“ರಾಷ್ಟ್ರ”ದ ಮಹತ್ವ ತಿಳಿಯದವರು, ತಾಯಿನಾಡಿನ ಅರ್ಥ ತಿಳಿಯದವರು ಗಾಂಧಿಗೆ ಕಣ್ಣುಮುಚ್ಚಿ ರಾಷ್ಟ್ರಪಿತ ಎನ್ನುವ ಪಟ್ಟ ಕಟ್ಟಿಬಿಟ್ಟಾಗಿದೆ. ಅವರ ಭಕ್ತರು ಅಥವಾ ಅವರ ಹೆಸರಿನಡಿ ತಮ್ಮ ದಂಧೆ ನಡೆಸುವವರಿಗೆ ಆತ ಮಹಾತ್ಮ! ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದ, ಅವರ ಮನಸ್ಸು-ಮಾತು-ಕೃತಿಗಳನ್ನು ಸರಿಯಾಗಿ ವಿಮರ್ಷಿಸದ ಹಲವರಿಗೂ ಆತ ಮಹಾತ್ಮ! ಉಪ್ಪು, ಚರಕಗಳಂಥ ಸಾಮಾನ್ಯ ವಸ್ತುಗಳನ್ನು ಬಳಸಿಕೊಂಡೇ ಪ್ರತಿಭಟನೆಯ ಸಂಕೇತವನ್ನಾಗಿಸಿದ ಈ ಅರೆನಗ್ನ ಫಕೀರನನ್ನು ಹೊಗಳಿ ಅಟ್ಟಕ್ಕೇರಿಸಿದವರಿಗೆ, ಆತ ಹೇಳಿದ ಆದರ್ಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ನೈಜ ಗಾಂಧಿ ಅನ್ನಿಸಿಕೊಂಡವರಿಗೆ ಲೆಖ್ಖವೇ ಇಲ್ಲ. ಆದರೆ ನಿಜವಾಗಿ ಗಾಂಧಿ ಹಾಗೆ ಇದ್ದರೇ? ನಿಜವಾಗಿಯೂ ಆತ ಮಹಾತ್ಮ ಹೌದೇ ಎನ್ನುವುದನ್ನು ವಿಶ್ಲೇಷಿಸಬಾರದೆಂದೇನೂ ಇಲ್ಲವಲ್ಲ. ಭುವಿಗಿಳಿದ ದೇವರಾದ ರಾಮ-ಕೃಷ್ಣರನ್ನೇ ವಿಚಾರಣೆಗೆ ಒಳಪಡಿಸುವ ಈ ಭಾರತದಲ್ಲಿ ಯಕಃಶ್ಚಿತ್ ಮನುಷ್ಯನೊಬ್ಬನನ್ನು ವಿಶ್ಲೇಷಿಸಿದರೆ ತಪ್ಪೇನು? ಗೆಳೆಯರೊಬ್ಬರ ಪ್ರಶ್ನೆಗಳಿಗೆ ಉತ್ತರವಾಗಿ ಈ ಸರಣಿ ಲೇಖನಕ್ಕೆ ಮುಂದಾಗುತ್ತಿದ್ದೇನೆ. ಪರ-ವಿರೋಧದ ಕಾಮೆಂಟುಗಳು ಸಭ್ಯತೆಯ ಎಲ್ಲೆ ದಾಟದಿರಲಿ-ವಸ್ತುನಿಷ್ಠವಾಗಿರಲಿ.
ಇತಿಹಾಸ ಕುರುಡು ದೇವರಲ್ಲ. ಬೇರೆಯವರ ಕುರುಡುತನವನ್ನು ಅದು ಕ್ಷಮಿಸುವುದೂ ಇಲ್ಲ. ಇತಿಹಾಸದ ಭಾಗವನ್ನು ನಿರ್ವಹಿಸುವ ವ್ಯಕ್ತಿ ಇತಿಹಾಸಕ್ಕೆ ಸೇರಿ ಬಿಡುತ್ತಾನೆ. ಹಾಗೆಯೇ ಇತಿಹಾಸವನ್ನು ಮರೆತ ಜನಾಂಗ ಇತಿಹಾಸವೇ ಆಗಿಬಿಡುತ್ತದೆ! “ಯಾವ ವ್ಯಕ್ತಿ ಕಾಯಾ-ವಾಚಾ-ಮನಸಾ ಒಂದೇ ರೀತಿ ಇರುತ್ತಾನೋ ಅವನು ಮಾತ್ರ ಮಹಾತ್ಮ”. ಇದರ ಅರ್ಥ ಅರಿತವರ್ಯಾರೂ ಗಾಂಧಿಯನ್ನು ಮಹಾತ್ಮ ಎಂದು ತಪ್ಪಿಯೂ ಕರೆಯಲಾರರು. ಅತ್ತ ಭಾರತ ವಿಭಜನೆ ಯೋಜನೆ ಹೊತ್ತು ವೈಸ್ ರಾಯ್ ಲಂಡನ್ ಬಿಟ್ಟು ಹೊರಟಿದ್ದ. ಅದೇ ಸಂಜೆ ಇತ್ತ ಗಾಂಧಿ ತಮ್ಮ ಪ್ರಾರ್ಥನಾ ಸಭೆಯಲ್ಲಿ “ಬೇಕಾದರೆ ಇಡೀ ದೇಶ ಹೊತ್ತಿ ಉರಿಯಲಿ; ನಾವು ಪಾಕಿಸ್ತಾನದ ಒಂದಿಂಚೂ ಜಾಗಕ್ಕೂ ಒಪ್ಪಿಗೆ ಕೊಡುವುದಿಲ್ಲ” ಎಂದು ಗುಡುಗಿದರು. ಹೀಗೆ ಅಬ್ಬರಿಸಿದ್ದ ಗಾಂಧಿ 1947ರ ಜೂನ್ 2 ರಂದು ವೈಸ್ ರಾಯ್ ಭೇಟಿ ಮಾಡಬೇಕಾಯಿತು. ಭೇಟಿಗೆ ಮುನ್ನ ಇತರ ನಾಯಕರ ಜೊತೆ ಒಂದೂವರೆ ಗಂಟೆಗಳಿಗೂ ಹೆಚ್ಚುಕಾಲ ಚರ್ಚೆ ನಡೆಸಿದ್ದರು. ಅತಿ ನಿರೀಕ್ಷೆಯ ಹಾಗೂ ಬಹು ಪ್ರಮುಖವಾದ ಎಲ್ಲ ಭಾರತೀಯರ ಪ್ರತಿಕ್ರಿಯೆಗೆ ದನಿ ನೀಡುವ ಹೊಣೆಗಾರಿಕೆ ಅವರದಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ವೈಸ್ ರಾಯ್ ಕೊಠಡಿ ಪ್ರವೇಶಿಸಿದರು ಗಾಂಧಿ. ಮೌಂಟ್ ಬ್ಯಾಟನ್ ಕುರ್ಚಿಯಿಂದ ಎದ್ದು ಹೋಗಿ ನಗುತ್ತಾ ಹೃದಯಪೂರ್ವಕ ಸ್ವಾಗತ ಕೋರಿದ. ಪ್ರತಿಯಾಗಿ ಗಾಂಧಿ ತಾಯಿ ಮಗುವನ್ನು ಹೆದರಿಸುವ ರೀತಿ ತಮ್ಮ ಬಲಗೈ ತೋರುಬೆರಳನ್ನು ತುಟಿ ಮೇಲೆ ಹಿಡಿದರು. ಮೌಂಟ್ ಬ್ಯಾಟನ್ನಿಗೆ ಅರ್ಥವಾಯಿತು. ಅಂದು ಸೋಮವಾರ; ಗಾಂಧಿಯು ಮೌನವಿರುವ ದಿನ!
ಆರಾಮ ಕುರ್ಚಿಯಲ್ಲಿ ಕುಳಿತ ಗಾಂಧಿ ಲಕೋಟೆಗಳ ಕಟ್ಟೊಂದನ್ನು ತೆಗೆದು ಮೌಂಟ್ ಬ್ಯಾಟನ್ನಿನ ವಿಭಜನೆಯ ಯೋಜನೆಯನ್ನು ಕೇಳುತ್ತಾ ಕುಳಿತರು. ಎರಡಿಂಚು ಉದ್ದದ ಮೋಟು ಪೆನ್ಸಿಲನ್ನು ಒಮ್ಮೆ ನಾಲಗೆಗೆ ತಾಗಿಸಿ ಹಳೆ ಲಕೋಟೆಗಳ ಹಿಂಬದಿಯಲ್ಲಿ “ನನ್ನನ್ನು ಕ್ಷಮಿಸಿ, ನಾನು ಮಾತಾಡಲಾರೆ. ನಾನು ಸೋಮವಾರ ಮೌನ ವ್ರತ ಆಚರಿಸುವ ನಿರ್ಧಾರ ಮಾಡಿದಾಗ, ಅದನ್ನು ಪಾಲಿಸದಿರಲು ಎರಡು ಅಪವಾದಗಳನ್ನು ಇಟ್ಟುಕೊಂಡಿದ್ದೆ. ಒಂದು ಉನ್ನತ ಅಧಿಕಾರಸ್ಥರ ಜೊತೆ ತುರ್ತು ವಿಷಯಗಳನ್ನು ಮಾತಾಡುವಾಗ; ಇನ್ನೊಂದು ರೋಗಿಗಳನ್ನು ಭೇಟಿ ಮಾಡಬೇಕಾದಾಗ. ಆದರೆ ನೀವು ನನ್ನ ಮೌನ ಮುರಿಯಲು ಬಯಸುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ನಾನು ಮಾತಾಡಲೇ ಬೇಕಾದ ಒಂದೆರಡು ಸಂಗತಿಗಳಿವೆ. ಆದರೆ ಇಂದಲ್ಲ. ನಾವು ಮತ್ತೊಮ್ಮೆ ಭೇಟಿಯಾದರೆ ಆಗ ಮಾತಾಡುವೆ” ಎಂದು ಬರೆದು ಗಾಂಧಿ ಹೊರಬಂದರು. ಮೌಂಟ್ ಬ್ಯಾಟನ್ ಆ ಕಾಗದಗಳನ್ನು ಜೋಪಾನವಾಗಿ ಎತ್ತಿಟ್ಟುಕೊಂಡ. ಅವು ಚರಿತ್ರೆಯ ಭಾಗವಾಯಿತು. ಆದರೆ ಚರಿತ್ರೆ ಬರೆದವರ್ಯಾರೂ ಗಾಂಧಿಯ ಈ ನಡೆಯನ್ನು ಪ್ರಶ್ನಿಸಲೇ ಇಲ್ಲ!
ವೈಸ್ ರಾಯ್ ದೇಶವಿಭಜನೆಯ ಯೋಜನೆ ವಿವರಿಸಿದಾಗ ಗಾಂಧಿ ತುಟಿಪಿಟಿಕ್ಕೆನ್ನಲಿಲ್ಲ! ವೈಸ್ ರಾಯ್ ಭೇಟಿಗೆ ಮುನ್ನ ಉಳಿದ ನಾಯಕರೊಡನೆ 90 ನಿಮಿಷಗಳ ಕಾಲ ಚರ್ಚೆ ಮಾಡಿದ್ದ ಗಾಂಧಿ ಅದನ್ಯಾವುದನ್ನೂ ವೈಸ್ ರಾಯ್ ಮುಂದೆ ಹೇಳಲೇ ಇಲ್ಲ! ಕನಿಷ್ಟ ತನ್ನ ಮನಸ್ಸಿನಲ್ಲಿದ್ದುದನ್ನೂ ಹೇಳಲಿಲ್ಲ. ವಿಭಜನೆಯಿಂದ ದೇಶವನ್ನು ರಕ್ಷಿಸುವುದಕ್ಕಿಂತ ಗಾಂಧಿಗೆ ತನ್ನ ಮೌನ ವ್ರತವೇ ಮೇಲಾಯಿತು! ಮೂಟೆಗಟ್ಟಲೆ ಕಾಗದ ಹೊತ್ತೊಯ್ದಿದ್ದ ಗಾಂಧಿ ಕೊನೆ ಪಕ್ಷ ಬರವಣಿಗೆಯ ಮುಖಾಂತರವಾದರೂ ಜನರ ಅಭಿಪ್ರಾಯವನ್ನು ಹೇಳಬಹುದಿತ್ತು. ಕನಿಷ್ಟ ಅದನ್ನೂ ಮಾಡಲಿಲ್ಲ. ಅಪವಾದಾತ್ಮಕ ಸನ್ನಿವೇಶದಲ್ಲಿ ತನ್ನ ಮೌನ ವ್ರತವನ್ನು ಮುರಿಯಬಲ್ಲೆ ಎಂದು ಹೇಳಿದ್ದ ಗಾಂಧಿ ಅದನ್ನು ಪಾಲನೆ ಮಾಡಲಿಲ್ಲ. ತುರ್ತು ವಿಚಾರಗಳ ಬಗೆಗೆ ಉನ್ನತ ಅಧಿಕಾರಸ್ಥರ ಜೊತೆ ಮಾತಾಡುವಾಗ ಮೌನ ಮುರಿಯಬಲ್ಲೆ ಎಂದಿದ್ದ ಗಾಂಧಿಗೆ ವಿಭಜನೆಯ ಯೋಜನೆ ತುರ್ತು ವಿಚಾರ ಅನ್ನಿಸಲಿಲ್ಲವೇ? ಅಥವಾ ವೈಸ್ ರಾಯ್ ತುಂಡು ಬಟ್ಟೆ ತೊಟ್ಟು ತನ್ನ ಹಠಕ್ಕೆ ದೇಶವನ್ನು ಬಲಿ ಕೊಟ್ಟ ಯಕಶ್ಚಿತ್ ನಾಯಕನ ಮೌನ ಮುರಿಯುವಷ್ಟು “ಉನ್ನತ ಅಧಿಕಾರಿ”ಯಾಗಿರಲಿಲ್ಲವೇ? ರೋಗಿಗಳನ್ನು ಭೇಟಿ ಮಾಡಬೇಕಾದಾಗಲೂ ಮೌನ ಮುರಿಯುತ್ತೇನೆ ಅಂದಿದ್ದರು ಗಾಂಧಿ. ರಕ್ತ ಸೋರುತ್ತಿರುವ, ದೇಹವೇ ತುಂಡಾಗುತ್ತಿರುವ ಭಾರತ ಮಾತೆ ರೋಗದಿಂದ ಬಳಲುತ್ತಿದ್ದಂತೆ ಬೆಂಬಲಿಗರಿಂದ “ಸಂತ” ಎಂದು ಹೊಗಳಿಸಿಕೊಂಡ ವ್ಯಕ್ತಿಯ ದಿವ್ಯದೃಷ್ಟಿಗೆ ಗೋಚರಿಸಲಿಲ್ಲವೆ?
ಮತ್ತೊಮ್ಮೆ ಭೇಟಿಯಾದರೆ ಒಂದೆರಡು ವಿಷಯಗಳನ್ನು ಮಾತಾಡುವೆ ಎಂದು ಬರೆದು ಬಂದ ಗಾಂಧಿಗೆ ಮತ್ತೆ ಅವಕಾಶ ಸಿಗುವ ಖಚಿತತೆಯೂ ಇರಲಿಲ್ಲ. ದೇಶೀಯರ ಭಾವನೆಯನ್ನು ಹೇಳಬೇಕಾದ ಗಾಂಧಿ ಮೌನಿಯಾದ. ನಾಯಕರ ಜೊತೆ ಮಾಡಿದ ಚರ್ಚೆ ಪಾತಾಳ ಸೇರಿತು. ಸಿಕ್ಕ ಸಂದರ್ಭವನ್ನು ಯಶಸ್ವಿಯಾಗಿ ಉಪಯೋಗಿಸಿಕೊಳ್ಳದ ಗಾಂಧಿಯದ್ದು ವಿಫಲ ನಾಯಕತ್ವವೇ ಸರಿ. ಅವರಿಗೆ ದೇಶಕ್ಕಿಂತ ತನ್ನ ಸ್ವಾರ್ಥವೇ ಮಿಗಿಲಾಯಿತು. ಗಾಂಧಿಯ ಮನಸ್ಸಿನಲ್ಲೇನಿತ್ತೋ ಅರಿತವರ್ಯಾರು? ಆದರೆ ರಕ್ತಪಾತವಾದರೂ ಚಿಂತೆಯಿಲ್ಲ; ಭಾರತವನ್ನು ತುಂಡರಿಸಲೊಪ್ಪುವುದಿಲ್ಲ ಎಂದು ಘರ್ಜಿಸಿದ್ದ ಮನುಷ್ಯ ಅದನ್ನು ಕೃತಿಗಿಳಿಸಬೇಕಾಗಿ ಬಂದಾಗ ಅಂಡು ಸುಟ್ಟ ಬೆಕ್ಕಿನಂತೆ ಮೌನವಾದದ್ದೇಕೆ? ಯೋಚನೆ-ಮಾತು-ಕೃತಿ ಈ ಮೂರರಲ್ಲಿಯೂ ಏಕರೂಪತೆಯಿಲ್ಲದ ಮನುಷ್ಯ ಮಹಾತ್ಮನಾಗಲಾರ. ಗಾಂಧಿಯ ಮಾತು ಮತ್ತು ಕೃತಿಗಳಿಗೆಷ್ಟು ಅಂತರ!ಸನ್ನಿವೇಶಕ್ಕೆ ತಕ್ಕಂತೆ ವರ್ತನೆಯಿಲ್ಲದಿದ್ದ ಮೇಲೆ ಆತ ನಾಯಕನಾಗುವುದು ಹೇಗೆ? ಇತಿಹಾಸವನ್ನೇ ಸೃಷ್ಟಿ ಮಾಡಿದ್ದ ಒಂದು ಸನ್ನಿವೇಶದಲ್ಲಿ ಕಾಗದದ ಚೂರುಗಳ ಮೇಲೆ ತನ್ನ ವ್ರತದ ಬಗ್ಗೆ ವೃಥಾ ಕೊಚ್ಚಿಕೊಂಡ ಗಾಂಧಿ ಮಹಾತ್ಮ ಬಿಡಿ ನಾಯಕನೆನಿಸಿಕೊಳ್ಳಲೂ ಯೋಗ್ಯರಲ್ಲ. ದೇಶಕ್ಕೆ ಭದ್ರತೆ ಸಿಗಬೇಕಾದರೆ ಬ್ರಾಹ್ಮ-ಕ್ಷಾತ್ರಗಳು ಒಟ್ಟಾಗಬೇಕು. ಬ್ರಾಹ್ಮಣನೊಬ್ಬ ಕ್ಷತ್ರಿಯನಾಗಬಹುದು. ಕ್ಷತ್ರಿಯನೊಬ್ಬ ಬ್ರಾಹ್ಮಣನೂ ಆಗಬಹುದು. ಆದರೆ ಕ್ಷತ್ರಿಯನಾಗಿದ್ದುಕೊಂಡು ಸಂನ್ಯಾಸಿಯಾಗುವುದಿದೆಯಲ್ಲ, ಅದರಿಂದ ಹಾನಿ ಶತಃಸಿದ್ಧ! ಅರಸನಾಗಿದ್ದುಕೊಂಡೇ ತನ್ನ ಅಹಿಂಸೆಯೆಂಬ ಮತವನ್ನು ಪ್ರಜೆಗಳ ಮೇಲೆ ಹೇರಹೋದ ಅಶೋಕನಿಂದ ಮೌರ್ಯ ಸಾಮ್ರಾಜ್ಯ ಮಾತ್ರವಲ್ಲ, ಕ್ಷಾತ್ರವೇ ಹ್ರಾಸಗೊಂಡಿತು. ಅತ್ತ ಸಂತನೂ ಅಲ್ಲದ, ಇತ್ತ ಕ್ಷಾತ್ರ ಭಾವವನ್ನೂ ಉದ್ದೀಪಿಸಿಕೊಳ್ಳದ ಗಾಂಧಿಯಂತಹವರಿಗೆ ನಾಯಕತ್ವ ಕೊಟ್ಟು ಭಾರತ ಬಹಳಷ್ಟನ್ನು ಕಳಕೊಂಡಿತು.
(ಮುಂದುವರೆಯುವುದು…)
Discussion about this post