ಶಿಮ್ಲಾ, ಆ.30: ಕಳೆದ ಎಂಟು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಲ್ಲಿನ ಚಂದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕುಸಿದುಬಿದ್ದಿದೆ.
ಟ್ರಕ್ ಒಂದು ಸೇತುವೆ ಮೇಲೆ ಚಲಿಸುತ್ತಿದ್ದ ವೇಳೆ ಸೇತುವೆ ಕುಸಿಯಲಾರಂಭಿಸಿತು. ಈ ವೇಳೆ ಅಪಾಯಕ್ಕೆ ಸಿಲುಕುತ್ತಿದ್ದ ಟ್ರಕ್ ಚಾಲಕನನ್ನು ರಕ್ಷಿಸಲಾಗಿದೆ. ಟ್ರಕ್ ಸೇತುವೆ ಮೇಲೆ ಚಲಿಸುತ್ತಿದ್ದ ಸಂದರ್ಭದಲ್ಲಿಯೇ ಸೇತುವ ಕುಸಿಯಲಾರಂಭಿಸಿದ್ದು, ನೋಡ ನೋಡುತ್ತಿದ್ದಂತೆಯೇ ಇಡೀ ಸೇತುವೆ ಕುಸಿದಿದೆ. ಈ ವೇಳೆ ಟ್ರಕ್ ನಲ್ಲಿದ್ದ ಚಾಲಕ ಹೊರಬರಲು ಯತ್ನಿಸಿದ್ದನಾದರೂ ಸೇತುವೆ ಕುಸಿದ ಪರಿಣಾಮ ಆತ ಪ್ರಾಣಾಪಾಯಕ್ಕೆ ಸಿಲುಕಿದ್ದ. ಕೂಡಲೇ ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿಗಳು ಆತನನ್ನು ಹರಸಾಹಸ ಪಟ್ಟು ರಕ್ಷಿಸಿದ್ದಾರೆ.
ರೋಹ್ಟಂಗ್ ಸಮೀಪದ ಲೇಹ್ ಮನಾಲಿ ಹೆದ್ದಾರಿಯಲ್ಲಿ ಸುಮಾರು 8.8 ಕಿ.ಮೀ ಉದ್ದದ ಸುರಂಗ ಕೊರೆಯಲಾಗುತ್ತಿದ್ದು, ಸುರಂಗ ಮಾರ್ಗಕ್ಕೆ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಲು ಈ ಸೇತುವೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಭಾರಿ ಮಳೆ ಹಾಗೂ ಸುರಂಗ ಕಾರ್ಯದ ನಿಮಿತ್ತ ಭೂಮಿ ಕೊರೆಯುತ್ತಿರುವುದರಿಂದ ಸೇತುವೆಯ ಅಡಿಪಾಯದ ಭೂಮಿ ಕುಸಿದಿದೆ ಎಂದು ಹೇಳಲಾಗುತ್ತಿದೆ. ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಪ್ರದೇಶಕ್ಕೆ ಧಾವಿಸಿರುವ ಅಧಿಕಾರಿಗಳು ಸೇತುವೆ ಕುಸಿತಕ್ಕೆ ಭೂಕುಸಿತವೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
Discussion about this post