Read - 2 minutes
ಬೆಂಗಳೂರು, ಅ.4: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಪೊಲೀಸರು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಇಂದು ಬೆಳಗ್ಗೆ ಏಕಕಾಲದಲ್ಲಿ ಐವರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ವಿವಿಧ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿ ಕುಮಾರ್ ವೇಲು, ಬಿಬಿಎಂಪಿ ಡಿ ಗ್ರೂಪ್ ನೌಕರ ಡಿ.ಬಾಬು, ತುಮಕೂರಿನಲ್ಲಿ ಸಮಾಜ ಕಲ್ಯಾಣಾಧಿಕಾರಿ ಸುಬ್ರಹ್ಮಣ್ಯ, ಬೀದರ್ ನಲ್ಲಿ ಪಂಚಾಯತ್ ರಾಜ್ ಎಂಜಿನಿಯರ್ ಜಗನ್ನಾಥ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮ್ಯಾನೇಜರ್ ಸಿಕಂದರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.
ಬಿಬಿಎಂಪಿ ಆರೋಗ್ಯಾಧಿಕಾರಿ ಕುಮಾರ್ ವೇಲು ಅವರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿನ ಬಿಳೇಕಳ್ಳಿಯಲ್ಲಿ ಹೊಂದಿರುವ ಮನೆಯಲ್ಲಿ ಅಕ್ರಮ ಆಸ್ತಿಯ ಹುಡುಕಾಟ ನಡೆಸಿ ದಾಖಲಾತಿ ಮತ್ತು ಆಸ್ತಿಗಳ ವಿವರಗಳನ್ನು ಪರಿಶೀಲಿಸಿದ್ದಾರೆ.
ಅಲ್ಲದೆ, ಇವರು ಕರ್ತವ್ಯ ನಿರ್ವಹಿಸುತ್ತಿರುವ ಬಿಬಿಎಂಪಿ ಕಚೇರಿ, ಟೌನ್ ಹಾಲ್ ಕಚೇರಿಯಲ್ಲಿ ಅಕ್ರಮ ಆಸ್ತಿ ಬಗ್ಗೆ ವಿವರಗಳು, ದಾಖಲಾತಿ ಮತ್ತು ಇನ್ನಿತರ ಕಡತಗಳನ್ನು ಪರಿಶೀಲಿಸಿದರು.
ಬಿಬಿಎಂಪಿ ಡಿ ಗ್ರೂಪ್ ನೌಕರ ಡಿ.ಬಾಬು ಅವರು ನಗರದ ವಿಲಯಮ್ಸ್ ಟೌನ್ ನಲ್ಲಿ ಹೊಂದಿರುವ ಮನೆಯಲ್ಲಿ ಅಕ್ರಮ ಆಸ್ತಿಯ ಹುಡುಕಾಟ ನಡೆಸಿ ದಾಖಲಾತಿ ಮತ್ತು ಆಸ್ತಿ ವಿವರಗಳನ್ನು ಪರಿಶೀಲಿಸಿದರು.
ಅಲ್ಲದೆ, ನಂದಿನಿ ಲೇಔಟ್ ನಲ್ಲಿ ಇವರು ಹೊಂದಿರುವ ಮನೆಯಲ್ಲಿ ಅಕ್ರಮ ಆಸ್ತಿ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದರಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಬಿಬಿಎಂಪಿ ಕಚೇರಿಯಲ್ಲಿ ಅಕ್ರಮ ಆಸ್ತಿಯ ವಿವರಗಳು, ದಾಖಲಾತಿ ಹಾಗೂ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.
ತುಮಕೂರಿನ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ಅವರು ತುಮಕೂರಿನ ಮನೆಯಲ್ಲಿ ಅಕ್ರಮ ಆಸ್ತಿ ಹುಡುಕಾಟ ನಡೆಸಿ ದಾಖಲಾತಿ ಹಾಗೂ ಆಸ್ತಿ ವಿವರಗಳನ್ನು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಅಲ್ಲದೆ, ಇವರ ಸಹೋದರರು ವಾಸಿಸುತ್ತಿರುವ ಪಾವಗಡದ ಮನೆಯಲ್ಲಿ ಇವರು ಹೊಂದಿರುವ ಅಕ್ರಮ ಆಸ್ತಿಯ ಹುಡುಕಾಟ ಮತ್ತು ದಾಖಲಾತಿ ಪರಿಶೀಲನೆ ನಡೆಸಿದರಲ್ಲದೆ ದಾವಣಗೆರೆಯಲ್ಲಿರುವ ಇವರ ಪತ್ನಿಯ ತಂಗಿಯ ಮನೆಯಲ್ಲಿ ಅಕ್ರಮ ಆಸ್ತಿಯ ಹುಡುಕಾಟ ನಡೆಸಿ ದಾಖಲಾತಿ ಪರಿಶೀಲಿಸಿದರು.
ತುಮಕೂರಿನಲ್ಲಿರುವ ಇವರ ಕಚೇರಿಯಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಅಕ್ರಮ ಆಸ್ತಿಯ ದಾಖಲಾತಿಗಳ ವಿವರಗಳನ್ನು ಕಲೆ ಹಾಕಿದರು.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಗನ್ನಾಥ್ ಅವರು ಬೀದರ್ ಜಿಲ್ಲೆಯ ಅಕ್ಕಮಹಾದೇವಿ ಕಾಲೋನಿಯಲ್ಲಿ ಹೊಂದಿರುವ ವಾಸದ ಮನೆಯಲ್ಲಿ ಅಕ್ರಮ ಆಸ್ತಿಯ ಹುಡುಕಾಟ ನಡೆಸಿ ದಾಖಲಾತಿ ಮತ್ತು ಆಸ್ತಿ ವಿವರಗಳನ್ನು ಪರಿಶೀಲಿಸಿದರು.
ಇವರು ಬೀದರ್ ಜಿಲ್ಲೆಯ ಶಿವನಗರದ ಪಾಪನಾಶ ರಸ್ತೆಯಲ್ಲಿ ಹೊಂದಿರುವ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಹೊಂದಿರುವ ಅಕ್ರಮ ಆಸ್ತಿ ವಿವರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದರಲ್ಲದೆ ಬೀದರ್ ಜಿಲ್ಲೆಯ ನೌಬಾದ್ನಲ್ಲಿ ಹೊಂದಿರುವ ನೀರು ಶುದ್ಧೀಕರಣ ಘಟಕದ ಸಂಕೀರ್ಣದಲ್ಲಿ ಹೊಂದಿರುವ ಅಕ್ರಮ ಆಸ್ತಿಗಳ ದಾಖಲಾತಿಗಳನ್ನು ಪರಿಶೀಲಿಸಿದರಲ್ಲದೆ, ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯಲ್ಲಿಯೂ ಸಹ ಕಡತಗಳನ್ನು ಪರಿಶೀಲಿಸಿದರು.
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ಮ್ಯಾನೇಜರ್ ಎಸ್.ಎಲ್. ಸಿಕಂದರ್ ಅವರು ಬೆಂಗಳೂರಿನ ರೆಹಮತ್ ನಗರದಲ್ಲಿ ಹೊಂದಿರುವ ವಾಸದ ಮನೆಯಲ್ಲಿ ಅಕ್ರಮ ಆಸ್ತಿಯ ಹುಡುಕಾಟ ನಡೆಸಿದರಲ್ಲದೆ ಇವರು ಕರ್ತವ್ಯ ನಿರ್ವಹಿಸುತ್ತಿರುವ ವಿಶ್ವೇಶ್ವರಯ್ಯ ಕಟ್ಟಡದಲ್ಲಿನ ಕಚೇರಿಯಲ್ಲಿ ಇವರು ಹೊಂದಿರುವ ಅಕ್ರಮ ಆಸ್ತಿಯ ವಿವರಗಳು ಹಾಗೂ ದಾಖಲಾತಿ ಮತ್ತು ಕಡತಗಳನ್ನು ಪರಿಶೀಲಿಸಿದರು.
Discussion about this post