ಬೆಂಗಳೂರು, ಸೆ.4: ನಪುಂಸಕನಾಗಿ ಬೃಹನ್ನಳೆಯ ರೂಪದಲ್ಲಿದ್ದ ಅರ್ಜುನ ಗೋರಕ್ಷಣೆಗಾಗಿ, ಅಜ್ಞಾತವಾಸದ ಭಯವನ್ನೂ ಲೆಕ್ಕಿಸದೇ ತನ್ನ ನೈಜರೂಪವನ್ನು ತೋರಿಸಿ ಮಹಾಸೈನ್ಯವನ್ನು ಏಕಾಂಗಿಯಾಗಿ ಎದುರಿಸಿ ಗೋ ಪ್ರೇಮವನ್ನು ಮೆರೆದ, ಇದು ನಮ್ಮೆಲ್ಲರಿಗೆ ಪರಮಾದರ್ಶ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ ಗೋಕಥಾದಲ್ಲಿ ಗೋ ಅಪಹರಣ ತಡೆಯಲು ಹೋರಾಡಿದ ಪಾಂಡವರ ಕಥೆಯನ್ನು ನಿರೂಪಿಸಿದ ಶ್ರೀಗಳು, ನಮ್ಮ ಸ್ವಭಾವದ ಬಗ್ಗೆ ಸ್ನೇಹಿತರಿಗಿಂತ, ವೈರಿಗಳಿಗೇ ಹೆಚ್ಚು ತಿಳಿದಿರುತ್ತದೆ. ಅಜ್ಞಾತವಾಸದಲ್ಲಿದ್ದ ಪಾಂಡವರನ್ನು ಹುಡುಕಲು ಕೌರವರು ಗೋ ಅಪಹರಣ ಮಾಡಿದರು. ಪಾಂಡವರ ಗೋ ಪ್ರೇಮದ ಅರಿವಿರುವುದರಿಂದಲೇ ಗೋವನ್ನು ದಾಳವಾಗಿ ಬಳಸಿದರು. ಗುಣಗಳೂ ಶತ್ರುಗಳಾಗಬಹುದಾದ ಸಾಧ್ಯತೆ ಇದ್ದು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬ ಕಿವಿಮಾತು ಹೇಳಿದರು.
ವಿರಾಟರಾಯನ ಗೋವುಗಳು ಅಪಹರಣವಾಗುತ್ತಿದ್ದಾಗ ಶಾಂತಿಪ್ರಿಯನಾದ ಧರ್ಮರಾಜನೂ ಗೋವುಗಳಿಗಾಗಿ ಯುದ್ಧಕ್ಕೆ ಮುಂದಾದ, ಉತ್ತರಕುಮಾರನು ತನ್ನ ದೌರ್ಬಲ್ಯವನ್ನು ತೊರೆದು ವೀರ ಗೋರಕ್ಷಕನಾದ, ಅರ್ಜುನ ಬೃಹನ್ನಳೆಯ ರೂಪವನ್ನು ತೊರೆದು ತನ್ನ ಗಾಂಡೀವವನ್ನು ಹಿಡಿದು ಲಕ್ಷಲಕ್ಷ ಸಂಖ್ಯೆಯ ಸೈನ್ಯವನ್ನು ಏಕಾಂಗಿಯಾಗಿ ಎದುರಿಸಿ ಗೋವುಗಳನ್ನು ಸಂರಕ್ಷಿಸಿ ತನ್ನ ಗೋಪ್ರೇಮವನ್ನು ಮೆರೆದ. ಇವರೆಲ್ಲರ ನಡೆ ನಮಗೆ ಅನುಕರಣೀಯ, ಭಾರತರೆಲ್ಲರೂ ಗೋಸಂರಕ್ಷಣೆಗೆ ಧ್ವನಿ ಎತ್ತಬೇಕಾಗಿದೆ ಎಂದು ಹೇಳಿದರು.
ಗೋಸೇವೆ ವನವಾಸಿಗಳನ್ನು ರಾಜಭವನ ವಾಸಿಗಳನ್ನಾಗಿಸುತ್ತದೆ, ಗೋವಿನ ಹಿಂಸೆ ರಾಜಭವನ ವಾಸಿಗಳೇ ಆದರೂ ಅವರನ್ನು ಯಮರಾಜಭವನ ವಾಸಿಗಳನ್ನಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರವಚನ, ಕಥನ, ಗಾಯನ, ರೂಪಕಗಳನ್ನೊಳಗೊಂಡ ಈ ಗೋಕಥೆಯಲ್ಲಿ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳೀ ಗಣಪತಿ ಅವರು ಮನಮೋಹಕವಾಗಿ ಚಿತ್ರಿಸಿದರು. ಡಾ| ಗಜಾನನ ಶರ್ಮ ಅವರ ಸಾಹಿತ್ಯ ಸಹಕಾರ, ಗಾಯನದಲ್ಲಿ ಶ್ರೀಪಾದ ಭಟ್, ದೀಪಿಕಾ ಭಟ್, ಶೃತಿರಂಜಿನಿ, ಸತ್ಯಜಿತ್ ಜೈನ್ ಕೊಲ್ಕೋತಾ, ಶ್ರದ್ಧಾ, ಪ್ರಿಯಾ ಕೊರಿಕ್ಕಾರ್, ರಘುನಂದನ ಬೇರ್ಕಡವು ಹಾಗೂ ಸಂಗೀತ ವಾದ್ಯಗಳಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಗಣೇಶ್ ಕೆ.ಎಸ್., ಗಣೇಶ್ ಗುಂಡ್ಕಲ್, ಆದಿತ್ಯ ಭಟ್ ಕೆಕ್ಕಾರು ಮೊದಲಾದವರು ಭಾಗವಹಿಸಿದ್ದರು. ಅನಂತರ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ರೂಪಕ ನಡೆಯಿತು. ಸಾವಿರಾರು ಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ವಕೀಲರ ಬಳಗ ಇಂದಿನ ಗೋಕಥೆಯ ಪ್ರಾಯೋಜಕತ್ವವನ್ನು ವಹಿಸಿತ್ತು, ಬಳಗದ ಪರವಾಗಿ ವೈ ಕೆ ಎನ್ ಶರ್ಮಾ ಅವರು ಪುಷ್ಪಾರ್ಚನೆ ನೆರವೇರಿಸಿದರು. ಮಾ ಗೋ ಪ್ರಾಡೆಕ್ಟ್ಸ್ ನ ಮಹಾವೀರ್ ಸೋನಿಕಾ ಶ್ರೀಗಳ ಮಾರ್ಗದರ್ಶನದಲ್ಲಿ ಉತ್ಪಾದಿಸಲಾಗುತ್ತಿರುವ ವಿಶ್ವದರ್ಜೆಯ ಗವ್ಯೋತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಗೋಕಥಾಗೀತೆ ಹಾಗೂ ಸಾಧನಾಪಂಚಕದ ದೃಶ್ಯಮುದ್ರಿಕೆಯನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಕಂಪನಿ ಕಾರ್ಯದರ್ಶಿಗಳ ಬಳಗ ಇಂದಿನ ಸರ್ವಸೇವೆಯನ್ನು ನೆರವೇರಿಸಿತು. ಉದ್ಯಮಿಗಳಾದ ಮಹಾವೀರ್ ಸೋನಿಕಾ , ನ್ಯಾಯವಾದಿಗಳಾದ ಶಂಭುಶರ್ಮ, ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಶ್ರೀ ಸೂಕ್ತ ಜಪ, ಶ್ರೀ ಸೂಕ್ತ ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ ನಡೆಯಿತು.
ಗಣೇಶಚತುರ್ಥಿ (5.09.2016):
ಗೋ-ಗಣಪತಿಯ ಪ್ರಾಣ ಪ್ರತಿಷ್ಠೆಯೊಂದಿಗೆ ಕಲ್ಪೋಕ್ತಪೂಜೆ ನೆರವೇರಲಿದ್ದು, ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋ-ಗಣಪತಿಗೆ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ. ಮಹಾಗಣಪತಿ ಹವನ, ಕ್ಷಿಪ್ರಗಣಪತಿ ಹವನ, ಸಹಸ್ರ ಅಪ್ಪ(ಅಪೂಪ) ಸೇವೆ, ಸಹಸ್ರದೂರ್ವಾಚನೆ, ಅಷ್ಟಾವಧಾನ ಸೇವೆ, ಅಥರ್ವಶೀರ್ಷ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ನಾಲ್ಕುದಿನಗಳ ಕಾಲ ಗೋ-ಗಣಪತಿಯ ಉಪಾಸನೆ ನೆರವೇರಲಿದೆ.
Discussion about this post