ಷುಬ್ಧ ಸ್ಥಿತಿಯಿಂದ ಯಾವುದೇ ಆರ್ಥಿಕ ದುಷ್ಪರಿಣಾಮ ಉಂಟಾಗುವುದಿಲ್ಲ. ಒಂದು ವೇಳೆ ಅದು ಪರಿಣಾಮ ಬೀರಿದರೂ ಅದು ನಗಣ್ಯವಾದುದು. ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಗಳು ಮುಂದುವರಿದಿವೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಕೆನಡಾದ ವಿತ್ತ ಸಚಿವ ಬಿಲ್ ಮತ್ತು ಅಂತರ್ರಾಷ್ಟ್ರೀಯ ವಾಣಜ್ಯ ಸಚಿವ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರನ್ನು ಭೇಟಿ ಮಾಡಿದ ಜೇಟ್ಲಿ ಉಭಯ ದೇಶಗಳ ಸಂಬಂಧ ಪ್ರಗತಿಯನ್ನು ಪರಾಮರ್ಶಿಸಿದರು.
ಉದ್ದೇಶಿತ ಮಹತ್ವದ ಒಪ್ಪಂದಗಳ ಕುರಿತು ಚರ್ಚಿಸಿದ ಅವರು ಭಾರತದಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿದ್ದಾರೆ. ಆರ್ಥಿಕ ಮತ್ತು ಹಣಕಾಸು ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸಲು ಭಾರತ ಮತ್ತು ಕೆನಡಾ ಬದ್ಧವಾಗಿವೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
Discussion about this post