ಬೆಂಗಳೂರು/ಮಂಡ್ಯ, ಸೆ.5: ಕೆಆರ್ ಎಸ್ ನಿಂದ ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದಲ್ಲಿ ಹೋರಾಟ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಂಡ್ಯ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದ್ದು, ಶುಕ್ರವಾರ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ.
ತಮಿಳುನಾಡಿನ ಪರ ಸುಪ್ರೀಂನಿಂದ ತೀರ್ಪು ಪ್ರಕಟವಾದ ತಕ್ಷಣ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ರೈತರ ಸಹನೆಯ ಕಟ್ಟೆ ಒಡೆದಿದ್ದು, ಪ್ರಮುಖವಾಗಿ ಮಂಡ್ಯ ಜಿಲ್ಲೆ ಅಘೋಷಿತ ಬಂದ್ ಗೆ ಸಾಕ್ಷಿಯಾಯಿತು. ಕಾವೇರಿ ನೀರಿನ ವಿಚಾರದಲ್ಲಿ ಪದೇ ಪದೇ ತಗಾದೆ ತೆಗೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಕನ್ನಡ ಪರ ಹೋರಾಟಗಾರರು ಜಯಲಲಿತಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಸಚಿವರಿಗೆ ಮಾದೇಗೌಡರಿಂದ ಹಿಗ್ಗಾಮುಗ್ಗಾ ತರಾಟೆ
ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಗೆ ಕರೆ ಮಾಡಿದ ಮಾಜಿ ಸಾಂಸದ ಜಿ. ಮಾದೇಗೌಡ, ಸಚಿವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಈ ವೇಳೆ ಸುಪ್ರೀಂ ಆದೇಶವನ್ನು ನಾವು ಪಾಲಿಸಬೇಕಾಗುತ್ತದೆ ಎಂದು ಪಾಟೀಲ್ ಹೇಳಿದ ವೇಳೆ ಕೆಂಡಾಮಂಡಲರಾದ ಮಾದೇಗೌಡ, ಸಚಿವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ಕಾವೇರಿ ವಿಚಾರದಲ್ಲಿ ರಾಜ್ಯದ ಅಸಮರ್ಥ ವಾದದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಾಳೆ ಮಂಡ್ಯ ಬಂದ್
ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರೈತರ ಸಹನೆ ಕಟ್ಟೆ ಒಡೆದಿದ್ದು, ಇಡಿಯ ಮಂಡ್ಯ ಜಿಲ್ಲೆಯಲ್ಲಿ ಅಘೋಷಿತ ಬಂದ್ ವಾತಾವರಣ ಏರ್ಪಟ್ಟಿದೆ. ತಮಿಳುನಾಡಿಗೆ ನೀರು ಬಿಡುವ ಆದೇಶದ ವಿರುದ್ಧ ಸಿಡಿದೆದ್ದಿರುವ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ತೀರ್ಪನ್ನು ವಿರೋಧಿಸಿ ಕಾವೇರಿ ಹಿತರಕ್ಷಣಾ ಸಮಿತಿ ನಾಳೆ ಮಂಡ್ಯ ಜಿಲ್ಲಾ ಬಂದ್ ಗೆ ಕರೆ ನೀಡಿದೆ.
ಜಿ ಮಾದೇಗೌಡ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅವು ಇಂತಿವೆ.
1. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮರು ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಬೇಕು.
2. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಸರ್ಕಾರದ ಮೇಲೆ ಒತ್ತಡ ಹೇರುವುದು.
3. ಬೆಂಗಳೂರಿಗರೂ ಸಹ ಕಾವೇರಿ ಹೋರಾಟದಲ್ಲಿ ಕೈಜೋಡಿಸಬೇಕು.
4. ಸರ್ವ ಪಕ್ಷದ ಜಿಲ್ಲಾ ಅಧ್ಯಕ್ಷರು ತಮ್ಮ ಪಕ್ಷದ ರಾಜ್ಯಧ್ಯಕ್ಷರುಗಳಿಗೆ ಕೂಡಲೇ ಪತ್ರ ಬರೆದು ಕಾವೇರಿ ಹೋರಾಟಕ್ಕೆ ಧುಮುಕವಂತೆ ಕಾರ್ಯಕರ್ತರಿಗೆ ಕರೆ ನೀಡಬೇಕು.
ಶುಕ್ರವಾರ ರಾಜ್ಯ ಬಂದ್ ಗೆ ಕರೆ
ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಶುಕ್ರವಾರ ರಾಜ್ಯ ಬಂದ್ ಗೆ ಕರೆ ನೀಡಿವೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕನ್ನಡ ಚಳುವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್, ಕಾವೇರಿ ವಿಚಾರದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಹೀಗಾಗಿ, ರಾಜ್ಯ ಬಂದ್ ಗೆ ಸಹಕರಿಸುವ ಮೂಲಕ ಕನ್ನಡಿಗರು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಇದೇ ವೇಳೆ ಮಾತನಾಡಿರುವ ಸಾರಾ ಗೋವಿಂದು, ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬೆಂಬಲವಿದೆ. ಶುಕ್ರವಾರ ಕರೆ ನೀಡಲಾಗಿರುವ ಬಂದ್ ಗೆ ಚಿತ್ರೋಧ್ಯಮದ ಸಂಪೂರ್ಣ ಬೆಂಬಲಿವಿದ್ದು, ಅಂದು ಸಂಪೂರ್ಣ ಚಿತ್ರರಂಗ ಬಂದ್ ಗೆ ಬೆಂಬಲ ನೀಡಲಿದೆ ಎಂದು ಹೇಳಿದರು. ಅಂತೆಯೇ ಕಾವೇರಿಗಾಗಿ ಹೋರಾಟ ಅನಿವಾರ್ಯವಾಗಿದ್ದು, ನ್ಯಾಯಾಲಯ ಕಣ್ಮುಚ್ಚಿ ತೀರ್ಮಾನ ನೀಡುತ್ತಿದೆ. ನ್ಯಾಯಾಲಯದಲ್ಲಿ ಯಾವಾಗಲೂ ತಮಿಳುನಾಡು ವಾದವೇ ಮೇಲಾಗುತ್ತೆ ಏಕೆ ಎಂದು ಸುಪ್ರೀಂಕೋರ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾಳೆ ಮುಖ್ಯಮಂತ್ರಿ ತುರ್ತು ಸಭೆ
ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ನಾಳೆ ಮದ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತುರ್ತು ಸಭೆ ಕರೆದಿದ್ದಾರೆ. ಸುಪ್ರೀಂ ಕೋರ್ಟ್ ನ ತೀರ್ಪಿನ ಹಿನ್ನಲೆಯಲ್ಲಿ ಸರ್ಕಾರ ಕೈಗೊಳ್ಳಬಹುದಾದ ತೀರ್ಮಾನಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ಅಂತೆಯೇ ನಾಳಿನ ಸಭೆಯಲ್ಲಿ ಸಚಿವರಾದ ಎಂಬಿ ಪಾಟೀಲ್, ಟಿಬಿ ಜಯಚಂದ್ರ ಸೇರಿದಂತೆ ಹಲವು ಸಚಿವರು ಹಾಗೂ ಕಾನೂನು ತಜ್ಞರು ಪಾಲ್ಗೊಳ್ಳಲಿದ್ದಾರೆ.
ಪುಟ್ಟಣ್ಣಯ್ಯ ಆಕ್ರೋಶ
ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರೈತ ಮುಖಂಡ ಹಾಗೂ ಶಾಸಕ ಪುಟ್ಟಣ್ಣಯ್ಯ, ಸುಪ್ರೀಂ ಕೋರ್ಟ್ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ವಾಸ್ತವ ಸ್ಥಿತಿಯನ್ನು ಸುಪ್ರೀಂಗೆ ಮನವರಿಕೆ ಮಾಡಿಕೊಡುವಲ್ಲಿ ಎಡವಿದೆ. ಈ ಹಿನ್ನೆಲೆಯಲ್ಲಿ ನಾಳಿನ ಬಂದ್ ಮೂಲಕ ತಕ್ಕ ಉತ್ತರ ನೀಡಿ, ಆನಂತರ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದಿದ್ದಾರೆ.
Discussion about this post