Read - < 1 minute
ನವದೆಹಲಿ, ಸೆ.3: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆಹಿಡಿಯಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಸಿದ್ಧಪಡಿಸಿದ್ದು, ಇದಕ್ಕಾಗಿ 50 ಮಂದಿ ಸದಸ್ಯರ ವಿಶೇಷ ತಂಡವನ್ನು ರಚಿಸಿದೆ.
ಹಲವು ವರ್ಷಗಳಿಂದಲೂ ದಾವೂದ್ ಪಾಕಿಸ್ಥಾನದ ಕರಾಚಿಯಲ್ಲಿಯೇ ನೆಲೆಯೂರಿದ್ದಾನೆಂದು ಈ ಹಿಂದೆ ಗುಪ್ತಚರ ಇಲಾಖೆ ಖಚಿತ ಮಾಹಿತಿ ನೀಡಿತ್ತು. ಈ ಮಾಹಿತಿಯನ್ನು ಆಧರಿಸಿ ದಾವೂದ್ ನನ್ನು ಸೆರೆಹಿಡಿಯಲು ಕೇಂದ್ರ ವಿಶೇಷ ತಂಡವನ್ನು ರೂಪಿಸಿದೆ ಎಂದು ತಿಳಿದುಬಂದಿದೆ.
50 ಉನ್ನತಾಧಿಕಾರಿಗಳನ್ನೊಳಗೊಂಡ 5 ವಿಶೇಷ ತನಿಖಾ ತಂಡಗಳನ್ನು ಕೇಂದ್ರ ರಚನೆ ಮಾಡಿದ್ದು, ವಿಶ್ವದಾದ್ಯಂತ ದಾವೂದ್ ಗೆ ಸೇರಿದ ಉದ್ಯಮ ಸಾಮ್ರಾಜ್ಯ ಹಾಗೂ ಇನ್ನಿತರೆ ಆಸ್ತಿಪಾಸ್ತಿಗಳನ್ನು ನಾಶ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ದಾವೂದ್ ಹಾಗೂ ಆತನ ಸಹಚರರ ಚಟುವಟಿಕೆಗಳ ಮೇಲೆ ಅಧಿಕಾರಿಗಳು ಕಣ್ಗಾವಲಿರಿಸಲಿದ್ದು, ಇದಕ್ಕಾಗಿ ಅಧಿಕಾರಿಗಳಿಗೆ ಸರ್ಕಾರ ವಿಶೇಷ ಅಧಿಕಾರವನ್ನು ನೀಡಿದೆ ಎನ್ನಲಾಗಿದೆ.
ಆರೋಗ್ಯ ಸಮಸ್ಯೆಯಿಂದಾಗಿ ದಾವೂದ್ ಕರಾಚಿಯಲ್ಲಿಯೇ ಇದ್ದು, ಕರಾಚಿಯಿಂದ ದೂರ ಪ್ರಯಾಣ ಮಾಡುತ್ತಿಲ್ಲ. ಪಾಕಿಸ್ತಾನದಲ್ಲೂ ತನ್ನ ಮೇಲೆ ದಾಳಿ ನಡೆಯಬಹುದೆಂಬ ಭಯದಲ್ಲಿರುವ ದಾವೂದ್, ‘ಶೇಖ್ ಇಸ್ಮಾಯಿಲ್ ಮರ್ಚೆಂಟ್’ ಎಂಬ ಹೆಸರಿನಲ್ಲಿ ನೆಲೆಯೂರಿದ್ದಾನೆ ಎನ್ನಲಾಗಿದೆ. ಭದ್ರತೆ ದೃಷ್ಟಿಯಿಂದಾಗಿ ಯಾವುದೇ ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ.
Discussion about this post