Read - 3 minutes
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ತಾನೇ ಮುಂದಿನ ಮುಖ್ಯಮಂತ್ರಿ ಎಂದು ಕನಸು ಕಾಣುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಎಲ್ಲಾ ರೀತಿಯಲ್ಲೂ ಟಾಂಗ್ ಕೊಡಲು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಯತ್ನ ನಡೆಸುತ್ತಿದ್ದರೂ ಅದೇಕೋ ಯಶಸ್ವಿಯಾಗುತ್ತಿಲ್ಲ. ಇದರಿಂದ ಬಿಜೆಪಿಯಲ್ಲಿನ ಬೆಳವಣಿಗೆ ಸದ್ಯ ಸರಿಹೋಗುವ ಲಕ್ಷಣ ಕಂಡುಬರುತ್ತಿಲ್ಲ.
ಮೊನ್ನೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಬಂದಾಗಲೂ ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ ಹೋಗಿದ್ದಾರೆ. ಆದರೆ ಸದ್ಯ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇಲ್ಲ. 2018ಕ್ಕೆ ಚುನಾವಣೆ ನಡೆಯಲಿದೆ. ಅದಕ್ಕೆ ಈಗಲೇ ತಯಾರಿ ನಡೆದರೆ ಏನೂ ಲಾಭವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಏಕೆಂದರೆ ಚುನಾವಣೆಯ ಮೇಲೆ ಪ್ರಭಾವ ಬೀರುವುದು ಆಯಾ ಸಂದರ್ಭದ ಬೆಳವಣಿಗೆಗಳು.
ಇದು ಯಡಿಯೂರಪ್ಪ ಅವರಿಗೂ ಗೊತ್ತಿದೆ. ಆದರೆ ಈಗಿನಿಂದಲೇ ತಾನೇ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡರೆ ಹೆಚ್ಚಿನ ಲಾಭವಾದೀತೆಂಬ ಕಾರಣವೂ ಅವರಲ್ಲಿದೆ. ಅವರ ಮೇಲಿರುವ ಹಲವಾರು ಕೇಸುಗಳೂ ಸಹ ಹಿನ್ನಡೆಯಾಗುವಂತೆ ಮಾಡಬಹುದು. ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳೂ ಸಹ ಅವರಿಗೆ ಮಾರಕವಾಗಬಹುದು. ಇಷ್ಟರೊಳಗೆ ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿನ ಫಲಿತಾಂಶ ಏರುಪೇರಾದರೂ ಪರಿಸ್ಥಿತಿ ಉಲ್ಟಾ ಹೊಡೆಯಬಹುದು. ಇದನ್ನೆಲ್ಲ ಅರಿತು ಹೆಜ್ಜೆ ಇಡುವ ಬದಲು ಈಗಿನಿಂದಲೇ ಚುನಾವಣೆ ತಯಾರಿ ಮಾಡುತ್ತಿದ್ದಾರೆ. ಇದರ ಉದ್ದೇಶ ಈಶ್ವರಪ್ಪ ಅವರು ಮುಂಚೂಣಿಗೆ ಬಾರದಂತೆ ಮಾಡುವುದೇ ಆಗಿದೆ.
ಈಶ್ವರಪ್ಪ ಅವರಿಗೂ ಬಿಜೆಪಿ ಅಧಿಕಾರಕ್ಕೇರಿದರೆ ತಾನೇ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿದೆ. ಏಕೆಂದರೆ ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೇರಿದಾಗ ಇಬ್ಬರು ಲಿಂಗಾಯಿತರು, ಒಬ್ಬ ಒಕ್ಕಲಿಗ ಒಟ್ಟು ಮೂರು ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿತು. ಹಿಂದುಳಿದವರು ಬಿಜೆಪಿಯಿಂದ ಮುಖ್ಯಮಂತ್ರಿ ಆಗಿಲ್ಲ. ಆ ಸಮುದಾಯದ ಲೀಡರ್ ತಾನೇ ಎನ್ನುವುದು ಈಶ್ವರಪ್ಪ ತಲೆಯಲ್ಲಿದೆ. ಅದಕ್ಕಾಗಿ ಈಗ ಹಿಂದ ಸಂಘಟನೆಯನ್ನೂ ಕಟ್ಟಹೊರಟಿದ್ದಾರೆ. ಅದರ ಉದ್ಘಾಟನೆಗೂ ತಯಾರಿ ನಡೆದಿದೆ.
ಆದರೆ, ಚುನಾವಣೆಯಲ್ಲಿ ಈ ಬಾರಿಯೂ ಯಡಿಯೂರಪ್ಪ ಜಾತಿಯನ್ನೇ ಮುಂದೆಮಾಡುವ ಸಂಭವ ಈಗಾಲೇ ದಟ್ಟವಾಗಿ ಕಾಣುತ್ತಿದೆ. ಅವರು ರಾಜ್ಯಾಧ್ಯಕ್ಷರಾದ ನಂತರ ಮಾಡಿದ ಕೆಲಸವೂ ಇದೇ ಆಗಿದೆ. ಲಿಂಗಾಯಿತ ಸಮುದಾಯದವರಿಗೆ ಪಕ್ಷದ ಎಲ್ಲ ಸ್ಥರದಲ್ಲೂ ಅಧಿಕಾರ ಸಿಗುವಂತೆ ಮಾಡಿದ್ದಾರೆ. ಹಲವು ಜಿಲ್ಲಾ ಅಧ್ಯಕ್ಷ ಸ್ಥಾನವು ಅವರಿಗೆ ದಕ್ಕುವಂತೆ ನೋಡಿಕೊಂಡಿದ್ದಾರೆ. ಇದರಿಂದ ಹಿಂದುಳಿದವರಿಗೆ ಮತ್ತು ನಿಷ್ಠಾವಂತರಿಗೆ ಅನ್ಯಾಯವಾಗಿದೆ ಎಂದು ಈಶ್ವರಪ್ಪ, ಸಿ.ಟಿ. ರವಿ ಮೊದಲಾದವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಅದರಲ್ಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಅಧ್ಯಕ್ಷರ ಬದಲಾವಣೆ ಬಿಎಸ್ವೈಗೆ ಸಂಕಟ ತಂದೊಡ್ಡಿದೆ.
ಈಶ್ವರಪ್ಪ ಅವರು ಯಾವ ಕಾರಣಕ್ಕೂ ಮುಖ್ಯಮಂತ್ರಿಯಾಗಬಾರದೆಂದು ಹಠ ತೊಟ್ಟಿರುವ ಬಿಎಎಸ್‌ವೈ ಅದಕ್ಕಾಗಿ ಅವರಿಗೆ ಮುಂದಿನ ವಿಧಾನಸಭೆಗೆ ಟಿಕೆಟ್ ಸಿಗದಂತೆ ಮಾಡುವ ಯತ್ನಕ್ಕೂ ಈಗಲೇ ನಾಂದಿ ಹಾಡಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಈಶ್ವರಪ್ಪ ಟಿಕೆಟ್ ಬಯಸುವುದು ನಿಶ್ಚಿತ. ಆದರೆ ಅದಕ್ಕೇ ಈಗಲೇ ಹಾಲಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಅವರಿಂದ ಟವೆಲ್ ಹಾಕಿಸುವ ಕೆಲಸ ನಡೆಯುತ್ತಿದೆ. ಈಶ್ವರಪ್ಪ ಹಾಲಿ ಎಂಎಲ್‌ಸಿ ಆಗಿರುವುದರಿಂದ ಅವರಿಗೆ ಒಟ್ಟೂ 6 ವರ್ಷದ ಅವಧಿ ಇದೆ. ಒಂದು ವೇಳೆ ಪಕ್ಷ ಅಧಿಕಾರಕ್ಕೇರಿದರೂ ಮಂತ್ರಿಯಾಗುವ ಸಾಧ್ಯತೆ ಇದ್ದೇ ಇದೆ . ಇದನ್ನು ಯಡಿಯೂರಪ್ಪ ಎತ್ತಿ ತೋರಿಸುತ್ತ ರುದ್ರೇಗೌಡರನ್ನು ಕಣಕ್ಕಿಳಿಸಲು ಎಲ್ಲ ಯತ್ನ ಮಾಡುವುದು ಖಚಿತ.
ಸದ್ಯ ಜಿಲ್ಲಾಧ್ಯಕ್ಷನನ್ನಾಗಿ ಕೂಡ್ರಿಸಿ, ನಂತರ ಟಿಕೆಟ್ ಕೊಡಿಸಿ ಗೆಲ್ಲಿಸುವುದು ಅವರ ತಂತ್ರ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಈಶ್ವರಪ್ಪ ವಿರುದ್ದ ತನ್ನ ಕೆಜೆಪಿಯಿಂದ ಇದೇ ರುದ್ರೇಗೌಡರನ್ನು ಕಣಕ್ಕಿಳಿಸಿ ಹೆಚ್ಚಿನ ಮತ ಸಿಗುವಂತೆ ಮಾಡಿದ್ದರು. ಆದರೆ ರುದ್ರೇಗೌಡರೂ ಗೆಲ್ಲಲಿಲ್ಲ. ಈಶ್ವರಪ್ಪರೂ ಗೆಲ್ಲಲಿಲ್ಲ. ಈ ಬಾರಿಯೂ ಇಬ್ಬರೂ ಇದೇ ಹಗ್ಗಜಗ್ಗಾಟ ಮುಂದುವರೆಸಿದರೆ ಮತ್ತೆ ಕಳೆದ ಚುನಾವಣೆಯ ಫಲಿತಶಂಶವೇ ಮರುಕಳಿಸಿದರೂ ಆಶ್ಚರ್ಯಪಡಬೇಕಿಲ್ಲ.
75 ವರ್ಷ ತಲುಪಿದವರಿಗೆ ಅಧಿಕಾರವಿಲ್ಲ ಎಂಬ ನಿಯಮ ಬಿಜೆಪಿಯಲ್ಲಿದೆ. ಇದನ್ನು ಎಲ್. ಕೆ. ಆಡ್ವಾಣಿಯಿಂದಲೇ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ಕೇಂದ್ರ ಸಚಿವೆಯಾಗಿದ್ದ, ಕಾಂಗ್ರೆಸ್‌ನಲ್ಲಿದ್ದು ಅಧಿಕಾರದ ಎಲ್ಲ ವೈಭೋಗಗಳನ್ನು ಅನುಭವಿಸಿದ್ದ ನಜ್ಮಾ ಹೆಫ್ತುಲ್ಲಾ ಅವರಿಗೂ ಇದೇ ನಿಯಮ ತೋರಿಸಿ ಸಚಿವ ಸ್ಥಾನದಿಂದ ಕೆಳಗಿಳಿಸಿ ಮೊನ್ನೆ ರಾಜ್ಯಪಾಲರನ್ನಾಗಿ ಕಳುಹಿಸಲಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಅವರಿಗೂ ವಯಸ್ಸಿನ ನಿಯಮ ಮತ್ತು ಗುಜರಾತಿನಲ್ಲಿ ಪಕ್ಷ ಕಳೆಗುಂದುತ್ತಿರುವ ಕಾರಣ ಅಧಿಕಾರದಿಂದ ಕೆಳಗಿಳಿಸಲಾಗಿದೆ.
ಕರ್ನಾಟಕದಲ್ಲೂ ಇದು ಅನ್ವಯವಾಗಲೇ ಬೇಕಲ್ಲವೇ? ಹಾಗಾದರೆ ಬಿಎಸ್‌ವೈ ಮುಖ್ಯಮಂತ್ರಿಯಾಗುವುದಿಲ್ಲ. 2018ಕ್ಕೆ ಬಿಎಸ್‌ವೈಗೆ 75 ತುಂಬುತ್ತದೆ. ಇದು ಅಮಿತ್ ಶಾ ಅವರಿಗೂ ಗೊತ್ತು. ಈಗ ಶಾ ಅವರ ಯೋಚನೆಯೆಂದರೆ, ಬಿಎಸ್‌ವೈ ನೇತೃತ್ವದಲ್ಲಿ ಪಕ್ಷವನ್ನು ಸಂಘಟಿಸಿದರೆ ನಂತರ ಅವರನ್ನು ವಯಸ್ಸಿನ ನಿರ್ಬಂಧದಿಂದ ಹೊರಗಿಡಬಹುದು. ಈಗಲೇ ಬಿಎಸ್‌ವೈ ಅವರನ್ನು ದೂರವಿಟ್ಟರೆ ಪಕ್ಷ ನೆಲಕಚ್ಚುವುದು ಖಚಿತ. ಇದನ್ನೆಲ್ಲ ಅರಿತೇ ಈಶ್ವರಪ್ಪ ಸಹ ತಯಾರಿ ನಡೆಸಿದ್ದಾರೆ. ಆದರೆ ಬಿಎಸ್‌ವೈ ಅಷ್ಟು ಸುಲಭದಲ್ಲಿ ಸ್ಥಾನ ಬಿಟ್ಟುಕೊಡುವವರಲ್ಲ. ತನ್ನ ಆಪ್ತೆ ಶೋಭಾ ಕರಂದ್ಲಾಜೆಗೆ ಪಟ್ಟ ಕಟ್ಟುವಂತಹ ಸ್ಥಿತಿ ನಿರ್ಮಾಣ ಮಾಡಿ, ತಾನು ಅದರ ಹಿಂದಿನ ಶಕ್ತಿಯಾಗಿ ಅಡಳಿತ ನಡೆಸಿದರೂ ಆಶ್ಚರ್ಯವೇನಿಲ್ಲ. ಹೀಗಾದರೆ ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ ಎಂಬ ಹಾಡನ್ನು ಹಾಡಬಹುದು.
ಈ ಎಲ್ಲ ಬೆಳವಣಿಗೆಗಳು ಬಿಎಸ್‌ವೈ ಮತ್ತು ಈಶ್ವರಪ್ಪ ಇಬ್ಬರಿಗೂ ತಿಳಿದಿದೆ. ಆದ್ದರಿಂದಲೇ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ಗುದ್ದಾಟ ಆರಂಭಿಸಿದ್ದಾರೆ. ಚುನಾವಣೆಯೇ ಇನ್ನೂ ನಿಗದಿಯಾಗಿಲ್ಲ, ಆದರೂ ಅಧಿಕಾರಕ್ಕಾಗಿ ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಇದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎಂಬ ಗಾದೆಮಾತಿನಂತಾಗಿದೆ. ರಾಜ್ಯದಲ್ಲಿ ಆಗಿನ ಪರಿಸ್ಥಿತಿ ಹೇಗಿರುತ್ತದೆಯೋ, ಬಿಜೆಪಿಗೆ ಪೂರಕವಿರುತ್ತದೆಯೋ ಎನ್ನುವುದನ್ನು ಈಗಲೇ ಹೇಳಲಾಗದು. ಏಕೆಂದರೆ ಸದ್ಯ ರಾಜ್ಯದಲ್ಲಿ ನಕಲಿ ಗೋರಕ್ಷಕರ ಮೆರೆದಾಟ, ದೇಶದ್ರೋಹದ ಹೆಸರಿನಲ್ಲಿ ಪುಂಡಾಟ ಹೆಚ್ಚುತ್ತಿದೆ. ದಲಿತರ ಮೇಲಿನ ಹಲ್ಲೆ ಇನ್ನೊಂದೆಡೆ ಪರಿಣಾಮ ಬೀರುವುದು ನಿಶ್ಚಿತ. ಏಕೆಂದರೆ ಬಿಜೆಪಿ ಹಿಂದೂಪರವಿರುವ ಪಕ್ಷವಾಗಿರುವುದರಿಂದ ಅದರ ಹೆಸರಲ್ಲಿ ಕೆಲವು ಸಂಘಟನೆಗಳು ಕೆಲಸ ಮಾಡುತ್ತ ಅಶಾಂತಿಗೆ ಕಾರಣವಾಗುತ್ತಿವೆ. ಈ ದೇಶದಲ್ಲಿ ದಲಿತ ಚಳವಳಿಗಳು ಹುಟ್ಟಿದ್ದೇ ಪುರೋಹಿತಶಾಹಿಗಳ ದೌರ್ಜನ್ಯದಿಂದ. ದಲಿತರ ಹೋರಾಟ ಹೆಚ್ಚಿದಲ್ಲಿ ಅದು ಬಿಜೆಪಿಗೆ ಮಾರಕವಾಗುವುದರಲ್ಲಿ ಸಂಶಯವಿಲ್ಲ. ಇತ್ತೀಚೆಗೆ ದಲಿತರು ಸಂಘಟಿತರಾಗುತ್ತಿದ್ದಾರೆ. ಅಹಿಂದವೂ ಸಹ ಅವರ ಒಂದು ಭಾಗವೇ ಆಗಿದೆ ಎನ್ನುವುದನ್ನು ಮರೆಯಬಾರದು.
ಸದ್ಯ ಸಿದ್ದರಾಮಯ್ಯ ವಿರುದ್ದ ಎಷ್ಟೇ ಬೈದಾಡಿದರೂ ಅದರಿಂದ ಬಿಜೆಪಿಗೆ ಏನೂ ಲಾಭವಾಗೊಲ್ಲ. ಅಹಿಂದದ ವರ್ಚಸ್ಸನ್ನು ಕಳೆಯಲು ಹಿಂದ ಬಂದರೂ ಸಾಧ್ಯವಿಲ್ಲ. ಹಿಂದದಲ್ಲಿ ಮುಸ್ಲಿಮರನ್ನು ಕೈಬಿಡಲಾಗಿದೆ. ಅಲ್ಲದೆ ಇದು ಈಶ್ವರಪ್ಪ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಸ್ಥಾಪಿಸಿಕೊಡಂಇದ್ದು ಎನ್ನುವುದು ಜಗಜ್ಜಾಹೀರಾಗಿದೆ. ಇದೆಲ್ಲವನ್ನೂ ಗಮನಿಸಿದರೆ ಕುರುಬ ಸಮಾಜದವರು ಸದ್ಯ ಈಶ್ವರಪ್ಪ ಸಮಾವೇಶದಲ್ಲಿ ಭಾಗವಹಿಸಬಹುದು. ಆದರೆ ಇವರಿಬ್ಬರೂ ಒಂದೇ ಸಮುದಾಯದ ಮುಖಂಡರು ಎನ್ನುವುದು ಇಲ್ಲಿನ ವಿಶೇಷ.
ಸದ್ಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಮನಿಸುವುದಾದರ ಅಹಿಂದದಿಂದಾಗಿ ಹಿಂದಕ್ಕೆ ನಿರೀಕ್ಷಿತ ಬೆಂಬಲ ಸಿಗುವುದು ಕಷ್ಟ. ಎರಡನೆಯದಾಗಿ ಚುನಾವಣೆಯನ್ನೇ ಗಮನದಲ್ಲಿಟ್ಟು ಇಂತಹ ಸಮಾವೇಶ ನಡೆಸುವುದಾದರೆ ಸಮುದಾಯದವರನ್ನೆಲ್ಲ ಕೊನೆಯವರೆಗೂ ಈಶ್ವರಪ್ಪ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಇದು ಸಾದ್ಯವೇ? ಬಿಜೆಪಿ ಇತರೇ ನಾಯಕರು ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವರೇ? ಬಿಎಸ್‌ವೈ ಈ ಸಂಘಟನೆಯ ವಿರುದ್ದ ಕ್ರಮ ಜರುಗಿಸಬಹುದಲ್ಲವೇ?.
ಇವೆಲ್ಲವುಗಳ ಆಧಾರದಲ್ಲಿ ಬಿಎಸ್‌ವೈ, ಈಶ್ವರಪ್ಪ ಅವರ ಮುಂದಿನ ರಾಜಕೀಯ ಬೆಳವಣಿಗೆಯನ್ನು ಗಮನಿಬಹುದಾಗಿದೆ.
Discussion about this post