Read - < 1 minute
ಮಂಡ್ಯ: ಸೆ:25: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಸಂಸದ ಪುಟ್ಟರಾಜು ತಿಳಿಸಿದ್ದಾರೆ.
ನಗರದ ಗಾಂಧಿಭವನದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಾದೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಅವರು ತಾವು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಪ್ರಕಟಿಸಿದರು.
ಮುಖ್ಯಮಂತ್ರಿಗಳು ಕಾವೇರಿ ಕೊಳ್ಳದ ರೈತರಿಗೆ ಪರಿಹಾರ ಕೊಡುವುದಾಗಿ ಹಾಗೂ ಕಾವೇರಿ ಗಲಭೆಯಲ್ಲಿ ಬಂಧಿತರಾಗಿರುವವರನ್ನು ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟಿರುವ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನಿರ್ಧಾರ ಕೈಬಿಟ್ಟಿದ್ದೇನೆ ಎಂದರು.
ಈ ವೇಳೆ ಮಾದೇಗೌಡರು ಮಾತನಾಡಿ, ಪುಟ್ಟರಾಜುವಿನಂತಹ ಅನುಭವಿ ರಾಜಕಾರಣಿಯನ್ನು ನಾನು ನೋಡಿಲ್ಲ. ಅವರು ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಇಂತಹ ನಾಯಕರು ಜನರ ಮಧ್ಯೆ ಇದ್ದು ಅವರಿಗಾಗಿ ಕೆಲಸ ಮಾಡಬೇಕು ಎಂದ ಅವರು, ರೈತರಿಗೆ ಪರಿಹಾರ ಕೊಡುವುದಾಗಿ ಹಾಗೂ ಬಂಧಿತರನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಕೊಟ್ಟ ಭರವಸೆ ಹಿನ್ನೆಲೆಯಲ್ಲಿ ರಾಜೀನಾಮೆ ಹಿಂಪಡೆಯುವಂತೆ ಪುಟ್ಟರಾಜು ಅವರಿಗೆ ನಾನು ಸಲಹೆ ನೀಡಿದೆ. ಅವರು ರಾಜೀನಾಮೆ ವಾಪಸ್ ಪಡೆದು ಜನಸೇವೆಯಲ್ಲಿ ಮುಂದುವರೆಯುವಂತೆ ಹೇಳಿದ್ದೇನೆ ಎಂದರು.
Discussion about this post