ಉಡುಪಿ, ಆ.31: ನೂರಾರು ಕೋಟಿ ರು. ಆಸ್ತಿಗಾಗಿ ಅನಿವಾಸಿ ಭಾರತೀಯ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣದ ಪ್ರಮುಖ ಸಾಕ್ಷ್ಯ ಸಂಗ್ರಹಕ್ಕಾಗಿ ಡಿ.ಎನ್.ಎ. ಪರೀಕ್ಷೆ ನಡೆಸಲು ಪೊಲೀಸರು ಬುಧವಾರ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅವರ ತಾಯಿ ಹಾಗೂ ಸಹೋದರನ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಸ್ಕರ ಶೆಟ್ಟಿ ಅವರು ಕೊಲೆಯಾಗಿದ್ದಾರೆ ಎಂದು ಸ್ವತಃ ಆರೋಪಿಗಳೇ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದರೂ, ಭಾಸ್ಕರ ಶೆಟ್ಟಿ ಅವರ ಶವ ಅಥವಾ ಶವದ ಯಾವುದೇ ಕುರುಹುಗಳು ಪೊಲೀಸರಿಗೆ ಸಿಕ್ಕಿಲ್ಲ. ಆದ್ದರಿಂದ ಭಾಸ್ಕರ ಶೆಟ್ಟಿ ಅವರು ಸತ್ತಿದ್ದಾರೆ ಎಂದು ಪೊಲೀಸರಿಗೆ ಸಾಬೀತು ಮಾಡುವುದು ಬಹುದೊಡ್ಡ ಸವಾಲಾಗಿದೆ.
ಈ ಹಿನ್ನೆಲೆಯಲ್ಲಿ ಭಾಸ್ಕರ ಶೆಟ್ಟಿ ಅವರನ್ನು ಸುಟ್ಟು ಹಾಕಿ ಬೂದಿ ಎಸೆಯಲಾಗಿದೆ ಎನ್ನಲಾಗಿರುವ ಸ್ಥಳದಲ್ಲಿ ಸಿಕ್ಕಿರುವ ಮೂಳೆಯ ಡಿ.ಎನ್.ಎ.ಯನ್ನು, ಅವರ ತಾಯಿ ಮತ್ತು ಸಹೋದರನ ಡಿ.ಎಮ್.ಎ.ದೊಂದಿಗೆ ಹೋಲಿಸಿ, ಭಾಸ್ಕರ ಶೆಟ್ಟಿ ಕೊಲೆಯಾಗಿದ್ದಾರೆ ಎಂದು ಸಾಬೀತುಪಡಿಸಬೇಕಾಗಿದೆ.
ಅದಕ್ಕಾಗಿ ನ್ಯಾಯಾಲಯದ ಅನುಮತಿಯೊಂದಿಗೆ, ಬುಧವಾರ ಜಿಲ್ಲಾ ನ್ಯಾಯಾಲಯಕ್ಕೆ ಭಾಸ್ಕರ ಶೆಟ್ಟಿ ಅವರ ತಾಯಿ ಗುಲಾಬಿ ಶೆಟ್ಟಿ ಮತ್ತು ಸಹೋದರ ಸುರೇಶ್ ಶೆಟ್ಟಿ ಅವರನ್ನು ಕರೆಯಿಸಿ, ವೈದ್ಯರಿಂದ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು. ಅದನ್ನು ಅತ್ಯಂತ ಸುರಕ್ಷಿತವಾಗಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಡಿ.ಎನ್.ಎ. ಪರೀಕ್ಷೆ ಮಾಡಿಸಲಾಗುವುದು. ಅಲ್ಲಿಂದ ಬರುವ ಸಕರಾತ್ಮಕ ಅಥವಾ ನಕರಾತ್ಮಕ ವರದಿನ್ನು ಆಧರಿಸಿ ಈ ಪ್ರಕರಣದ ತನಿಖೆಯ ಯಶಸ್ಸು ಅವಲಂಭಿಸಿದೆ.
ಸಹಆರೋಪಿಗಳಿಗೆ ನ್ಯಾಯಾಂಗ
ಭಾಸ್ಕರ ಶೆಟ್ಟಿ ಅವರನ್ನು ಪತ್ನಿ ರಾಜೇಶ್ವರಿ, ಮಗ ನವನೀತ್ ಅವರು ಕೊಂದು ತಮ್ಮ ಆಪ್ತ ನಿರಂಜನ ಶೆಟ್ಟಿ ಅವರ ಸಹಾಯದಿಂದ ಹೋಮಕುಂಡದಲ್ಲಿ ಸುಟ್ಟು ಹಾಕಿದ್ದರು. ಈ ಸುಟ್ಟು ಹಾಕಿರುವುದರ ಸಾಕ್ಷ್ಯಗಳನ್ನು ನಾಶ ಪಡಿಸಿದ ಆರೋಪದಲ್ಲಿ ನಿರಂಜನ ಭಟ್ಟನ ತಂದೆ ಶ್ರೀನಿವಾಸ ಭಟ್ಟ (55) ಮತ್ತು ಚಾಲಕ ರಾಘವೇಂದ್ರ (26)ಅವರನ್ನು ಪೊಲೀಸರು ಬಂಧಿಸಿದ್ದು, ಪೊಲೀಸ್ ಕಸ್ಡಡಿಗೆ ವಹಿಸಲಾಗಿತ್ತು.
ಅವರು ಬುಧವಾರ ಪುನಃ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ, ಅವರಿಗೆ ಸೆ.6ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಯಿತು.
ಆರೋಪಿ ಶ್ರೀನಿವಾಸ ಭಟ್ಟ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಅವರ ವಕೀಲ ವೈ.ವಿ. ಹೆಗ್ಡೆ ನ್ಯಾಯಾಧೀಶರ ಗಮನಕ್ಕೆ ತಂದರು. ಅದಕ್ಕೆ ನ್ಯಾಯಾಧೀಶರು ಜೈಲಿನಲ್ಲಿ ಖಾಯಿಲೆ ಉಲ್ಬಣಗೊಂಡರೆ ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲು ಕಾರಾಗೃಹ ಅಧಿಕಾರಿಯವರಿಗೆ ಸೂಚನೆ ನೀಡಿದರು.
ಪ್ರಕರಣದ ಪ್ರಮುಖ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ಟ ಸೆ. 6ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
Discussion about this post