ವಾಷಿಂಗ್ಟನ್, ಆ.30: ಭಾರತ ಹಾಗೂ ಅಮೆರಿಕಾ ನಡುವಿನ ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಅಮೆರಿಕಾ ಪ್ರವಾಸದಲ್ಲಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ರಕ್ಷಣಾ ಸಾಮಗ್ರಿಗಳ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿರುವ ಪರಿಕ್ಕರ್, ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಆ್ಯಪ್ಟನ್ ಕಾರ್ಟರ್ ಅವರನ್ನು ಭೇಟಿ ಮಾಡಿದ್ದು,
ಉಭಯ ನಾಯಕರು ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಪರಿಕ್ಕರ್ ಹಾಗೂ ಕಾರ್ಟರ್ ಅವರು ಉಭಯ ದೇಶಗಳ ನಡುವಿನ ರಕ್ಷಣಾ ಪರಿಕರ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಮಹತ್ವದ ಒಪ್ಪಂದದಿಂದಾಗಿ ಭಾರತ ಮತ್ತು ಅಮೆರಿಕ ದೇಶಗಳ ರಕ್ಷಣಾ ಪರಿಕರಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಲು ನೆರವಾಗಲಿದೆ.
ಈ ವೇಳೆ ಮಾತನಾಡಿರುವ ಮನೋಹರ್ ಪರಿಕ್ಕರ್, ಆಧುನಿಕ ಸೇನಾ ತಂತ್ರಜ್ಞಾನಗಳ ಪರಸ್ಪರ ಹಂಚಿಕೊಳ್ಳುವಿಕೆ ಇಂದಿನ ತುರ್ತು ಅಗತ್ಯತೆಗಳಲ್ಲೊಂದು ಎಂದಿದ್ದಾರೆ.
ಇನ್ನು ಇದೇ ವೇಳೆ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತಕ್ಕೆ ರಕ್ಷಣಾ ತಂತ್ರಜ್ಞಾನಗಳ ಹಸ್ತಾಂತರಕ್ಕೆ ಅಮೆರಿಕ ಸಿದ್ಧವಿದ್ದು, ಅಮೆರಿಕದ ರಕ್ಷಣಾ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಸಿದ್ಧವಿರುವುದಾಗಿ ಉಭಯ ನಾಯಕರು ಸ್ಪಷ್ಟಪಡಿಸಿದ್ದಾರೆ. ಜಾಗತಿಕ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತ ಅತ್ಯಂತ ಮಹತ್ವದ ಪಾತ್ರವಹಿಸಲಿದ್ದು, ಭಾರತಕ್ಕೆ ಎಲ್ಲ ಅಗತ್ಯ ತಾಂತ್ರಿಕ ಹಾಗೂ ರಕ್ಷಣಾ ತಂತ್ರಜ್ಞಾನವನ್ನು ಒದಗಿಸಲು ಅಮೆರಿಕ ಸಿದ್ಧವಿದೆ ಎಂದು ಇದೇ ವೇಳೆ ಕಾರ್ಟರ್ ಭರವಸೆ ನೀಡಿದ್ದಾರೆ.
ಹಾಲಿ ಪ್ರವಾಸದ ವೇಳೆ ಮನೋಹರ್ ಪರಿಕ್ಕರ್ ಅವರು ಅಮೆರಿಕದ ಪ್ರಮುಖ ಯುದ್ಧ ವಿಮಾನ ತಯಾರಿಕಾ ಸಂಸ್ಥೆಗಳಿಗೆ ಭೇಟಿ ನೀಡಲಿದ್ದು, ಪ್ರಮುಖವಾಗಿ ಫಿಲಿಡೆಲ್ಫಿಯಾದಲ್ಲಿರುವ ಬೋಯಿಂಗ್ ವಿಮಾನ ತಯಾರಿಕಾ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅಲ್ಲಿ ತಯಾರಾಗುತ್ತಿರುವ ಸಿಹೆಚ್ 47ಎಫ್ ಚಿನೂಕ್ ಹೆವಿ ಲಿಫ್ಟ್ ಹೆಲಿಕಾಪ್ಟರ್ ಗಳ ತಯಾರಿಕೆಯನ್ನು ವೀಕ್ಷಿಸಲಿದ್ದಾರೆ. ಈ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ಭಾರತ ಈಗಾಗಲೇ ಖರೀದಿಸಿದ್ದು, 2019ರ ವೇಳೆಗೆ ಈ ಅತ್ಯಾಧುನಿ ಹೆಲಿಕಾಪ್ಟರ್ ಗಳು ಭಾರತೀಯ ಸೇನೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
Discussion about this post