ಮಡಿಕೇರಿ, ಅ.14: ಡಿಸೆಂಬರ್ ಅಂತ್ಯದೊಳಗೆ ಆದಿವಾಸಿ ಅರಣ್ಯ ಹಕ್ಕು ಮಸೂದೆಯನ್ನು ಅನುಷ್ಟಾನಗೊಳಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜೆ.ಪಿ. ರಾಜು ಎಚ್ಚರಿಕೆ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶವಿದ್ದರೂ ಕಳೆದ ಹತ್ತು ವರ್ಷಗಳಿಂದ ಆದಿವಾಸಿ ಅರಣ್ಯ ಹಕ್ಕು ಮಸೂದೆ ಅನುಷ್ಠಾನಗೊಳ್ಳದೆ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬುಡಕಟ್ಟು ಕೃಷಿಕರ ಸಂಘ, ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ನಿರ್ಧರಿಸಿದೆ. ವಿಳಂಬ ಧೋರಣೆ ವಿರುದ್ಧ ಅ.೧೪ ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಆದಿವಾಸಿಗಳನ್ನು ಕಡೆಗಣಿಸಲಾಗುತ್ತಿದ್ದು, ನ್ಯಾಯಯುತವಾಗಿ ಸಿಗಬೇಕಾದ ಯಾವುದೇ ಹಕ್ಕುಗಳು ಸಿಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ೨೦೦೬ರಲ್ಲೇ ಅರಣ್ಯ ಹಕ್ಕು ಮಸೂದೆ ಜಾರಿಯಾಗಿದ್ದರೂ ಜಿಲ್ಲೆಯಲ್ಲಿ ಅಧಿಕಾರಿಗಳು ಬದಲಾವಣೆಯಾಗುತ್ತಿದ್ದಾರೆಯೇ ಹೊರತು ಕಾಯ್ದೆ ಮಾತ್ರ ಅನುಷ್ಟಾನಗೊಳ್ಳುತ್ತಿಲ್ಲ. ಹಾಡಿಯಲ್ಲಿರುವ ಗಿರಿಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಭೂಮಿಯ ಹಕ್ಕು ಪತ್ರ ನೀಡದೆ ಸತಾಯಿಸಲಾಗುತ್ತಿದೆ. ಕುಡಿಯುವ ನೀರು, ಪೌಷ್ಟಿಕ ಆಹಾರ, ಆರೋಗ್ಯ ಸಂಬಂಧಿತ ಸೌಲಭ್ಯಗಳು, ಶಿಕ್ಷಣ, ಉದ್ಯೋಗ ಇತ್ಯಾದಿ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ ಎಂದು ದೂರಿದರು.
ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ತಲಾ ೧೦ ಏಕರೆ ಭೂಮಿಯನ್ನು ಮಂಜೂರು ಮಾಡಬೇಕೆನ್ನುವ ನಿಯಮವಿದ್ದರೂ ನಾಗರಹೊಳೆ ವ್ಯಾಪ್ತಿಯಲ್ಲಿ ಕೇವಲ ಮನೆ ನಿರ್ಮಿಸಲು ಅಗತ್ಯವಿರುವಷ್ಟು ಜಾಗವನ್ನು ಮಾತ್ರ ಮಂಜೂರು ಮಾಡಲಾಗುತ್ತಿದೆ. ಕನಿಷ್ಠ ೫ ಏಕರೆ ಭೂಮಿಯನ್ನಾದರೂ ಮಂಜೂರು ಮಾಡಬೇಕು ಮತ್ತು ಅರಣ್ಯ ಹಕ್ಕು ಕಾಯ್ದೆಯ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಅ.೧೪ ರಂದು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಕಾಯ್ದೆ ಅನುಷ್ಠಾನಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಸಂಘದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಆರ್.ಕೆ. ಚಂದ್ರು ಮಾತನಾಡಿ, ಅಧಿಕಾರಿಗಳು ಕಾಟಾಚಾರಕ್ಕೆ ಆದಿವಾಸಿಗಳ ಬಗ್ಗೆ ಕಾಳಜಿ ತೋರುತ್ತಿದ್ದು, ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲವೆಂದು ಆರೋಪಿಸಿದರು.
ಅಧಿಕಾರಿಗಳು ಪ್ರಾಮಾಣಿಕವಾಗಿ ನಡೆದುಕೊಂಡಿದ್ದರೆ ಈಗಾಗಲೆ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಮಸೂದೆ ಜಾರಿ ಪೂರ್ಣವಾಗಬೇಕಿತ್ತು. ಆದರೆ, ಯಾವುದೇ ಹಾಡಿಗಳಿಗೆ ಭೇಟಿ ನೀಡದ ಅಧಿಕಾರಿಗಳು ಪ್ರವಾಸಿ ತಾಣ ವ್ಯಾಪ್ತಿಯ ಹಾಡಿಗಳಿಗಷ್ಟೆ ಭೇಟಿ ನೀಡುವ ನಾಟಕವಾಡುತ್ತಿದ್ದಾರೆ. ಗಿರಿಜನರ ಯೋಗಕ್ಷೇಮವನ್ನು ವಿಚಾರಿಸಲೆಂದು ಜಿಲ್ಲೆಗೆ ಆಗಮಿಸುವ ಹಿರಿಯ ಅಧಿಕಾರಿಗಳು ಪ್ರವಾಸಿ ತಾಣಗಳನ್ನು ವೀಕ್ಷಿಸಿ ಮರಳುತ್ತಿದ್ದಾರೆ. ಇತ್ತೀಚೆಗೆ ದೆಹಲಿಯಿಂದ ಹಿರಿಯ ಅಧಿಕಾರಿಯೊಬ್ಬರು ಆಗಮಿಸಿದ್ದು, ಬಸವನಹಳ್ಳಿಯ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ್ದರು. ಆದರೆ, ಈ ಬಗ್ಗೆ ಜಿಲ್ಲೆಯ ಆದಿವಾಸಿ ಮುಖಂಡರಿಗೆ ಯಾವುದೇ ಮಾಹಿತಿ ಇರಲಿಲ್ಲ. ಗಿರಿಜನರ ಅಭಿವೃದ್ಧಿಗಾಗಿ ಕೋಟಿ ಕೋಟಿ ಹಣ ಬರುತ್ತಿದೆಯೆಂದು ಪ್ರತಿಬಿಂಬಿಸಲಾಗುತ್ತಿದ್ದು, ಯಾವುದೇ ಅನುದಾನ ಸದ್ಬಳಕೆಯಾಗುತ್ತಿಲ್ಲ. ಹಕ್ಕು ಪತ್ರ ನೀಡಲಾಗುತ್ತಿದೆಯಾದರು ಹಕ್ಕುಪತ್ರದಲ್ಲಿ ಸರ್ವೆ ಸಂಖ್ಯೆಯನ್ನು ನಮೂದಿಸುತ್ತಿಲ್ಲ ಎಂದರು.
ಹಾಡಿಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದು, ಆರೋಗ್ಯ ಸಂಬಂಧಿಸಿದಂತೆ ಸ್ಪಂದನೆ ದೊರೆಯುತ್ತಿಲ್ಲ. ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಕೂಡ ದೊರಕುತ್ತಿಲ್ಲ. ಹಾಡಿಗಳಲ್ಲಿ ಕಳ್ಳಭಟ್ಟಿ ದಂಧೆ ನಡೆಯುತ್ತಿದೆಯೆಂದು ದೂರು ನೀಡಿದರೆ, ನೀವೇ ಆರೋಪಿಗಳನ್ನು ಹಿಡಿದು ಕೊಡಿ ಎಂದು ಹೇಳುತ್ತಾರೆ. ಪರಿಸ್ಥಿತಿ ಈ ರೀತಿಯಾದರೆ, ಪೊಲೀಸ್ ಇಲಾಖೆಯ ಅಗತ್ಯವೇನಿದೆ ಎಂದು ಆರ್.ಕೆ. ಚಂದ್ರು ಪ್ರಶ್ನಿಸಿದರು.
ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ, ಜಿಲ್ಲಾಡಳಿತ ೨೦೧೪ರ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆಯೆಂದು ಆರೋಪಿಸಿದರು. ಡಿಸೆಂಬರ್ ಅಂತ್ಯದೊಳಗೆ ಆದಿವಾಸಿ ಅರಣ್ಯ ಹಕ್ಕು ಕಾಯ್ದೆ ಅನುಷ್ಟಾನ ಪೂರ್ಣಗೊಳ್ಳದಿದ್ದಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಸರ್ಕಾರದ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆಯೆಂದು ಆರೋಪಿಸಿದ ಅವರು, ಡಿಸೆಂಬರ್ ತಿಂಗಳ ನಂತರ ಅಮರಣಾಂತ ಉಪವಾಸ ಮುಷ್ಕರ ಆರಂಭಿಸುವುದಾಗಿ ತಿಳಿಸಿದರು.
ಜನಪ್ರತಿನಿಧಿಗಳು ಜನಸೇವಕರಾಗಿ ಕಾರ್ಯ ನಿರ್ವಹಿಸಬೇಕು, ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ಮಾಲೀಕರಂತೆ ವರ್ತಿಸುತ್ತಿದ್ದು, ಸಮಸ್ಯೆಗಳನ್ನು ಹೇಳಿಕೊಳ್ಳಲು ಕೂಡ ಅವಕಾಶ ದೊರಕುತ್ತಿಲ್ಲವೆಂದು ಕುಡಿಯರ ಮುತ್ತಪ್ಪ ಆರೋಪಿಸಿದರು.
ಕುಡಿಯ ಜನಾಂಗವನ್ನು ಮೂಲ ಆದಿವಾಸಿ ಗುಂಪಿಗೆ ಸೇರ್ಪಡೆಗೊಳಿಸದಿರುವುದರಿಂದ ಪೌಷ್ಟಿಕ ಆಹಾರ ಸೇರಿದಂತೆ ಸರ್ಕಾರದ ಕೆಲವು ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿ ಕುಡಿಯ ಜನಾಂಗವನ್ನು ಮೂಲ ಆದಿವಾಸಿ ಗುಂಪಿಗೆ ಸೇರ್ಪಡೆಗೊಳಿಸಬೆೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿ.ಎಸ್. ಮುತ್ತ ಹಾಗೂ ಜೆ.ಕೆ. ರಾಮು ಉಪಸ್ಥಿತರಿದ್ದರು.
News by: ಇಂದ್ರೇಶ್, ಮಡಿಕೇರಿ
Discussion about this post