ನ್ಯೂಜೆರ್ಸಿ :ಅ-16:ನಾನು ಹಿಂದು ಸಮುದಾಯದ ಬಹುದೊಡ್ಡ ಅಭಿಮಾನಿಯಾಗಿದ್ದು, ನಾನು ಅಧಿಕಾರಕ್ಕೆ ಬಂದರೆ, ಮುಂಬರುವ ದಿನಗಳಲ್ಲಿ ಭಾರತ ಮತ್ತು ಅಮೆರಿಕ ರಾಷ್ಟ್ರಗಳು ವಿಶ್ವದಲ್ಲಿಯೇ ಬೆಸ್ಟ್ ಫ್ರೆಂಡ್ಸ್ ಆಗಲಿವೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅನಿವಾಸಿ ಭಾರತೀಯರು ಹಮ್ಮಿಕೊಂಡಿದ್ದ ರಿಪಬ್ಲಿಕನ್ ಅಭಿಯಾನದಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಯಶಸ್ವಿಯಾಗಿ ಸಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ವ್ಯಾಪಾರ-ವ್ಯವಹಾರ ವಿಸ್ತರಿಸಿದೆ. ಇಂತಹ ದೇಶದೊಂದಿಗೆ ನಾವು ಸದಾ ಕೈ ಜೋಡಿಸಲು ಉತ್ಸುಕರಾಗಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಭಾರತ ವಿಶ್ವದಲ್ಲಿಯೇ ಉತ್ತಮ ಗೆಳೆಯರು ಎನ್ನುವುದನ್ನು ಸಾಬೀತು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೋದಿಯವರು ಉತ್ತಮ ನಾಯಕರಾಗಿದ್ದಾರೆ. ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಲು ತುಂಬಾ ಉತ್ಸುಕನಾಗಿರುವೆ. ಮೋದಿಯವರು ಅಧಿಕಾರವಹಿಸಿಕೊಂಡಾಗಿನಿಂದಲೂ ಭಾರತಲ್ಲಿ ಸಾಕಷ್ಟು ಆರ್ಥಿಕ ಸುಧಾರಣೆ ಮತ್ತು ಆಡಳಿತಾತ್ಮಕ ಸುಧಾರಣೆಗಳು ಕಂಡುಬಂದಿದೆ. ಇದೇ ರೀತಿಯಲ್ಲಿ ಆಡಳಿತ ನಡೆಸಿ ಚುರುಕು ಮುಟ್ಟಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ನಾನೊಬ್ಬ ಹಿಂದೂ ಸಮುದಾಯದ ದೊಡ್ಡ ಅಭಿಮಾನಿಯಾಗಿದ್ದೇನೆ. ಭಾರತ ದೇಶದ ಅಭಿಮಾನಿಯಾಗಿದ್ದೇನೆ. ನಾನು ಚುನಾವಣೆಯಲ್ಲಿ ಗೆಲವು ಸಾಧಿಸಿದ್ದೇ ಆದರೆ, ಶ್ವೇತಭವನದಲ್ಲಿ ಹಿಂದೂ ಸ್ನೇಹಿತರ ಸಂಖ್ಯೆ ಹೆಚ್ಚಾಗಲಿದೆ ಎಂದಿದ್ದಾರೆ.
ಇದೇ ವೇಳೆ ಭಾರತದ ಮೇಲಿನ ಉಗ್ರರ ದಾಳಿಗಳನ್ನು ಖಂಡಿಸಿದ ಅವರು, ಭಯೋತ್ಪಾದನೆ ವಿರುದ್ಧ ಭಾರತ ಕೈಡಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಉಗ್ರರನ್ನು ಸದೆಬಡಿಯಲು ನಾವು ನೆರವು ನೀಡುತ್ತೇವೆಂದು ಘೋಷಿಸಿದ್ದಾರೆ.
Discussion about this post